ಡೆಡ್ಲಿ ಆಕ್ಸಿಡೆಂಟ್, ಕೊಲೆ, ಸೂಸೈಡ್… ಒಂದೇ ಲಿಂಕ್ ನಲ್ಲಿ ಎಲ್ಲಾ ಸುದ್ದಿ ಓದಿಬಿಡಿ👇

ಚಿಕ್ಕಮಗಳೂರು ಜಿಲ್ಲಾ ಸುದ್ದಿ:

ಚಾರ್ಮಾಡಿ ಘಾಟಿಯಲ್ಲಿ ಮರ ಉರುಳಿ ಬಿದ್ದು ಸಂಚಾರ ವ್ಯತ್ಯಯ
ಚಾರ್ಮಾಡಿ ಘಾಟಿಯ 10ನೇ ತಿರುವಿನ ಸಮೀಪ ಮರವೊಂದು ರಸ್ತೆಗೆ ಉರುಳಿ ಸುಮಾರು ಒಂದು ತಾಸು ಕಾಲ ಸಂಚಾರ ವ್ಯತ್ಯಯ, ಟ್ರಾಫಿಕ್ ಜಾಮ್ ಉಂಟಾದ ಘಟನೆ ಸೋಮವಾರ ರಾತ್ರಿ ನಡೆದಿದೆ. ಸಂಜೆ 7 ಗಂಟೆಗೆ ಸುಮಾರಿಗೆ ಮರ ಉರುಳಿ ಬಿದ್ದಿದ್ದು ರಸ್ತೆ ಸಂಪೂರ್ಣ ಬ್ಲಾಕ್ ಆಗಿ ಇಕ್ಕೆಲಗಳಲ್ಲೂ ಒಂದೂವರೆ ತಾಸಿನಷ್ಟು ಕಾಲ ವಾಹನಗಳು ಸಾಲುಗಟ್ಟಿ ನಿಂತವು. ಜೋರಾಗಿ ಸುರಿಯುತ್ತಿದ್ದ ಮಳೆ, ಮಂಜುಕವಿದ ವಾತಾವರಣ, ಬೆಳಕಿನ ಅಭಾವ ತ್ವರಿತವಾಗಿ ಮರ ತೆರವುಗೊಳಿಸಲು ಅಡ್ಡಿಯಾಯಿತು. ಉಪವಲಯ ಅರಣ್ಯಾಧಿಕಾರಿ ರಂಜಿತ್, ಸಿಬ್ಬಂದಿಗಳಾದ ಗೋಪಾಲ, ಮನೋಹರ್, ಇಸ್ಮಾಯಿಲ್, ವಾಹನ ಸವಾರರು ಹಾಗೂ ಮತ್ತಿತರರು ಮರ ತೆರವಿಗೆ ಸಹಕರಿಸಿದರು. ಸೋಮವಾರ ಬೆಳಗಿನ ಜಾವ ಎರಡನೇ ತಿರುವಿನ ಬಳಿ ಮರ ರಸ್ತೆಗೆ ಬಾಗಿ ಸಂಚಾರಕ್ಕೆ ಅಡ್ಡಿ ಉಂಟಾಗಿತ್ತು. ಘಾಟಿ ಪ್ರದೇಶದಲ್ಲಿ ನೂರಾರು ಅಪಾಯಕಾರಿ ಮರಗಳಿದ್ದು, ಜೋರಾದ ಮಳೆ ವೇಳೆ ರಸ್ತೆಗೆ ಉರುಳಿ ಸಂಚಾರಕ್ಕೆ ಸಮಸ್ತೆಯಾಗುತ್ತಿರುವುದು ಸರ್ವೇಸಾಮಾನ್ಯವಾಗಿದೆ.

ದತ್ತಪೀಠ ಬಳಿ ಅನಧಿಕೃತ ಗೋರಿಗಳ ವಿವಾದ: ಉತ್ಪನನಕ್ಕೆ ಹಿಂದೂ ಸಂಘಟನೆಗಳ ಆಗ್ರಹ
ಚಿಕ್ಕಮಗಳೂರು: ಶ್ರೀ ಗುರು ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾ ಸಮೀಪದ ಮಾಣಿಕ್ಯಧಾರದಲ್ಲಿ ಅನಧಿಕೃತ ಗೋರಿಗಳ ನಿರ್ಮಾಣ ಹಾಗೂ ಹಸಿರು ಚಾದರ ಹೊದಿಸಿ ಹೊಸ ಆಚರಣೆ ನಡೆಸಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ವಿವಾದ ಉಂಟಾಗಿದೆ. ಹಿಂದೂ ಪರ ಸಂಘಟನೆಗಳು ಸ್ಥಳವನ್ನು ಜಿಪಿಎಸ್ ತಂತ್ರಜ್ಞಾನ ಬಳಸಿ ಸರ್ವೇ ನಡೆಸಿ ಪರಿಶೀಲಿಸುವಂತೆ ಹಾಗೂ ಹೊಸ ಆಚರಣೆ ನಡೆಸುತ್ತಿರುವವರ ವಿರುದ್ಧ ಪ್ರಕರಣ ದಾಖಲಿಸುವಂತೆ ಆಗ್ರಹಿಸಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿವೆ. ವಿವಾದದ ಹಿನ್ನೆಲೆ ಮುಜರಾಯಿ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸಂಘಟನೆಗಳು ಕ್ರಮ ಕೈಗೊಳ್ಳುವಂತೆ ಪ್ರತಿಭಟನೆ ನಡೆಸಿವೆ.

