ಚಿಕ್ಕಮಗಳೂರು ಜಿಲ್ಲಾ ಸುದ್ದಿ:
ಕೊಪ್ಪದಲ್ಲಿ ಅಕ್ರಮ ಗೋ ಸಾಗಣೆ ವಿಫಲ: ಮೂರು ಗೋವುಗಳ ರಕ್ಷಣೆ, ಇನ್ನೋವಾ ಕಾರು ವಶ
ಕೊಪ್ಪ: ಇನ್ನೋವಾ ಕಾರಿನಲ್ಲಿ ಮೂರು ಗೋವುಗಳನ್ನು ಅಕ್ರಮವಾಗಿ ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಪಡೆದ ಕೊಪ್ಪ ಪೊಲೀಸ್ ಇಲಾಖೆ ತಕ್ಷಣ ಕಾರ್ಯಾಚರಣೆ ನಡೆಸಿ, ಗೋ ಕಳ್ಳರನ್ನು ಬೆನ್ನಟ್ಟುವ ಮೂಲಕ ಗೋವುಗಳನ್ನು ಸುರಕ್ಷಿತವಾಗಿ ರಕ್ಷಿಸಿದೆ. ಪೊಲೀಸರ ಬೆನ್ನಟ್ಟಿದ ವೇಳೆ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದು, ಅವರು ಬಳಸಿದ್ದ ಇನ್ನೋವಾ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ರಕ್ಷಿಸಲ್ಪಟ್ಟ ಮೂರು ಗೋವುಗಳನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪರಾರಿಯಾಗಿರುವ ಆರೋಪಿಗಳ ಪತ್ತೆಗಾಗಿ ಕೊಪ್ಪ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದು, ಶೀಘ್ರದಲ್ಲೇ ಅವರನ್ನು ಬಂಧಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ತಮ್ಮ ಜೀವದ ಹಂಗನ್ನೂ ಲೆಕ್ಕಿಸದೆ ಧೈರ್ಯದಿಂದ ಕಾರ್ಯನಿರ್ವಹಿಸಿದ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಮಧು ಸೇರಿದಂತೆ ಕೊಪ್ಪ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯ ಕಾರ್ಯಕ್ಕೆ ಸಾರ್ವಜನಿಕ ವಲಯದಿಂದ ಮೆಚ್ಚುಗೆ ವ್ಯಕ್ತವಾಗಿದೆ.


ಮೂಡಿಗೆರೆ: ಪುನರ್ವಸು ಮಳೆಯ ಅಬ್ಬರ, ಮಲೆನಾಡು ಕಂಗಾಲು
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ಪುನರ್ವಸು ಮಳೆ ಅಬ್ಬರ ಮುಂದುವರಿದಿದೆ. ಕಳೆದ 24 ಗಂಟೆಗಳಲ್ಲಿ ದೇವರಮನೆಯಲ್ಲಿ 11 ಇಂಚು, ಕೊಟ್ಟಿಗೆಹಾರದಲ್ಲಿ 10 ಇಂಚು, ಊರಬಗೆ ಹಾಗೂ ಹೆಸಗೋಡಿನಲ್ಲಿ 8 ಇಂಚು, ಗೌಡಹಳ್ಳಿಯಲ್ಲಿ 8.05 ಇಂಚು, ಬಣಕಲ್‌ನಲ್ಲಿ 6.5 ಇಂಚು, ಬಾಳೂರು ಮತ್ತು ಕಳಸದಲ್ಲಿ ತಲಾ 5 ಇಂಚು ಮಳೆ ದಾಖಲಾಗಿದೆ. ಭಾರೀ ಗಾಳಿ ಸಹಿತ ಸುರಿಯುತ್ತಿರುವ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಘಟ್ಟ ಪ್ರದೇಶಗಳ ಕೆಳಭಾಗದಲ್ಲಿ ಗುಡ್ಡ ಕುಸಿತದ ಭೀತಿ ಎದುರಾಗಿದೆ. (ವರದಿ- ತನು ಕೊಟ್ಟಿಗೆಹಾರ)

