ಕುಕ್ಕುಡಿಗೆ ರವೀಂದ್ರ ಅವರಿಗೆ ಪಕ್ಷದಿಂದ ಇಷ್ಟೊಂದು ಬೇಜಾರಾಯ್ತಾ? ಅಂತ ರವಿ ಅವರ ಅಭಿಮಾನಿಗಳ ಮತ್ತು ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಿಗೂ ಈಗ ತಲೆಬಿಸಿಯ ವಿಚಾರವಾಗಿದೆ.
ಹೌದು, ಕೊಪ್ಪದ ಒಕ್ಕಲಿಗರ ಸಭಾಭವನದಲ್ಲಿ ನಡೆದ ಶೃಂಗೇರಿ ಕ್ಷೇತ್ರ ಮಟ್ಟದ ಕಾರ್ಯಕರ್ತರ ಸಮ್ಮಿಲನ ಹಾಗೂ ಜನಜಾಗೃತಿ ಸಮಾವೇಶದಲ್ಲಿ ಕುಕ್ಕುಡಿಗೆ ರವೀಂದ್ರ ಅವರು ಯಾವುದೇ ಮುಲಾಜಿಲ್ಲದೆ ತಮ್ಮ ಆಕ್ರೋಶವನ್ನು ಶಾಸಕ ಟಿ.ಡಿ. ರಾಜೇಗೌಡ ಅವರ ಎದುರೇ ಹೊರಹಾಕಿದ್ದು, ಕ್ಷೇತ್ರದಾದ್ಯಂತ ಹೊಸ ಚರ್ಚೆಗೆ ಕಾರಣವಾಗಿದೆ.

ಒಂದು ಕಾಲದಲ್ಲಿ ಕುಕ್ಕುಡಿಗೆ ರವಿ ಅವರ ಕರೆಗೆ ಗಂಟೆಯೊಳಗೆ ನೂರಾರು ಯುವಕರು ಬರುತ್ತಿದ್ದರು. “ರವಿ ಅಂದರೆ ನಂಬಿಕೆ” ಎನ್ನುವ ಕಾಲಘಟ್ಟ ಅದು. ಅಂತಹ ರವಿ ಅವರ ಬಾಯಲ್ಲಿ “ನಾವು ಕರೆದರೆ ಜನ ಬರುವುದಿಲ್ಲ” ಎಂಬ ಮಾತು ಕೇಳಿದ ಬಳಿಕ ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ, ದೊಡ್ಡ ಮಟ್ಟದಲ್ಲೇ ಬಣ ರಾಜಕೀಯ ನಡೆಯುತ್ತಿದೆ ಎಂಬ ಚರ್ಚೆ ಕ್ಷೇತ್ರದಲ್ಲಿ ಜೋರಾಗಿದೆ.

ರವಿ ಅವರು ಯಾವುದೇ ಪಕ್ಷದಲ್ಲಿದ್ದರೂ ಕಾರ್ಯಕರ್ತರ ಜೊತೆಗೆ ನಿಲ್ಲುವ ವ್ಯಕ್ತಿತ್ವ ಅವರದು. ಯಾವುದೇ ಊರಿನ ಕಾರ್ಯಕ್ರಮವಾಗಲಿ, ಆಟೋಟ ಸ್ಪರ್ಧೆಗಳಾಗಲಿ ಅಥವಾ ಸಂಕಷ್ಟದಲ್ಲಿರುವವರಿಗೆ ಸ್ಪಂದಿಸುವುದಾಗಲಿ, ಕೊಟ್ಟ ಮಾತು ಉಳಿಸಿಕೊಳ್ಳುವ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾರೆ.
ಅದಕ್ಕಾಗಿಯೇ ಇಂದಿಗೂ ರವಿ ಅವರು ಯಾವ ಪಕ್ಷದಲ್ಲಿರುತ್ತಾರೋ, ಆ ಪಕ್ಷವೇ ಅವರ ಊರಿನ ಗ್ರಾಮ ಪಂಚಾಯಿತಿಯಲ್ಲಿ ಅಧಿಕಾರ ಹಿಡಿಯುತ್ತದೆ.
ಇಷ್ಟೊಂದು ಗಟ್ಟಿ ವ್ಯಕ್ತಿತ್ವದ ವ್ಯಕ್ತಿ ಬಹಳ ಬೇಸರದಿಂದ ಮಾತನಾಡಿದ್ದಾರೆ ಎಂದರೆ ಪಕ್ಷದೊಳಗೆ ಏನೋ ದೊಡ್ಡ ಸಮಸ್ಯೆ ಆಗಿದೆ ಎಂಬುದು ಸ್ಪಷ್ಟ. ಅಧಿಕಾರದಲ್ಲಿರುವ ಪಕ್ಷದಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಸಹಜ. ಆದರೆ ಅದನ್ನು ನಿರ್ಲಕ್ಷಿಸಿದರೆ ಮುಂದಿನ ದಿನಗಳಲ್ಲಿ ಪಕ್ಷಕ್ಕೆ ದೊಡ್ಡ ಹೊಡೆತ ಬೀಳುವ ಸಾಧ್ಯತೆಯಿದೆ ಎಂಬುದು ಅವರ ಆಪ್ತರ ಅಭಿಪ್ರಾಯ.