ನರಸಿಂಹರಾಜಪುರ ತಾಲ್ಲೂಕು ಕಚೇರಿ ಸುತ್ತಲಿನ ಪ್ರದೇಶ ಸ್ವಚ್ಛಗೊಳಿಸಿ ಎಂದು ಆಗ್ರಹ
ನರಸಿಂಹರಾಜಪುರ: ಭದ್ರಾ ಹಿನ್ನೀರು ಪ್ರದೇಶದಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳುವ ಮುನ್ನ ತಾಲ್ಲೂಕು ಕಚೇರಿ ಸುತ್ತಮುತ್ತಲಿನ ಪ್ರದೇಶದಲ್ಲಿರುವ ಗಿಡಗಂಟಿ ಹಾಗೂ ಕಸದ ರಾಶಿಯನ್ನು ತೆರವುಗೊಳಿಸಬೇಕು’ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ನಗರ ಘಟಕದ ಅಧ್ಯಕ್ಷ ಫಿಕಪ್ ಚಂದ್ರು, ರಾಜ್ಯ ಸಮಿತಿ ಸದಸ್ಯ ರಾಜೇಶ್ ಹಾಗೂ ತಾಲ್ಲೂಕು ಸಂಘಟನಾ ಸಂಚಾಲಕ ಕೆ.ಎನ್. ರಂಗನಾಥ್ ಒತ್ತಾಯಿಸಿದ್ದಾರೆ. ತಾಲ್ಲೂಕು ಕಚೇರಿ ಆವರಣ ಹಾಗೂ ಕಟ್ಟಡದ ಹಿಂಭಾಗದ ಟವರ್ ಸಮೀಪ ಗಿಡಗಂಟಿಗಳು ಬೆಳೆದು ಕಸದ ರಾಶಿ ಸಂಗ್ರಹವಾಗಿದ್ದು, ಅದನ್ನು ಸ್ವಚ್ಛಗೊಳಿಸುವತ್ತ ತಾಲ್ಲೂಕು ಆಡಳಿತ ಮೊದಲ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಜನವಸತಿ ಇಲ್ಲದ ಪ್ರದೇಶಗಳಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳುವ ಮೊದಲು, ಸರ್ಕಾರಿ ಕಚೇರಿಗಳ ಆವರಣ ಹಾಗೂ ಜನವಸತಿ ಪ್ರದೇಶಗಳಲ್ಲಿ ಸ್ವಚ್ಛತೆ ಕಾಪಾಡಲು ತಾಲ್ಲೂಕು ಆಡಳಿತ ಆದ್ಯತೆ ನೀಡಬೇಕು ಎಂದು ಅವರು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

ಆಗುಂಬೆ ಘಾಟ್‌: ಖಾಸಗಿ ಬಸ್‌ಗೆ ಡಿಕ್ಕಿ ಹೊಡೆದ ಕಾರು
ಆಗುಂಬೆ: ಘಾಟ್‌ನಲ್ಲಿ ಮಂಗಳವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ ಕಾರೊಂದು, ಉಡುಪಿಯಿಂದ ಶೃಂಗೇರಿ ಕಡೆಗೆ ಬರುತ್ತಿದ್ದ ಖಾಸಗಿ ಬಸ್‌ಗೆ ಡಿಕ್ಕಿ ಹೊಡೆದ ಘಟನೆ ನಡೆದಿದೆ. ಲಭ್ಯವಾದ ಮಾಹಿತಿಯ ಪ್ರಕಾರ, ಕಾರು ಸಂಪೂರ್ಣವಾಗಿ ರಾಂಗ್‌ ಸೈಡ್‌ ಗೆ ಬಂದಿದೆ. ಇದರಿಂದ ಎದುರಿನಿಂದ ಬರುತ್ತಿದ್ದ ಖಾಸಗಿ ಬಸ್‌ಗೆ ಮುಖಾಮುಖಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರಿನ ಮುಂಭಾಗ ಜಖಂಗೊಂಡಿದೆ.

