ಮಡಿಕೇರಿ: (ನ್ಯೂಸ್ ಮಲ್ನಾಡ್ ವರದಿ) ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯೂಡಿ) ಕಾರ್ಯಪಾಲಕ ಎಂಜಿನಿಯರ್ ಕಚೇರಿಯಲ್ಲಿ ತಮ್ಮದೇ ಕಚೇರಿಯ ಸಿಬ್ಬಂದಿಯಿಂದ ಲಂಚ ಪಡೆದ ಆರೋಪದ ಮೇರೆಗೆ ಕಚೇರಿಯ ಮ್ಯಾನೇಜರ್ ವೈದ್ಯನಾಥ್ ಹಾಗೂ ಎಸ್ಡಿಎ ಸೋಮಣ್ಣ ಅವರನ್ನು ಲೋಕಾಯುಕ್ತ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಇದೇ ಕಚೇರಿಯಲ್ಲಿ ಗ್ರೂಪ್ ‘ಡಿ’ ನೌಕರನಾಗಿದ್ದ ಶರತ್ ಎಂಬಾತ ಫೆಬ್ರುವರಿಯಲ್ಲಿ ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದಿದ್ದು, ಬಳಿಕ ಅಮಾನತುಗೊಂಡಿದ್ದರು. ನಿಯಮಾನುಸಾರ ದೊರೆಯಬೇಕಿದ್ದ ಅರ್ಧ ಸಂಬಳ ಬಿಡುಗಡೆ ಮಾಡಲು ಮ್ಯಾನೇಜರ್ ವೈದ್ಯನಾಥ್ ₹5 ಸಾವಿರ ಹಾಗೂ ಎಸ್ಡಿಎ ಸೋಮಣ್ಣ ₹3 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಲಾಗಿದೆ.

ಈ ಪೈಕಿ ವೈದ್ಯನಾಥ್ ₹3 ಸಾವಿರ ಹಾಗೂ ಸೋಮಣ್ಣ ₹2 ಸಾವಿರವನ್ನು ಈಗಾಗಲೇ ಪಡೆದುಕೊಂಡಿದ್ದರು ಎನ್ನಲಾಗಿದೆ. ಈ ಸಂಬಂಧ ಶರತ್ ಲೋಕಾಯುಕ್ತಕ್ಕೆ ದೂರು ನೀಡಿದ್ದರು.
ಉಳಿದ ₹2 ಸಾವಿರ ಲಂಚ ಸ್ವೀಕರಿಸುತ್ತಿದ್ದ ವೇಳೆ ವೈದ್ಯನಾಥ್ ಅವರನ್ನು ಲೋಕಾಯುಕ್ತ ಅಧಿಕಾರಿಗಳು ಬಂಧಿಸಿದ್ದಾರೆ. ರಜೆ ಮೇಲೆ ತೆರಳಿದ್ದ ಸೋಮಣ್ಣ ಈಗಾಗಲೇ ₹2 ಸಾವಿರ ಲಂಚ ಪಡೆದ ಆರೋಪದ ಮೇರೆಗೆ ಅವರನ್ನು ಕೂಡ ಬಂಧಿಸಲಾಗಿದೆ ಎಂದು ಲೋಕಾಯುಕ್ತ ಎಸ್ಪಿ ಉದೇಶ್ ತಿಳಿಸಿದ್ದಾರೆ.
ಡಿವೈಎಸ್ಪಿ ದಿನಕರಶೆಟ್ಟಿ ಹಾಗೂ ಇನ್ಸ್ಪೆಕ್ಟರ್ ವೀಣಾ ನಾಯಕ್ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ.