ಮೂಡಿಗೆರೆ: ಗಾಳಿ-ಮಳೆ ಅಬ್ಬರ, ಮನೆಗಳ ಮೇಲೆ ಮರ ಬಿದ್ದು ಹಾನಿ
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಮಲೆನಾಡು ಭಾಗದಲ್ಲಿ ಗಾಳಿ-ಮಳೆಯ ಅಬ್ಬರ ಮುಂದುವರಿದಿದೆ. ಕೊಟ್ಟಿಗೆಹಾರ, ಬಣಕಲ್, ಬಾಳೂರು ಹಾಗೂ ಚಾರ್ಮಾಡಿ ಘಾಟ್ ತಪ್ಪಲು ಪ್ರದೇಶಗಳಲ್ಲಿ ಬೆಳಗ್ಗೆಯಿಂದ ಧಾರಾಕಾರ ಮಳೆ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಭಾರೀ ಗಾಳಿ-ಮಳೆಗೆ ಬಾಳೂರು-ಹೊರಟ್ಟಿಯಲ್ಲಿ ಅನಿತಾ ಡಯಾಸ್ ಅವರ ಮನೆ ಮೇಲೆ ಮರ ಬಿದ್ದು ಹಾನಿಯಾಗಿದೆ. ಇದೇ ರೀತಿ ದೇವನಗೂಲ್ ಗ್ರಾಮದಲ್ಲಿ ಪ್ರತಾಪ್ ಅವರ ಮನೆ ಮೇಲೂ ಮರ ಬಿದ್ದಿದ್ದು, ಎರಡು ಮನೆಗಳು ಜಖಂಗೊಂಡಿವೆ. ದೇವನಗೂಲ್ ಗ್ರಾಮದಲ್ಲಿ ಮನೆ ಸಮೀಪ ಗುಡ್ಡ ಜರಿಯುತ್ತಿರುವ ಹಿನ್ನೆಲೆಯಲ್ಲಿ ಸ್ಥಳೀಯರಲ್ಲಿ ಆತಂಕ ಮನೆಮಾಡಿದೆ. ನಿರಂತರ ಮಳೆ ಹಾಗೂ ಬಿರುಗಾಳಿಯಿಂದ ಮಲೆನಾಡು ಭಾಗದ ಜನರು ಸಂಕಷ್ಟ ಎದುರಿಸುತ್ತಿದ್ದಾರೆ. (ವರದಿ- ತನು ಕೊಟ್ಟಿಗೆಹಾರ)
ಜಯಪುರ: ಮನೆ ಮೇಲೆ ಮರ ಬಿದ್ದು ಹಾನಿ
ಚಿಕ್ಕಮಗಳೂರು ಜಿಲ್ಲೆಯ ಜಯಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಬ್ಬಿಬೈಲು ಗ್ರಾಮದಲ್ಲಿ ಭಾರೀ ಗಾಳಿ-ಮಳೆಗೆ ಪ್ರಭಾಕರ್ ಅವರ ಮನೆ ಮೇಲೆ ನಿನ್ನೆ ಸಂಜೆ ಮರ ಬಿದ್ದಿದೆ. ಘಟನೆಯಲ್ಲಿ ಮನೆಯ ಮೇಲ್ಛಾವಣಿ ಸೇರಿದಂತೆ ಗೃಹೋಪಯೋಗಿ ವಸ್ತುಗಳಿಗೆ ಹಾನಿಯಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಹಾನಿಯನ್ನು ಪರಿಶೀಲಿಸಿದ್ದಾರೆ. (ವರದಿ- ಶಶಿ ಬೆತ್ತದಕೊಳಲು)

ಎನ್.ಆರ್.ಪುರ: ಸೇತುವೆ ಮೇಲೆ ನೀರು, ಸಂಪರ್ಕ ಕಡಿತಗೊಳ್ಳುವ ಆತಂಕ
ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸತ್ಕೋಳಿ ಗ್ರಾಮದ ಸೇತುವೆ ಮೇಲೆ ನೀರು ಹರಿಯುತ್ತಿದೆ. ನೀರಿನ ಮಟ್ಟ ನಿರಂತರ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಸಂಪರ್ಕ ಕಡಿತಗೊಳ್ಳುವ ಆತಂಕ ಎದುರಾಗಿದೆ. ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡಿರುವ ಗ್ರಾಮಸ್ಥರು ಅಗತ್ಯ ಮುನ್ನೆಚ್ಚರಿಕೆ ವಹಿಸಿದ್ದು, ಮಳೆ ಮುಂದುವರಿದರೆ ಸಂಚಾರ ಸಂಪೂರ್ಣ ಸ್ಥಗಿತಗೊಳ್ಳುವ ಸಾಧ್ಯತೆ ಇದೆ. (ವರದಿ- ಶಶಿ ಬೆತ್ತದಕೊಳಲು)

