ಕುಶಾಲನಗರ: (ನ್ಯೂಸ್ ಮಲ್ನಾಡ್ ವರದಿ) ಸಾರ್ವಜನಿಕರಿಂದ ಬ್ಯಾಂಕ್ ಖಾತೆಗಳನ್ನು ತೆರೆಸಿ, ಅವುಗಳನ್ನು ಸೈಬರ್ ವಂಚನೆಗೆ ಬಳಸುತ್ತಿದ್ದ ಖದೀಮನೊಬ್ಬನನ್ನು ಕೊಡಗು ಜಿಲ್ಲಾ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ. ಈಚಲುಬೀಡು ಗ್ರಾಮದ ಎಸಳೂರು ನಿವಾಸಿ ಕರಣ್ ಬಂಧಿತ ಆರೋಪಿ. ಈತನ ವಿರುದ್ಧ ವಂಚನೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಆರೋಪಿಯು ವಿದ್ಯಾರ್ಥಿ ವೇತನ, ಮನೆ ಸಾಲ ಸೇರಿದಂತೆ ವಿವಿಧ ಸೌಲಭ್ಯ ಕೊಡಿಸುವುದಾಗಿ ಸಾರ್ವಜನಿಕರನ್ನು ನಂಬಿಸುತ್ತಿದ್ದ. ಬಳಿಕ ಕಮಿಷನ್ ಆಮಿಷವೊಡ್ಡಿ ಅವರ ಹೆಸರಿನಲ್ಲಿ ಬ್ಯಾಂಕ್ ಖಾತೆಗಳನ್ನು ತೆರೆಸುತ್ತಿದ್ದ. ಆ ಖಾತೆಗಳ ಎಟಿಎಂ ಕಾರ್ಡ್ ಹಾಗೂ ಇಂಟರ್ನೆಟ್ ಬ್ಯಾಂಕಿಂಗ್ ವಿವರಗಳನ್ನು ತಾನೇ ಇಟ್ಟುಕೊಂಡು ಸೈಬರ್ ವಂಚನೆಯ ಹಣ ವರ್ಗಾವಣೆಗೆ ಬಳಸುತ್ತಿದ್ದ ಎನ್ನಲಾಗಿದೆ. ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಈ ಖಾತೆಗಳ ಮೂಲಕ ಸುಮಾರು 35 ಲಕ್ಷ ರೂಪಾಯಿಗೂ ಅಧಿಕ ಕಾನೂನುಬಾಹಿರ ಹಣದ ವರ್ಗಾವಣೆ ನಡೆದಿರುವುದು ಬೆಳಕಿಗೆ ಬಂದಿದೆ.

“ಸಾರ್ವಜನಿಕರು ಯಾವುದೇ ಕಾರಣಕ್ಕೂ ತಮ್ಮ ಬ್ಯಾಂಕ್ ಖಾತೆಗಳನ್ನು ಬೇರೆಯವರಿಗೆ ವಹಿವಾಟು ನಡೆಸಲು ನೀಡಬಾರದು. ಒಂದು ವೇಳೆ ನಿಮ್ಮ ಖಾತೆಯನ್ನು ಕಾನೂನು ಬಾಹಿರ ಕೃತ್ಯಗಳಿಗೆ ಬಳಸಿರುವುದು ಕಂಡುಬಂದರೆ, ಖಾತೆದಾರರನ್ನೇ ಜವಾಬ್ದಾರರನ್ನಾಗಿ ಮಾಡಿ ಅವರ ವಿರುದ್ಧವೂ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಲಾಗುವುದು” ಎಂದು ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಣಿ ಎಸ್. ಬಿಂದುಮಣಿ ಅವರು ಎಚ್ಚರಿಸಿದ್ದಾರೆ.













