ಶಾನುವಳ್ಳಿ: (ನ್ಯೂಸ್ ಮಲ್ನಾಡ್ ವರದಿ) ಜಪಾನ್‌ನಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ ಕಂಚಿನ ಪದಕ ಗೆದ್ದು ದೇಶಕ್ಕೆ ಹಾಗೂ ಮಲೆನಾಡಿಗೆ ಕೀರ್ತಿ ತಂದ ಶಾನುವಳ್ಳಿಯ ಹೆಮ್ಮೆಯ ಪುತ್ರಿ ಸ್ನೇಹಾ ಅವರನ್ನು ಕೊಪ್ಪ ತಾಲೂಕು ಒಕ್ಕಲಿಗ ಸಂಘದ ವತಿಯಿಂದ ಇಂದು (ಅ.17) ಸನ್ಮಾನಿಸಲಾಯಿತು.
ಶನಿವಾರ ಸಂಜೆ 4 ಗಂಟೆಗೆ ಸ್ನೇಹಾ ಅವರ ನಿವಾಸದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೊಪ್ಪ ತಾಲೂಕು ಒಕ್ಕಲಿಗ ಸಂಘದ ವತಿಯಿಂದ ₹25,000 ನಗದು ನೀಡಿ ಗೌರವಿಸಲಾಯಿತು.

ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೈದು ನಾಡಿನ ಕೀರ್ತಿಯನ್ನು ಹೆಚ್ಚಿಸಿದ ಸ್ನೇಹಾ ಅವರ ಸಾಧನೆಗೆ ಸಂಘದ ಪದಾಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿ, ಮುಂದಿನ ದಿನಗಳಲ್ಲಿಯೂ ಇನ್ನಷ್ಟು ಉನ್ನತ ಸಾಧನೆಗಳನ್ನು ಮಾಡುವಂತಾಗಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಕೊಪ್ಪ ತಾಲೂಕು ಒಕ್ಕಲಿಗ ಸಂಘದ ಅಧ್ಯಕ್ಷ ಸಹದೇವ್ ಬಾಲಕೃಷ್ಣ, ಉಪಾಧ್ಯಕ್ಷರಾದ ಹೆಚ್.ಜಿ. ವೆಂಕಟೇಶ್, ಯು.ಎಸ್. ಶಿವಪ್ಪ, ಕಾರ್ಯದರ್ಶಿ ವಗಳೇ ನಾಗರಾಜ್, ಖಜಾಂಚಿ ಕೌರಿ ಪ್ರಕಾಶ್, ನಿರ್ದೇಶಕರಾದ ಬೆಳ್ಳಪ್ಪಗೌಡ, ಕಗ್ಗ ರಾಮಸ್ವಾಮಿ, ನಿಲುವಾಗಿಲು ಸತೀಶ್, ಜಗದೀಶ್ ಸುಂಕುರ್ಡಿ, ಸತೀಶ್ ಕೌಳಿ, ಅತ್ರುಳ್ಳಿ ಸುರೇಂದ್ರ, ದೀಪಕ್ ಯಡ್ತಾಳ್, ಅರ್ಜುನ್ ಬಲಗ, ಮ್ಯಾನೇಜರ್ ಪ್ರದೀಪ್ ಹಾಗೂ ಮಾಜಿ ನಿರ್ದೇಶಕ ಕಳಸಪ್ಪ ಹೊಸಮನೆ ಉಪಸ್ಥಿತರಿದ್ದರು.