ಇಂಧನ ಸಚಿವ ಕೆ.ಜೆ. ಜಾರ್ಜ್ ಚಿಕ್ಕಮಗಳೂರು ಜಿಲ್ಲಾ ಪ್ರವಾಸ
ಚಿಕ್ಕಮಗಳೂರು: ಇಂಧನ ಹಾಗೂ ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ ಅವರು ಜೂನ್ 30 ಮತ್ತು ಜುಲೈ 1ರಂದು ಚಿಕ್ಕಮಗಳೂರು ಜಿಲ್ಲೆಗೆ ಭೇಟಿ ನೀಡಲಿದ್ದಾರೆ. ಜೂನ್ 30ರಂದು ಸಂಜೆ ಜಿಲ್ಲೆಗೆ ಆಗಮಿಸಿ ವಾಸ್ತವ್ಯ ಹೂಡುವ ಅವರು, ಜುಲೈ 1ರಂದು ಮಧ್ಯಾಹ್ನ 2.45ಕ್ಕೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ಪ್ರಕೃತಿ ವಿಕೋಪ ನಿರ್ವಹಣೆಯ ಸಿದ್ಧತೆ ಕುರಿತು ಪ್ರಗತಿ ಪರಿಶೀಲನಾ ಸಭೆ ನಡೆಸಲಿದ್ದಾರೆ. ಸಭೆಯ ಬಳಿಕ ಸಂಜೆ 4.30ಕ್ಕೆ ಚಿಕ್ಕಮಗಳೂರಿನ ಐಡಿಎಸ್‌ಜಿ ಕಾಲೇಜಿನ ಹೆಲಿಪ್ಯಾಡ್‌ನಿಂದ ಹೆಲಿಕಾಪ್ಟರ್ ಮೂಲಕ ಬೆಂಗಳೂರಿಗೆ ತೆರಳಲಿದ್ದಾರೆ ಎಂದು ಸಚಿವರ ಆಪ್ತ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಚಿಕ್ಕಮಗಳೂರಿನಲ್ಲಿ ಅನಧಿಕೃತ ಬೈಕ್ ಟ್ಯಾಕ್ಸಿ ವಿರುದ್ಧ ಆಟೊ ಚಾಲಕರ ಪ್ರತಿಭಟನೆ
ಚಿಕ್ಕಮಗಳೂರು: ನಗರದಲ್ಲಿ ಅನಧಿಕೃತ ಬೈಕ್ ಟ್ಯಾಕ್ಸಿಗಳ ಹಾವಳಿ ತಡೆಗಟ್ಟುವಂತೆ ಆಗ್ರಹಿಸಿ ಆಟೊ ಚಾಲಕರು ಹಾಗೂ ಮಾಲೀಕರು ಸೋಮವಾರ ಪ್ರತಿಭಟನೆ ನಡೆಸಿದರು. ನೂರಾರು ಆಟೊ ಚಾಲಕರು, ಮಾಲೀಕರು, ವಾಹನ ಬಿಡಿಭಾಗಗಳ ಅಂಗಡಿ ಮಾಲೀಕರು ಮತ್ತು ಮೆಕಾನಿಕ್‌ಗಳು ಹನುಮಂತಪ್ಪ ವೃತ್ತದಿಂದ ಎಂ.ಜಿ. ರಸ್ತೆ ಮೂಲಕ ಮೆರವಣಿಗೆ ನಡೆಸಿ ಆಜಾದ್ ಪಾರ್ಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಬೈಕ್ ಟ್ಯಾಕ್ಸಿಗಳಿಂದ ಆಟೊ ಚಾಲಕರಿಗೆ ಬಾಡಿಗೆ ಸಿಗದೆ ಜೀವನೋಪಾಯಕ್ಕೆ ತೊಂದರೆಯಾಗುತ್ತಿದೆ. ಬಿಳಿ ನಂಬರ್ ಪ್ಲೇಟ್ ಹೊಂದಿರುವ ದ್ವಿಚಕ್ರ ವಾಹನಗಳನ್ನು ಅನಧಿಕೃತವಾಗಿ ಬಾಡಿಗೆ ಸೇವೆಗೆ ಬಳಸುತ್ತಿರುವುದರಿಂದ ಕಾನೂನು ಕ್ರಮ ಕೈಗೊಂಡು ಬೈಕ್ ಟ್ಯಾಕ್ಸಿಗಳಿಗೆ ಕಡಿವಾಣ ಹಾಕಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಪೌತಿ ಖಾತೆ ಮಾಡಿಸಿಕೊಳ್ಳಲು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಕರೆ
ಕಡಬ (ಗುಬ್ಬಿ): ರೈತರು ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ಕಂದಾಯ ಇಲಾಖೆ ಪೌತಿ ಖಾತೆ ಆಂದೋಲನವನ್ನು ನಿರಂತರವಾಗಿ ನಡೆಸುತ್ತಿದೆ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಹೇಳಿದರು. ಕೊಪ್ಪ ಗ್ರಾಮ ಪಂಚಾಯಿತಿಯಲ್ಲಿ ನಡೆದ ಪೌತಿ ಖಾತೆ ಆಂದೋಲನ ಪರಿಶೀಲಿಸಿದ ಅವರು, ಪೂರ್ವಜರ ಹೆಸರಿನಲ್ಲಿರುವ ಖಾತೆಗಳನ್ನು ಸಾರ್ವಜನಿಕರು ಕಡ್ಡಾಯವಾಗಿ ತಮ್ಮ ಹೆಸರಿಗೆ ವರ್ಗಾಯಿಸಿಕೊಳ್ಳಬೇಕು. ಇಲ್ಲವಾದರೆ ಮಧ್ಯವರ್ತಿಗಳಿಂದ ದಾಖಲೆ ದುರ್ಬಳಕೆಯಾಗಿ ಜಮೀನು ಕಬಳಿಸುವ ಸಾಧ್ಯತೆ ಇದೆ ಎಂದು ಎಚ್ಚರಿಸಿದರು. ಗ್ರಾಮಸ್ಥರು ವಿದ್ಯುತ್ ಹಾಗೂ ಕುಡಿಯುವ ನೀರಿನ ಸಮಸ್ಯೆಗಳನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದು, ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆ ಪರಿಹರಿಸುವಂತೆ ಅವರು ಸೂಚಿಸಿದರು.

ಜಿಲ್ಲೆಯಲ್ಲಿ ಸಾಧಾರಣ ಮಳೆ; ಮಲೆನಾಡಿನಲ್ಲಿ ಮುಂಗಾರು ಚುರುಕು
ಚಿಕ್ಕಮಗಳೂರು: ಜಿಲ್ಲೆಯಲ್ಲಿ ಸೋಮವಾರ ಅಲ್ಲಲ್ಲಿ ಸಾಧಾರಣ ಮಳೆಯಾಗಿದ್ದು, ಮಲೆನಾಡು ಭಾಗದಲ್ಲಿ ಮುಂಗಾರು ಚುರುಕುಗೊಂಡಿದೆ. ಕೊಪ್ಪ, ಶೃಂಗೇರಿ, ನರಸಿಂಹರಾಜಪುರ, ಕಳಸ ಹಾಗೂ ಮೂಡಿಗೆರೆ ತಾಲ್ಲೂಕುಗಳಲ್ಲಿ ಮಳೆಯಾಗಿದ್ದು, ಶೃಂಗೇರಿಯಲ್ಲಿ ತುಂಗಾ ನದಿಯ ನೀರಿನ ಮಟ್ಟ ಏರಿಕೆಯಾಗಿದೆ. ಚಿಕ್ಕಮಗಳೂರು ತಾಲ್ಲೂಕಿನಲ್ಲೂ ಸಂಜೆ ಬಳಿಕ ಜಡಿ ಮಳೆ ಸುರಿದು ತಂಪಾದ ವಾತಾವರಣ ನಿರ್ಮಾಣವಾಯಿತು. ಕೊಪ್ಪ ತಾಲ್ಲೂಕಿನಲ್ಲಿ ಕಳೆದ ಎರಡು ದಿನಗಳಿಂದ ಮಳೆ ಮುಂದುವರಿದಿದ್ದು, ಆದರೆ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಮಳೆಯ ಪ್ರಮಾಣ ಕಡಿಮೆಯಿರುವುದು ರೈತರಲ್ಲಿ ಆತಂಕ ಮೂಡಿಸಿದೆ.