ಒಂದು ನಿಮಿಷವೂ ಇರಲು ರೆಡಿ ಇಲ್ಲ!
ಅಲ್ಲಿಯವರೆಗೆ ಸಭೆಯ ಹೊರಗೆ ಸುರಿಯುತ್ತಿದ್ದ ಮಳೆಯಿಂದಾಗಿ ತಂಪಾದ ವಾತಾವರಣವಿತ್ತು. ಆದರೆ ರವಿ ಅವರು “ಒಂದು ನಿಮಿಷವೂ ಇರಲು ರೆಡಿ ಇಲ್ಲ” ಎಂದ ಕ್ಷಣದಿಂದಲೇ ಸಭೆಯ ವಾತಾವರಣ ಬಿಸಿಯಾಯಿತು. ಸಭೆಯಿಂದ ಎದ್ದು ಹೋಗಿದ್ದವರೂ ಮತ್ತೆ ಬಂದು ಕುಳಿತರು.
ಎಲ್ಲರ ಮುಖದಲ್ಲೂ ಮೌನ ಆವರಿಸಿತ್ತು. “ರವಿ ಹೀಗೆ ಯಾಕೆ ಹೇಳಿದರು?”, “ಅವರ ಮಾತಿನ ಅರ್ಥವೇನು?”, “ಒಂದು ನಿಮಿಷವೂ ಇರಲು ರೆಡಿ ಇಲ್ಲ ಎಂದರೆ ಪಕ್ಷ ಬಿಡುತ್ತಾರಾ?” ಎಂಬ ಪ್ರಶ್ನೆಗಳು ಮೂಡಿ ಕೆಲ ಕಾರ್ಯಕರ್ತರ ಮನಸ್ಸಿನಲ್ಲಿ ಗೊಂದಲ ಮೂಡಿದ್ದಂತೂ ಸತ್ಯ.
ಶಾಸಕರಿಗೆ ರವಿ ಅವರು ಹೇಳಿದ್ದೇನು?
“ಹೆಸರಿಗಷ್ಟೇ ಅಧ್ಯಕ್ಷ ಸ್ಥಾನ ಇದ್ದರೆ ಅದು ನನಗೆ ಬೇಡ. ಎಲ್ಲರ ಸಹಕಾರ ಇದ್ದರೆ ಮಾತ್ರ ಪಕ್ಷ ಕಟ್ಟಲು ಸಾಧ್ಯ” ಎಂಬುದು ಅವರ ಅಭಿಪ್ರಾಯ.
“ಕೆಲ ನಾಯಕರು ಮತ್ತು ಕಾರ್ಯಕರ್ತರು ನಿಮ್ಮ ಮನೆಯಲ್ಲಿ ಹಾಗೂ ನಿಮ್ಮ ಜೊತೆ ಇರುತ್ತಾರೆ. ಅಂತಹವರಿಗೆ ಮಾತ್ರ ನಿಮ್ಮ ಬೆಂಬಲ ಇದ್ದರೆ, ನಾವು ನಿಮ್ಮ ಬೆಂಬಲಕ್ಕೆ ಇಲ್ಲ” ಎನ್ನುವ ಮೂಲಕ ಅವರು ಶಾಸಕರಿಗೂ ಪರೋಕ್ಷವಾಗಿ ಬಿಸಿ ಮುಟ್ಟಿಸಿದ್ದಾರೆ.
ರಾಷ್ಟ್ರ ಮಟ್ಟದಲ್ಲೂ ಸುದ್ದಿಯಾಗಿರುವ ಶೃಂಗೇರಿ ಕ್ಷೇತ್ರ
ಶೃಂಗೇರಿ ಕ್ಷೇತ್ರ ಈಗ ರಾಷ್ಟ್ರ ಮಟ್ಟದಲ್ಲೂ ಹೆಚ್ಚು ಸುದ್ದಿಯಲ್ಲಿರುವ ಕ್ಷೇತ್ರವಾಗಿದೆ. ಕೋರ್ಟ್, ಕಚೇರಿ, ಆಣೆ-ಪ್ರಮಾಣ ಹೀಗೆ ವಿವಿಧ ಕಾರಣಗಳಿಂದ ದಿನದಿಂದ ದಿನಕ್ಕೆ ಸುದ್ದಿಯಾಗುತ್ತಿರುವ ಕ್ಷೇತ್ರ ಈಗ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಹೇಳಿಕೆಯಿಂದ ಮತ್ತಷ್ಟು ಚರ್ಚೆಗೆ ಗ್ರಾಸವಾಗಿದೆ.
ಸದ್ಯ ಇದು ವಿರೋಧ ಪಕ್ಷದವರಿಗೆ ಚರ್ಚೆಯ ವಿಷಯವಾಗಿದ್ದರೆ, ಶಾಸಕರಿಗೆ ಸರಿಪಡಿಸಬೇಕಾದ ವಿಷಯವಾಗಿದೆ. ಮುಂದಿನ ದಿನಗಳಲ್ಲಿ ಏನಾಗಬಹುದು ಎಂಬುದನ್ನು ಕಾದು ನೋಡಬೇಕಾಗಿದೆ. (ವರದಿ- ಶಶಿ ಬೆತ್ತದಕೊಳಲು)