ಕೊಪ್ಪ: ಗಾಳಿ-ಮಳೆಗೆ 60ಕ್ಕೂ ಹೆಚ್ಚು ಅಡಿಕೆ ಮರಗಳು ನೆಲಕ್ಕುರುಳಿ ನಷ್ಟ
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಭುವನಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉತ್ತಮೇಶ್ವರ ಸಮೀಪದ ಅಗ್ರವಳ್ಳಿಯಲ್ಲಿ ಭಾರೀ ಗಾಳಿ-ಮಳೆಯ ಅಬ್ಬರಕ್ಕೆ ರೈತ ಮಂಜುನಾಥ್ ಅವರ ತೋಟದಲ್ಲಿದ್ದ 60ಕ್ಕೂ ಹೆಚ್ಚು ಅಡಿಕೆ ಮರಗಳು ನೆಲಕ್ಕುರುಳಿವೆ. ಘಟನೆಯಿಂದ ರೈತರಿಗೆ ಅಪಾರ ನಷ್ಟ ಉಂಟಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಹಾನಿ ಪರಿಶೀಲಿಸಿ ಸೂಕ್ತ ಪರಿಹಾರ ನೀಡುವಂತೆ ರೈತರು ಆಗ್ರಹಿಸಿದ್ದಾರೆ. (ವರದಿ- ಶಶಿ ಬೆತ್ತದಕೊಳಲು)
ಚಿಕ್ಕಮಗಳೂರು: ಗಾಳಿ-ಮಳೆಗೆ ಮನೆಯ ಸಿಮೆಂಟ್ ಶೀಟ್ ಹಾರಿ ಹಾನಿ
ಚಿಕ್ಕಮಗಳೂರು ಜಿಲ್ಲೆಯ ಹೀರೆಗದ್ದೆ ಗ್ರಾಮದ ಸೋಪನಕೆರೆಯಲ್ಲಿ ಭಾರೀ ಗಾಳಿ-ಮಳೆಯ ಅಬ್ಬರಕ್ಕೆ ಮಾರಿಯಪ್ಪ (ಪೇಚಮುತ್ತು) ಅವರ ಮನೆಯ ಮೇಲ್ಛಾವಣಿಗೆ ಹೊದಿಸಿದ್ದ ಸಿಮೆಂಟ್ ಶೀಟ್‌ಗಳು ಹಾರಿ ಹೋಗಿವೆ. ಘಟನೆಯಲ್ಲಿ ಮನೆಗೆ ಸಣ್ಣಪುಟ್ಟ ಹಾನಿಯಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. (ವರದಿ- ಶಶಿ ಬೆತ್ತದಕೊಳಲು)

ಮೂಡಿಗೆರೆಯಲ್ಲಿ ಭಾರೀ ಮಳೆ: ಶಾಲೆ-ಕಾಲೇಜುಗಳಿಗೆ ರಜೆ ಘೋಷಿಸಲು ಆಗ್ರಹ
ಮೂಡಿಗೆರೆ ತಾಲೂಕಿನ ವಿವಿಧ ಭಾಗಗಳಲ್ಲಿ ಕಳೆದ ಒಂದು ವಾರದಿಂದ ನಿರಂತರ ಧಾರಾಕಾರ ಮಳೆ ಸುರಿಯುತ್ತಿದ್ದು, ಗುಡ್ಡ ಕುಸಿತ, ಮರ ಉರುಳುವ ಅಪಾಯ ಹೆಚ್ಚಾಗಿದೆ. ಹವಾಮಾನ ಇಲಾಖೆ ನಾಳೆಯೂ ಭಾರೀ ಮಳೆಯ ಮುನ್ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ಶಾಲೆ-ಕಾಲೇಜುಗಳಿಗೆ ರಜೆ ಘೋಷಿಸುವಂತೆ ಸಾರ್ವಜನಿಕರು ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ. (ವರದಿ- ತನು ಕೊಟ್ಟಿಗೆಹಾರ)