ಕಳಸದಲ್ಲಿ ಅಪರೂಪದ ಪುನುಗು ಬೆಕ್ಕು ರಕ್ಷಣೆ
ಕಳಸ: ಚಿಕ್ಕಮಗಳೂರು ಜಿಲ್ಲೆಯ ಕಳಸ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ ಅಪರೂಪದ ಪುನುಗು (ಸಿವೆಲ್ ಕ್ಯಾಟ್) ಬೆಕ್ಕೊಂದು ಕಾಣಿಸಿಕೊಂಡಿದ್ದು, ಅರಣ್ಯ ಇಲಾಖೆ ಹಾಗೂ ವನ್ಯಜೀವಿ ರಕ್ಷಕ ಸ್ನೇಕ್ ರಿಜ್ವಾನ್ ಅವರ ತಂಡ ಸುರಕ್ಷಿತವಾಗಿ ರಕ್ಷಿಸಿದೆ. ಬೀದಿ ನಾಯಿಗಳಿಂದ ಬೆನ್ನಟ್ಟಲ್ಪಟ್ಟು ಆಸ್ಪತ್ರೆ ಆವರಣದಲ್ಲಿ ಆಶ್ರಯ ಪಡೆದಿದ್ದ ಪುನುಗು ಬೆಕ್ಕಿಗೆ ಸಣ್ಣಪುಟ್ಟ ಗಾಯಗಳಾಗಿದ್ದವು. ಚಿಕಿತ್ಸೆ ನೀಡಿದ ಬಳಿಕ ಅರಣ್ಯ ಇಲಾಖೆಯ ಸಿಬ್ಬಂದಿ ಅದನ್ನು ಸುರಕ್ಷಿತವಾಗಿ ಅದರ ನೈಸರ್ಗಿಕ ವಾಸಸ್ಥಾನವಾದ ದಟ್ಟ ಅರಣ್ಯಕ್ಕೆ ಬಿಟ್ಟರು.

ಜಿಲ್ಲೆಯಲ್ಲಿ ಗಾಂಜಾ ಸೇವಿಸಿದ್ದ ನಾಲ್ವರ ಬಂಧನ
ಚಿಕ್ಕಮಗಳೂರು: ಜಿಲ್ಲೆಯ ವಿವಿಧೆಡೆ ಗಾಂಜಾ ಸೇವಿಸಿ ಸಾರ್ವಜನಿಕರಿಗೆ ಉಪಟಳ ನೀಡುತ್ತಿದ್ದ ಹಾಗೂ ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಬೀರೂರು, ಅಜ್ಜಂಪುರ ಮತ್ತು ಕಡೂರು ಠಾಣೆ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಶಾಹಿದ್ ಸಿ (20), ಕೋಟೇಪ್ಪ (50), ಸಾಗರ್ ಎಚ್.ಎಸ್. (20) ಹಾಗೂ ಫಾಜಿಲ್ (28) ಅವರನ್ನು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದರು. ಪರೀಕ್ಷೆಯಲ್ಲಿ ಗಾಂಜಾ ಸೇವಿಸಿರುವುದು ದೃಢಪಟ್ಟಿದ್ದು, ಸಂಬಂಧಿತ ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.

