ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಸಾರ್ವಜನಿಕರ ಅನುಕೂಲಕ್ಕಾಗಿ ಸಂಚರಿಸಬೇಕಾದ KSRTC ಬಸ್ಗಳಲ್ಲೇ ತರಕಾರಿ ಮೂಟೆಗಳನ್ನು ತುಂಬಿ ಸಾಗಿಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದ್ದು, ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಚಿಕ್ಕಮಗಳೂರು ಡಿಪೋಗೆ ಸೇರಿದ ಚಿಕ್ಕಮಗಳೂರು–ಬಾಳೆಹೊನ್ನೂರು–ಶೃಂಗೇರಿ ಮಾರ್ಗದ ಬಸ್ಗಳಲ್ಲಿ ನಿತ್ಯವೂ ತರಕಾರಿ ಮೂಟೆಗಳನ್ನು ಸಾಗಿಸಲಾಗುತ್ತಿದೆ ಎನ್ನಲಾಗಿದ್ದು, KSRTC ಕಾರ್ಯವೈಖರಿ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸೀಟುಗಳ ಮೇಲೆ ತರಕಾರಿ ಮೂಟೆ, ಪ್ರಯಾಣಿಕರಿಗೆ ನಿಂತುಕೊಂಡೇ ಪ್ರಯಾಣ!
ಬಸ್ನ ಹಿಂಭಾಗದ ಸೀಟುಗಳ ಮೇಲೆಯೇ ತರಕಾರಿ ಮೂಟೆಗಳನ್ನು ತುಂಬಲಾಗುತ್ತಿದೆ. ಇದರಿಂದ ಪ್ರಯಾಣಿಕರಿಗೆ ಕುಳಿತುಕೊಳ್ಳಲು ಸೀಟುಗಳು ಸಿಗದೆ, ಕೆಲವರು ಸುಮಾರು 100 ಕಿಲೋಮೀಟರ್ವರೆಗೂ ನಿಂತುಕೊಂಡೇ ಪ್ರಯಾಣಿಸಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕರು ಪ್ರಯಾಣಿಸಲು ಮೀಸಲಿರುವ ಬಸ್ಗಳಲ್ಲಿ ಸರಕು ಸಾಗಾಟಕ್ಕೆ ಆದ್ಯತೆ ನೀಡಲಾಗುತ್ತಿದೆಯೇ ಎಂಬ ಪ್ರಶ್ನೆ ಇದೀಗ ಉದ್ಭವಿಸಿದೆ. ಪ್ರಯಾಣಿಕರಿಗೆ ಸೀಟು ಒದಗಿಸಬೇಕಾದ ಜಾಗದಲ್ಲಿ ತರಕಾರಿ ಮೂಟೆಗಳನ್ನು ತುಂಬುತ್ತಿರುವುದು ಎಷ್ಟು ಸರಿ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.


ಬಸ್ಗಳ ಕೊರತೆ ಹಾಗೂ ವಿಳಂಬದಿಂದ ವಿದ್ಯಾರ್ಥಿಗಳು, ಉದ್ಯೋಗಿಗಳು ಮತ್ತು ಹಿರಿಯ ನಾಗರಿಕರು ತೊಂದರೆ ಅನುಭವಿಸುತ್ತಿದ್ದಾರೆ. ಸಮಯಕ್ಕೆ ಸರಿಯಾಗಿ ಬಸ್ಗಳು ಲಭ್ಯವಾಗದೆ ವಿದ್ಯಾರ್ಥಿಗಳು ಪರದಾಡುತ್ತಿದ್ದರೆ, ಬಸ್ನಲ್ಲಿ ಸೀಟುಗಳ ಕೊರತೆಯಿಂದ ಹಿರಿಯ ನಾಗರಿಕರು ನಿಂತುಕೊಂಡೇ ಪ್ರಯಾಣಿಸಬೇಕಾದ ಅನಿವಾರ್ಯತೆ ಎದುರಾಗಿದೆ.
ವಿಶೇಷವಾಗಿ ಇಂದು ಶೃಂಗೇರಿಯಿಂದ ಚಿಕ್ಕಮಗಳೂರಿಗೆ ತೆರಳುವ ಪ್ರಯಾಣಿಕರು ಸುಮಾರು ಎರಡು ಗಂಟೆಗಳ ಕಾಲ ಬಸ್ಗಾಗಿ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು.

ಎಚ್ಚೆತ್ತುಕೊಳ್ಳಬೇಕಿದೆ ಅಧಿಕಾರಿಗಳು:
ಚಿಕ್ಕಮಗಳೂರು–ಬಾಳೆಹೊನ್ನೂರು–ಶೃಂಗೇರಿ ಮಾರ್ಗದಲ್ಲಿ ಸಮರ್ಪಕ ಬಸ್ಗಳನ್ನು ಒದಗಿಸುವುದರ ಜೊತೆಗೆ, ನಿಗದಿತ ವೇಳಾಪಟ್ಟಿಯಂತೆ ಬಸ್ಗಳ ಸಂಚಾರ ಖಚಿತಪಡಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಪ್ರಯಾಣಿಕರ ಸೀಟುಗಳನ್ನು ಸರಕು ಸಾಗಾಟಕ್ಕೆ ಬಳಸಲಾಗುತ್ತಿದೆ ಎಂಬ ಆರೋಪದ ಬಗ್ಗೆಯೂ KSRTC ಅಧಿಕಾರಿಗಳು ತಕ್ಷಣ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ವ್ಯಕ್ತವಾಗಿದೆ.
ಒಂದೆಡೆ ಬಸ್ಗಾಗಿ ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ, ಮತ್ತೊಂದೆಡೆ ಬಸ್ ಹತ್ತಿದರೂ ಸೀಟುಗಳಲ್ಲಿ ತರಕಾರಿ ಮೂಟೆಗಳ ಕಾಟ! ಸಾರ್ವಜನಿಕರ ಅನುಕೂಲಕ್ಕಾಗಿ ಇರುವ ಸಾರಿಗೆ ವ್ಯವಸ್ಥೆಯಲ್ಲಿ ಪ್ರಯಾಣಿಕರೇ ಪರದಾಡುವಂತಾಗಿರುವುದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಯಾವಾಗ ಪರಿಹಾರ ಒದಗಿಸಲಿದ್ದಾರೆ ಎಂಬುದನ್ನು ಕಾದುನೋಡಬೇಕಿದೆ.