ಕರ್ನಾಟಕದ 5 ಜಿಲ್ಲೆಗಳಿಗೆ ರೆಡ್ ಅಲರ್ಟ್; ಘಟ್ಟ ಪ್ರದೇಶದಲ್ಲಿ ಭೂಕುಸಿತ ಎಚ್ಚರಿಕೆ
ರಾಜ್ಯದ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಭಾರೀ ಮಳೆ ಮುಂದುವರಿದಿರುವ ಹಿನ್ನೆಲೆಯಲ್ಲಿ ಉತ್ತರ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಬೆಳಗಾವಿ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರದ ಪ್ರಕಾರ, ಈ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ 204.4 ಮಿ.ಮೀ.ವರೆಗೆ ಮಳೆಯಾಗುವ ಸಾಧ್ಯತೆ ಇದ್ದು, ಗಂಟೆಗೆ 50ರಿಂದ 60 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಮುನ್ಸೂಚನೆ ನೀಡಲಾಗಿದೆ. ಸಾರ್ವಜನಿಕರು ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ. ಇದಲ್ಲದೆ, ಜುಲೈ 7ರಿಂದ 11ರವರೆಗೆ ರಾಜ್ಯದ ಘಟ್ಟ ಪ್ರದೇಶಗಳ ಒಂದೆರಡು ಕಡೆಗಳಲ್ಲಿ ಭೂಕುಸಿತ ಸಂಭವಿಸುವ ಸಾಧ್ಯತೆಯಿದ್ದು, ಅಪಾಯದ ಪ್ರದೇಶಗಳಲ್ಲಿರುವ ಜನರು ಎಚ್ಚರಿಕೆಯಿಂದ ಇರುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.
ಶಿವಮೊಗ್ಗ ಜಿಲ್ಲಾ ಸುದ್ದಿ:
ಕಾರ್ಗಲ್: ಕುಗ್ರಾಮದ ಬಾಲಕಿ ಅತ್ಯಾಚಾರ ಆರೋಪಿ ಬಂಧನ
ಕಾರ್ಗಲ್: ಕುಗ್ರಾಮವೊಂದರ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದ ಆರೋಪಿಯನ್ನು ಬಂಧಿಸಲಾಗಿದೆ.ಜುಲೈ 2ರಂದು ಕಾರ್ಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಾಲಕಿಯೊಬ್ಬಳ ಮೇಲೆ ಹಲವು ಬಾರಿ ಅತ್ಯಾಚಾರ ನಡೆಸಿದ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಪೋಕ್ಸೆ ಪ್ರಕರಣ ದಾಖಲಿಸಿಕೊಂಡ ಕಾರ್ಗಲ್ ಪೊಲೀಸರು ಗುಡ್ಡಗಾಡು ಪ್ರದೇಶದಲ್ಲಿ ಅಡಗಿ ಕುಳಿತಿದ್ದ ಆರೋಪಿಯನ್ನು ಕಾರ್ಗಲ್ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಆರೋಪಿ ಪತ್ತೆಗೆ ಸಾಗರ ಉಪವಿಭಾಗದ ಎಎಸ್ಪಿ ಬೆನಕ ಪ್ರಸಾದ್ ಮಾರ್ಗದರ್ಶನದಲ್ಲಿ, ಕಾರ್ಗಲ್ ಠಾಣೆ ಪಿಎಸ್‌ಐ ನಾಗರಾಜ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು.