ಕಡೂರಿನಲ್ಲಿ ಬೈಕ್ ಡಿಕ್ಕಿ; ಹಮಾಲಿ ಕಾರ್ಮಿಕ ಗಂಭೀರ ಗಾಯ
ಕಡೂರು: ಕಡೂರು–ಚಿಕ್ಕಮಗಳೂರು ರಾಷ್ಟ್ರೀಯ ಹೆದ್ದಾರಿ 173ರ ಹೆರಿಟೇಜ್ ಕಲ್ಯಾಣ ಮಂಟಪದ ಬಳಿ ರಸ್ತೆ ಬದಿಯಲ್ಲಿ ನಡೆದು ಹೋಗುತ್ತಿದ್ದ ಹಮಾಲಿ ಕಾರ್ಮಿಕ ಗಂಗಾಧರಪ್ಪ (60) ಅವರಿಗೆ ಬೈಕ್ ಡಿಕ್ಕಿ ಹೊಡೆದು ಗಂಭೀರ ಗಾಯಗಳಾಗಿವೆ. ಸೀಮೆಂಟ್ ಅನ್‌ಲೋಡ್ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಗಾಯಾಳುವನ್ನು ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಗೆ ದಾಖಲಿಸಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಈ ಸಂಬಂಧ ಗಂಗಾಧರಪ್ಪ ಅವರ ಪತ್ನಿ ಯಶೋದಮ್ಮ ನೀಡಿದ ದೂರಿನ ಮೇರೆಗೆ ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊಪ್ಪದಲ್ಲಿ ರಸ್ತೆ ಮಧ್ಯೆ ವಿದ್ಯುತ್ ಕಂಬ ಕುಸಿತ; ಮೆಸ್ಕಾಂ ವಿರುದ್ಧ ಆಕ್ರೋಶ
ಕೊಪ್ಪ: ಚಿಕ್ಕಮಗಳೂರು ಜಿಲ್ಲೆಯ ತುಮಾಖಾನೆ ಗ್ರಾಮದಲ್ಲಿ ಮೆಸ್ಕಾಂನ ಹೈ-ವೋಲ್ಟೇಜ್ ವಿದ್ಯುತ್ ಕಂಬ ರಸ್ತೆ ಮಧ್ಯೆ ಮುರಿದು ಬಿದ್ದ ಘಟನೆ ನಡೆದಿದೆ. ಕಂಬವನ್ನು ಅವೈಜ್ಞಾನಿಕವಾಗಿ ಅಳವಡಿಸಿರುವುದೇ ಕುಸಿತಕ್ಕೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದು, ಈ ಬಗ್ಗೆ ಮೊದಲೇ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಕ್ರಮ ಕೈಗೊಳ್ಳಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಘಟನೆಯ ವೇಳೆ ರಸ್ತೆ ಖಾಲಿ ಇದ್ದುದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ನಿರ್ಲಕ್ಷ್ಯ ತೋರಿದ ಗುತ್ತಿಗೆದಾರರು ಹಾಗೂ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಕಡೂರಿನಲ್ಲಿ ಎರಡು ಕಾರುಗಳ ನಡುವೆ ಭೀಕರ ಅಪಘಾತ; ಮೂವರಿಗೆ ಗಾಯ
ಕಡೂರು: ತಾಲೂಕಿನ ಸಖರಾಯಪಟ್ಟಣ ಸಮೀಪದ ಹಳೇಹಟ್ಟಿ ಕ್ರಾಸ್ ಬಳಿ ಎರಡು ಕಾರುಗಳ ನಡುವೆ ಭೀಕರ ಅಪಘಾತ ಸಂಭವಿಸಿ ಮೂವರು ಗಾಯಗೊಂಡಿದ್ದಾರೆ. ಮಲ್ಲೇನಹಳ್ಳಿ ದೇವಿರಮ್ಮ ದೇವಸ್ಥಾನಕ್ಕೆ ತೆರಳುತ್ತಿದ್ದ ಮಹೀಂದ್ರ ಥಾರ್ ಕಾರಿಗೆ ಎದುರುಗಡೆಯಿಂದ ಬಂದ ಮತ್ತೊಂದು ಕಾರು ಡಿಕ್ಕಿ ಹೊಡೆದ ಪರಿಣಾಮ ಎರಡೂ ವಾಹನಗಳು ಜಖಂಗೊಂಡಿವೆ. ಥಾರ್ ಕಾರಿನಲ್ಲಿದ್ದವರು ಅಪಾಯದಿಂದ ಪಾರಾಗಿದ್ದು, ಮತ್ತೊಂದು ಕಾರಿನಲ್ಲಿದ್ದ ಮೂವರಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಚಿಕ್ಕಮಗಳೂರು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಎಐಟಿ ವೃತ್ತದಲ್ಲಿ ಭೀಕರ ಅಪಘಾತ; ಯುವತಿ ಐಸಿಯುನಲ್ಲಿ ಚಿಕಿತ್ಸೆ
ಚಿಕ್ಕಮಗಳೂರು: ನಗರದ ಎಐಟಿ ವೃತ್ತದ ಬಳಿ ಕಾರು ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಯುವತಿ ಮೆಹಬೂಬ್ ಬಿ ಅಲಿಯಾಸ್ ಸಿಬ್ರಾನ್ ಗಂಭೀರವಾಗಿ ಗಾಯಗೊಂಡಿದ್ದು, ಶಿವಮೊಗ್ಗದ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಪ್ಪು ದಿಕ್ಕಿನಲ್ಲಿ ವೇಗವಾಗಿ ಬಂದ ಕಾರು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಯುವತಿಗೆ ಯಕೃತ್ತಿಗೆ ಗಂಭೀರ ಗಾಯವಾಗಿ ಆಂತರಿಕ ರಕ್ತಸ್ರಾವ ಉಂಟಾಗಿದೆ. ಅಪಘಾತದ ಬಳಿಕ ಕಾರು ಚಾಲಕಿ ಸ್ಥಳದಿಂದ ತೆರಳಲು ಯತ್ನಿಸಿದ್ದು, ಸಾರ್ವಜನಿಕರು ಆಕೆಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಸಂಬಂಧ ಚಿಕ್ಕಮಗಳೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಿಗದಾಳು ಬಳಿ ಗೂಡ್ಸ್ ವಾಹನ ಪಲ್ಟಿ; ಚಾಲಕ ಪಾರು
ಕೊಪ್ಪ: ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಸಿಗದಾಳು ಸಮೀಪ ಚಾಲಕನ ನಿಯಂತ್ರಣ ತಪ್ಪಿ ಗೂಡ್ಸ್ ವಾಹನ ಪಲ್ಟಿಯಾಗಿದೆ. ದಾವಣಗೆರೆಯಿಂದ ಕಮ್ಮರಡಿ ಕಡೆಗೆ ಕೋರಿಯರ್ ಸಾಮಗ್ರಿಗಳನ್ನು ಸಾಗಿಸುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದ್ದು, ವಾಹನದಲ್ಲಿದ್ದವರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಹರಿಹರಪುರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಕ್ರೇನ್ ಸಹಾಯದಿಂದ ವಾಹನವನ್ನು ತೆರವುಗೊಳಿಸಿದ್ದಾರೆ. ಸಿಗದಾಳು ಭಾಗದಲ್ಲಿ ತಿರುವುಗಳಿರುವ ರಸ್ತೆಯಲ್ಲಿ ವಾಹನ ಸವಾರರು ಎಚ್ಚರಿಕೆಯಿಂದ ಸಂಚರಿಸುವಂತೆ ಪೊಲೀಸರು ಸೂಚಿಸಿದ್ದಾರೆ.

ಅಂದರ್-ಬಾಹರ್ ಜೂಜಾಟ; ಐವರ ಬಂಧನ
ಚಿಕ್ಕಮಗಳೂರು: ನಗರದ ಮಾಗಡಿ ಮುಖ್ಯರಸ್ತೆ ಸಮೀಪ ತಡರಾತ್ರಿ ಅಕ್ರಮವಾಗಿ ‘ಅಂದರ್-ಬಾಹರ್’ ಇಸ್ಪೀಟು ಜೂಜಾಟ ನಡೆಸುತ್ತಿದ್ದ ಐವರನ್ನು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಗುಪ್ತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಜಯಣ್ಣ, ಪುನೀತ್, ಲಿಖಿತ್, ರಾಕೇಶ್ ಹಾಗೂ ಬಸವಲಿಂಗೇಗೌಡ ಅವರನ್ನು ವಶಕ್ಕೆ ಪಡೆದು, ಸ್ಥಳದಿಂದ 52 ಇಸ್ಪೀಟು ಎಲೆಗಳು ಹಾಗೂ ₹31,920 ನಗದು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಕರ್ನಾಟಕ ಜೂಜಾಟ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಶಿವಮೊಗ್ಗ ಜಿಲ್ಲಾ ಸುದ್ದಿ:

ನಂಬರ್ ಪ್ಲೇಟ್ ಇಲ್ಲದ 74 ಬೈಕ್‌ಗಳ ವಶ
ಶಿವಮೊಗ್ಗ: ನಗರದಲ್ಲಿ ನಂಬರ್ ಪ್ಲೇಟ್ ಇಲ್ಲದೆ ಅಥವಾ ನಿಯಮಬಾಹಿರ ನಂಬರ್ ಪ್ಲೇಟ್ ಅಳವಡಿಸಿಕೊಂಡು ಸಂಚರಿಸುತ್ತಿದ್ದ 74 ದ್ವಿಚಕ್ರ ವಾಹನಗಳನ್ನು ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದಿದ್ದಾರೆ. ಪೂರ್ವ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ತಪಾಸಣೆ ವೇಳೆ ವಾಹನಗಳಿಗೆ ದಂಡ ವಿಧಿಸಿ, ಮಾಲೀಕರಿಗೆ ನೋಟಿಸ್ ನೀಡಿ ವಾಹನಗಳನ್ನು ಹಿಂತಿರುಗಿಸಲಾಗಿದೆ. ಮುಂದೆಯೂ ಇದೇ ರೀತಿಯ ಉಲ್ಲಂಘನೆ ಕಂಡುಬಂದರೆ ಎಫ್‌ಐಆರ್ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ ಎಚ್ಚರಿಕೆ ನೀಡಿದ್ದಾರೆ.

ಶಿವಮೊಗ್ಗದಲ್ಲಿ ಎಂಡಿಎಂಎ ಮಾರಾಟ; ವ್ಯಕ್ತಿ ಬಂಧನ
ಶಿವಮೊಗ್ಗ: ನಗರದಲ್ಲಿ ಎಂಡಿಎಂಎ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಶಾಹೀದ್ ಖಾನ್ (40) ಎಂಬಾತನನ್ನು ದೊಡ್ಡಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಆರೋಪಿಯಿಂದ 15.21 ಗ್ರಾಂ ಎಂಡಿಎಂಎ ಮಾದಕ ವಸ್ತು, ಅಂದಾಜು ₹1.52 ಲಕ್ಷ ಮೌಲ್ಯದ ಡ್ರಗ್ಸ್ ಹಾಗೂ ₹40 ಸಾವಿರ ಮೌಲ್ಯದ ಬೈಕ್‌ನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿದ್ಯುತ್ ಖಾಸಗೀಕರಣ ವಿರೋಧಿಸಿ ಸಾಗರ ಬಂದ್ ಭಾಗಶಃ ಯಶಸ್ವಿ
ಸಾಗರ: ರಾಜ್ಯ ಸರ್ಕಾರದ ವಿದ್ಯುತ್ ಖಾಸಗೀಕರಣ ನೀತಿಯನ್ನು ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘ ಕರೆ ನೀಡಿದ್ದ ಸಾಗರ ಬಂದ್ ಸೋಮವಾರ ಭಾಗಶಃ ಯಶಸ್ವಿಯಾಯಿತು. ನಗರದ ಹಲವೆಡೆ ಅಂಗಡಿ-ಮುಂಗಟ್ಟುಗಳು ಸ್ವಯಂಪ್ರೇರಿತವಾಗಿ ಬಂದ್‌ಗೆ ಬೆಂಬಲ ಸೂಚಿಸಿದರೆ, ಸರ್ಕಾರಿ ಕಚೇರಿಗಳು, ಶಾಲಾ-ಕಾಲೇಜುಗಳು ಹಾಗೂ ಬಸ್ ಸಂಚಾರ ಎಂದಿನಂತೆ ನಡೆಯಿತು. ಸಾವಿರಾರು ರೈತರು ಪ್ರತಿಭಟನಾ ಮೆರವಣಿಗೆ ನಡೆಸಿ ಉಪವಿಭಾಗಾಧಿಕಾರಿಗಳ ಕಚೇರಿಗೆ ತೆರಳಿ ಮನವಿ ಸಲ್ಲಿಸಿ, ವಿದ್ಯುತ್ ಖಾಸಗೀಕರಣದ ನಿರ್ಧಾರವನ್ನು ಸರ್ಕಾರ ಹಿಂಪಡೆಯುವಂತೆ ಆಗ್ರಹಿಸಿದರು.

ಭದ್ರಾವತಿಯಲ್ಲಿ ಲಾರಿ ಡಿಕ್ಕಿ; ಪಾದಚಾರಿ ಸಾವು
ಶಿವಮೊಗ್ಗ: ಭದ್ರಾವತಿ ನಗರದ ಶಿವಾನಿ ಕ್ರಾಸ್ ಬಳಿ ಲಾರಿ ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿ ಇಸ್ಮಾಯಿಲ್ ಜಬಿವುಲ್ಲಾ (25) ಮೃತಪಟ್ಟಿದ್ದಾರೆ. ತಿಪ್ಲಾಪುರ ಗ್ರಾಮದ ನಿವಾಸಿಯಾಗಿದ್ದ ಇಸ್ಮಾಯಿಲ್ ಕೆಲಸಕ್ಕೆ ತೆರಳುತ್ತಿದ್ದ ವೇಳೆ ಲಾರಿಯ ಹಿಂಭಾಗದ ಟೈರ್ ಸ್ಫೋಟಗೊಂಡು ಚಾಲಕ ನಿಯಂತ್ರಣ ಕಳೆದುಕೊಂಡ ಪರಿಣಾಮ ಈ ಅಪಘಾತ ಸಂಭವಿಸಿದೆ. ಗಂಭೀರವಾಗಿ ಗಾಯಗೊಂಡ ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

