ಕೊಪ್ಪ: (ನ್ಯೂಸ್ ಮಲ್ನಾಡ್ ವರದಿ) ವಿವಿಧ ಆರೋಪಗಳಿಗೆ ಸಂಬಂಧಿಸಿದಂತೆ ಕಳೆದ ಒಂದು ತಿಂಗಳಿನಿಂದ ತಲೆಮರೆಸಿಕೊಂಡಿದ್ದ ಕುದುರೆಗುಂಡಿ ಸಮೀಪದ ಚಿನ್ನು ಖ್ಯಾತಿಯ ಪಾತ್ರಿಯನ್ನು ಬೆಂಗಳೂರಿನ ಜೆ.ಪಿ. ನಗರದಲ್ಲಿ ಕೊಪ್ಪ ಪೊಲೀಸರು ಬಂಧಿಸಿದ್ದಾರೆ.
ಸುಮಾರು ಒಂದೂವರೆ ತಿಂಗಳ ಹಿಂದೆ ಎನ್.ಆರ್.ಪುರ ಪೊಲೀಸ್ ಠಾಣೆಯಲ್ಲಿ ವಶೀಕರಣ, ದೌರ್ಜನ್ಯ ಸಂಬಂಧಿಸಿದ ಕಾನೂನು ಸೇರಿದಂತೆ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ವಶೀಕರಣ, ಮಾಟಮಂತ್ರ ಬಿಡಿಸುವುದಾಗಿ ನಂಬಿಸಿ ಜನರಿಗೆ ವಂಚನೆ ಮಾಡಿರುವುದು ಹಾಗೂ ಮಹಿಳೆಯರಿಗೆ ಕಿರುಕುಳ ನೀಡಿರುವ ಆರೋಪಗಳು ಈ ಪಾತ್ರಿಯ ವಿರುದ್ಧ ಕೇಳಿಬಂದಿವೆ. ಈ ಆರೋಪಗಳ ಕುರಿತು ಪೊಲೀಸ್ ತನಿಖೆ ಮುಂದುವರಿಯಬೇಕಿದೆ.

ಈ ಪ್ರಕರಣದ ಕುರಿತು ನ್ಯೂಸ್ ಮಲ್ನಾಡ್ ಈ ಹಿಂದೆ ನಿರಂತರವಾಗಿ ವರದಿ ಮಾಡಿತ್ತು. ಬಳಿಕ ಕೊಪ್ಪ ಹಾಗೂ ಎನ್.ಆರ್.ಪುರ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದವು. ಮಹಿಳೆಯೊಬ್ಬರು ನೀಡಿದ ಅತ್ಯಾಚಾರ ದೂರಿನ ಅನ್ವಯ ಕೊಪ್ಪ ಠಾಣೆಯಲ್ಲಿ FIR ದಾಖಲಾಗಿತ್ತು. ಈ ಹಿನ್ನಲೆ ಆರೋಪಿ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದರು. ಇದೀಗ ಆರೋಪಿಯನ್ನು ಕೊಪ್ಪ ಪೊಲೀಸರು ಬಂಧಿಸಿರುವುದು ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಯಾಗಿದೆ.
ಇದಲ್ಲದೆ, ತುಳುನಾಡಿನ ದೈವಾರಾಧನೆಯ ಹೆಸರಿನಲ್ಲಿ ಜನರನ್ನು ತಪ್ಪುದಾರಿಗೆಳೆಯುವುದು ಹಾಗೂ ಸಂಪ್ರದಾಯಬದ್ಧ ಆಚರಣೆಗಳಿಗೆ ವಿರುದ್ಧವಾಗಿ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿದ ಆರೋಪಗಳೂ ಈತನ ವಿರುದ್ಧ ಕೇಳಿಬಂದಿವೆ. ಈ ವಿಚಾರವಾಗಿ ತುಳುನಾಡಿನ ದೈವಾರಾಧಕ ತಮ್ಮಣ್ಣ ಶೆಟ್ಟಿ ಸೇರಿದಂತೆ ಹಲವರಿಂದ ಆಕ್ಷೇಪಗಳು ವ್ಯಕ್ತವಾಗಿದ್ದವು.
ಕೊಪ್ಪ ಪೊಲೀಸ್ ಠಾಣೆಯ PSI ಮಧು ಕಾರ್ಯಕ್ಕೆ ಶ್ಲಾಘನೆ
ಪಾತ್ರಿ ವಿರುದ್ಧ ಒಂದೂವರೆ ತಿಂಗಳ ಹಿಂದೆ ಎನ್ ಆರ್ ಪುರ ಠಾಣೆಯಲ್ಲಿ ಮೌಢ್ಯ ನಿಷೇಧ ಕಾಯ್ದೆಯಡಿ FIR ದಾಖಲಾಗಿತ್ತು. ಬಳಿಕ 15 ದಿನಗಳ ಅಂತರದಲ್ಲಿ ಕೊಪ್ಪ ಠಾಣೆಯಲ್ಲಿಯೂ ಕೂಡ ಮಹಿಳೆಯೊಬ್ಬರು ನೀಡಿದ ದೂರಿನ ಅನ್ವಯ FIR ದಾಖಲಾಗಿತ್ತು. ಆದರೆ ಕೊಪ್ಪ ASP ಮೇಘಾ ಅಗರ್ವಾಲ್ ಮಾರ್ಗದರ್ಶನದಲ್ಲಿ ಕೊಪ್ಪ ಠಾಣೆಯ PSI ಮಧು ನೇತೃತ್ವದಲ್ಲಿ ಕಾನ್ಸ್ಟೇಬಲ್ ಪ್ರಕಾಶ್, ಪ್ರಶಾಂತ್ ಒಳಗೊಂಡ ತಂಡ ಬೆಂಗಳೂರಿನಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದೆ. ಪೊಲೀಸರ ಈ ಕಾರ್ಯಕ್ಕೆ ಕುದುರೆಗುಂಡಿ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.