ಶಿವಮೊಗ್ಗ ನೀರಾವರಿ ಯೋಜನೆಗಳಿಗೆ ₹100 ಕೋಟಿ ಅನುದಾನಕ್ಕೆ ಸಂಸದ ರಾಘವೇಂದ್ರ ಮನವಿ
ಶಿವಮೊಗ್ಗ: ಜಿಲ್ಲೆಯ ನೀರಾವರಿ ಯೋಜನೆಗಳ ಅಭಿವೃದ್ಧಿ ಹಾಗೂ ಬಾಕಿ ಬಿಲ್ ಪಾವತಿಗೆ ಅಗತ್ಯ ಅನುದಾನ ಬಿಡುಗಡೆ ಮಾಡುವಂತೆ ಸಂಸದ ಬಿ.ವೈ. ರಾಘವೇಂದ್ರ ಅವರು ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಮನವಿ ಸಲ್ಲಿಸಿದ್ದಾರೆ. ಕಾಲುವೆಗಳ ಆಧುನೀಕರಣ ಮತ್ತು ಪ್ರವಾಹ ತಡೆಗೋಡೆ ನಿರ್ಮಾಣಕ್ಕೆ ₹100 ಕೋಟಿ ಅನುದಾನ ಮಂಜೂರು ಮಾಡುವಂತೆ ಅವರು ಒತ್ತಾಯಿಸಿದ್ದಾರೆ. ಜೊತೆಗೆ, ಏತ ನೀರಾವರಿ ಯೋಜನೆಗಳ ₹62.56 ಕೋಟಿ ವಿದ್ಯುತ್ ಬಿಲ್ ಪಾವತಿಗೆ ಸರ್ಕಾರ ಅನುದಾನ ನೀಡುವವರೆಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸದಂತೆ ಮೆಸ್ಕಾಂಗೆ ಸೂಚನೆ ನೀಡುವಂತೆ ಕೋರಿದ್ದಾರೆ. ಸಚಿವ ರಾಮಲಿಂಗಾರೆಡ್ಡಿ ಮನವಿಯನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.

ಕಾಡು ಹಂದಿ ಬೇಟೆ; ಮಾಂಸ ಸಮೇತ ವ್ಯಕ್ತಿ ಬಂಧನ
ಶಿವಮೊಗ್ಗ: ಶಿಕಾರಿಪುರ ತಾಲೂಕಿನ ಗಾಮ ಗ್ರಾಮದಲ್ಲಿ ಕಾಡು ಹಂದಿಯನ್ನು ಬೇಟೆಯಾಡಿ ಮಾಂಸ ಮಾರಾಟಕ್ಕೆ ಸಿದ್ಧತೆ ನಡೆಸುತ್ತಿದ್ದ ಕುಮಾರ ಎಂಬಾತನನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ. ಆರೋಪಿಯಿಂದ 27 ಕೆ.ಜಿ. ಕಾಡು ಹಂದಿಯ ಮಾಂಸ, ಕತ್ತಿ, ಮಚ್ಚು ಹಾಗೂ ತಕ್ಕಡಿಯನ್ನು ವಶಪಡಿಸಿಕೊಳ್ಳಲಾಗಿದೆ. ಅಂಬ್ಲಿಗೊಳ ವಲಯ ಅರಣ್ಯಾಧಿಕಾರಿ ಶಾಂತಪ್ಪ ಪೂಜಾರ್ ನೇತೃತ್ವದ ತಂಡ ದಾಳಿ ನಡೆಸಿದ್ದು, ಈ ಸಂಬಂಧ ಅರಣ್ಯ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಶಿವಮೊಗ್ಗದಲ್ಲಿ 8 ಅಡಿ ಹೆಬ್ಬಾವು ಸೆರೆ
ಶಿವಮೊಗ್ಗ: ನಗರದ ಆಲ್ಗೊಳ ಸಮೀಪದ ಸುಲ್ತಾನ್ ಮೊಹಲ್ಲಾದಲ್ಲಿ ಸುಮಾರು 8 ಅಡಿ ಉದ್ದದ ಹೆಬ್ಬಾವು ಕಾಣಿಸಿಕೊಂಡು ಸಾರ್ವಜನಿಕರಲ್ಲಿ ಆತಂಕ ಮೂಡಿಸಿತು. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಉರಗ ರಕ್ಷಕ ಸ್ನೇಕ್ ಕಿರಣ್, ಮನೆ ಎದುರಿನ ಚರಂಡಿಯಲ್ಲಿದ್ದ ಹೆಬ್ಬಾವನ್ನು ಸುರಕ್ಷಿತವಾಗಿ ಸೆರೆಹಿಡಿದು ಬಳಿಕ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.

ಸಿಇಟಿ ಅಂಕಕ್ಕೆ ಮನನೊಂದು ವಿಷ ಸೇವಿಸಿದ್ದ ವಿದ್ಯಾರ್ಥಿ ಸಾವು
ಶಿವಮೊಗ್ಗ: ಸಿಇಟಿ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿದ್ದಕ್ಕೆ ಮನನೊಂದು ವಿಷ ಸೇವಿಸಿದ್ದ ಶಿಕಾರಿಪುರದ 18 ವರ್ಷದ ವಿದ್ಯಾರ್ಥಿ ಜಯಂತ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಜೂನ್ 6ರಂದು ಫಲಿತಾಂಶ ಪ್ರಕಟವಾದ ಬಳಿಕ ಕೀಟನಾಶಕ ಸೇವಿಸಿದ್ದ ವಿದ್ಯಾರ್ಥಿಯನ್ನು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತಾದರೂ, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ. ಈ ಸಂಬಂಧ ಶಿಕಾರಿಪುರ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಬಿದನೂರು ಕೋಟೆ ಕೆರೆಗೆ ಲಾರಿ ಉರುಳಿ; ಚಾಲಕ ಗಂಭೀರ ಗಾಯ
ಶಿವಮೊಗ್ಗ: ಹೊಸನಗರ ತಾಲೂಕಿನ ಬಿದನೂರು ಕೋಟೆ ಕೆರೆ ಸಮೀಪ ಲಾರಿಯೊಂದು ನಿಯಂತ್ರಣ ತಪ್ಪಿ ಕೆರೆಗೆ ಉರುಳಿದ ಪರಿಣಾಮ ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ. ಎದುರಿನಿಂದ ಬಂದ ಬಸ್‌ಗೆ ಸೈಡ್ ನೀಡುವ ವೇಳೆ ಅಪಘಾತ ಸಂಭವಿಸಿದ್ದು, ಲಾರಿಯೊಳಗೆ ಸಿಲುಕಿದ್ದ ಚಾಲಕನನ್ನು ಸ್ಥಳೀಯರು ಹಾಗೂ ಪೊಲೀಸರು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಶಿವಮೊಗ್ಗದಿಂದ ಕುಂದಾಪುರಕ್ಕೆ ಬೊಂಬು ಸಾಗಿಸುತ್ತಿದ್ದ ಲಾರಿ ಅಪಘಾತಕ್ಕೀಡಾಗಿದ್ದು, ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

ಹಾಸನ ಜಿಲ್ಲಾ ಸುದ್ದಿ:

ತಹಶೀಲ್ದಾ‌ರ್ ಜೀಪು ಡಿಕ್ಕಿ ಹೊಡೆದು ಬೈಕ್‌ ಸವಾರ ಸಾವು
ಆಲೂರು: ತಾಲ್ಲೂಕಿನ ಈಶ್ವರಹಳ್ಳಿ ಕೂಡಿಗೆ ಸರ್ಕಲ್ ಬಳಿ ಸೋಮವಾರ ಬೆಳಿಗ್ಗೆ ಸಕಲೇಶಪುರ ತಹಶೀಲ್ದಾರರ ಜೀಪು ಡಿಕ್ಕಿ ಹೊಡೆದು, ಸವಾರನೊಬ್ಬ ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಇಬ್ಬರಿಗೆ ಗಂಭೀರ ಗಾಯವಾಗಿದೆ. ಹಾಸನದ ಪೆನ್ನನ್ ಮೊಹಲ್ಲಾ ನಿವಾಸಿ ಜಂಶೀದ್ (58) ಮೃತಪಟ್ಟವರು. ಗಾಯಗೊಂಡಿರುವ ನದೀಮ್ ಎಂಬುವವರನ್ನು ಹಾಸನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ತಕ್ಷಣ ಸ್ಥಳದಲ್ಲಿದ್ದ ತಹಶೀಲ್ದಾರ್ ಕೆಎಎಸ್. ಸುಪ್ರಿತಾ, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ತಕ್ಷಣ ಚಿಕಿತ್ಸೆ ನೀಡಲು ಸಹಕರಿಸಿದರು. ಘಟನೆ ಮಾಹಿತಿ ತಿಳಿದ ಆಲೂರು ಪಟ್ಟಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿದ್ದಾರೆ.

ಹಾಸನ ದೇವಸ್ಥಾನದಲ್ಲಿ ಹುಂಡಿ ಹಣ, ಬೆಳ್ಳಿ ಆಭರಣ ಕಳವು
ಹಾಸನ: ಚನ್ನರಾಯಪಟ್ಟಣ ತಾಲ್ಲೂಕಿನ ಬಾಗೂರು ಹೋಬಳಿಯ ಅಗ್ರಹಾರ ಗ್ರಾಮದ ಅಣ್ಣಪ್ಪ ದೇವಸ್ಥಾನದಲ್ಲಿ ಕಳ್ಳತನ ನಡೆದಿದ್ದು, ಹುಂಡಿಯಲ್ಲಿದ್ದ ನಗದು ಹಾಗೂ ದೇವರ ಬೆಳ್ಳಿ ಆಭರಣಗಳನ್ನು ಕಳವು ಮಾಡಲಾಗಿದೆ. ದೇವಸ್ಥಾನದ ಅರ್ಚಕ ಸ್ವಾಮಿ ನೀಡಿದ ದೂರಿನ ಮೇರೆಗೆ ಚನ್ನರಾಯಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜೂನ್ 26ರಂದು ರಾತ್ರಿ ದೇವಸ್ಥಾನಕ್ಕೆ ಬೀಗ ಹಾಕಿ ಮನೆಗೆ ತೆರಳಿದ್ದ ಸ್ವಾಮಿ, ಶನಿವಾರ ಬೆಳಿಗ್ಗೆ ದೇವಸ್ಥಾನದಲ್ಲಿ ಕಳ್ಳತನವಾಗಿರುವ ಮಾಹಿತಿ ತಿಳಿದು ಸ್ಥಳಕ್ಕೆ ಬಂದಾಗ ಬೀಗ ಒಡೆದಿರುವುದು ಕಂಡು ಬಂದಿದೆ.
ಗರ್ಭಗುಡಿಯೊಳಗಿದ್ದ ತಾಮ್ರ ಹಾಗೂ ಸ್ಟೀಲ್ ಹುಂಡಿಗಳನ್ನು ಒಡೆದು, ಸುಮಾರು ₹10 ಸಾವಿರ ನಗದು ಹಾಗೂ ದೇವರ ತಲೆಯ ಮೇಲಿದ್ದ ಸುಮಾರು 400 ಗ್ರಾಂ ತೂಕದ ಬೆಳ್ಳಿ ನಾಗರಹೆಡೆ ಮತ್ತು ಕಿರೀಟವನ್ನು ಕಳವು ಮಾಡಲಾಗಿದೆ. ಕಳವಾದ ವಸ್ತುಗಳ ಮೌಲ್ಯ ಸುಮಾರು ₹80 ಸಾವಿರ ಎಂದು ಅಂದಾಜಿಸಲಾಗಿದೆ.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.