ಎಸ್‌ಐಆರ್ ಕರ್ತವ್ಯದ ವೇಳೆ ಅಂಗನವಾಡಿ ಕಾರ್ಯಕರ್ತೆ ಕುಸಿದು ಬಿದ್ದು ಸಾವು
ಭದ್ರಾವತಿ (ಶಿವಮೊಗ್ಗ) : ತಾಲ್ಲೂಕಿನ ಅರಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಲಾಪುರದ ಅಂಗನವಾಡಿ ಕಾರ್ಯಕರ್ತೆ ಮಂಜುಳಾ ಎಚ್. (52), ಎಸ್‌ಐಆರ್ ಕರ್ತವ್ಯದ ವೇಳೆ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಇವರು ಅಂಗನವಾಡಿ ಕೇಂದ್ರದಲ್ಲಿ ಸೋಮವಾರ ಗಣತಿ ನಮೂನೆಗಳನ್ನು ಜೋಡಿಸಿಕೊಂಡು, ಮನೆ ಮನೆ ಭೇಟಿಗಾಗಿ ಕೋಡಿಹೊಸೂರು ಗ್ರಾಮಕ್ಕೆ ಹೊರಡುವ ವೇಳೆ ಆಯಾಸ ಕಾಣಿಸಿಕೊಂಡಿದೆ. ಕೂಡಲೇ ಅವರನ್ನು ಅರಬಿಳಚಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಭದ್ರಾವತಿಯ ತಾಲ್ಲೂಕು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಅಸುನೀಗಿದ್ದಾರೆ. ಇವರು 30 ವರ್ಷಗಳಿಂದ ಅಂಗನವಾಡಿ ಕಾರ್ಯಕರ್ತೆಯಾಗಿ ಕಾರ್ಯನಿರ್ವಹಿಸುತ್ತಿದ್ದರು.

ಆನವಟ್ಟಿಯಲ್ಲಿ ಏಣಿಯಿಂದ ಬಿದ್ದು ಮೆಸ್ಕಾಂ ಕಿರಿಯ ಎಂಜಿನಿಯರ್ ಸಾವು
ಆನವಟ್ಟಿ: ಪಟ್ಟಣದ ಸೊರಬ ರಸ್ತೆಯಲ್ಲಿ ನಿರ್ಮಾಣ ಹಂತದಲ್ಲಿದ್ದ ಖಾಸಗಿ ಕಟ್ಟಡ ಕಾಮಗಾರಿ ಪರಿಶೀಲನೆಗಾಗಿ ಭಾನುವಾರ ತೆರಳಿದ್ದ ಮೆಸ್ಕಾಂ ಕಿರಿಯ ಎಂಜಿನಿಯರ್ ಏಣಿ ಹತ್ತಿ ವೀಕ್ಷಿಸುತ್ತಿದ್ದಾಗ ಆಯತಪ್ಪಿ ಬಿದ್ದು ಕೆಳಗೆ ಬಿದ್ದು ಮೃತಪಟ್ಟಿದ್ದಾರೆ. ಮೆಸ್ಕಾಂ ಜಡೆ ಶಾಖೆಯ ಕಿರಿಯ ಎಂಜಿನಿಯರ್ ಮಹಾನಿಂಗ್ (ರಾಮು) ಅಪರಾಜ್ (46) ಮೃತಪಟ್ಟವರು. ಇವರಿಗೆ ಪತ್ನಿ ಇದ್ದಾರೆ. ಮೃತರ ಅಂತ್ಯಕ್ರಿಯೆ ಸೋಮವಾರ ನಡೆಯಿತು. ಏಣಿಯಿಂದ ಆಯತಪ್ಪಿ ಕೆಳಗೆ ಬೀಳುವಾಗ ಕಟ್ಟಡದ ಗೋಡೆಗೆ ತಲೆ ಬಡಿದು ಪ್ರಜ್ಞಾಹೀನರಾಗಿದ್ದ ಇವರನ್ನು ಆನವಟ್ಟಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಪರಿಶೀಲಿಸಿದ ವೈದ್ಯರು ಮೃತಪಟ್ಟಿರುವುದನ್ನು ಖಚಿತಪಡಿಸಿದ್ದಾರೆ. ಆನವಟ್ಟಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊಡಗು ಜಿಲ್ಲಾ ಸುದ್ದಿ:
ಮಡಿಕೇರಿಯಲ್ಲಿ ಭಾರಿ ಮಳೆ: ರಸ್ತೆ ಬದಿ ಕುಸಿತ
ಮಡಿಕೇರಿ: ನಗರದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದ ಇಲ್ಲಿನ ಕೆಎಸ್‌ಆರ್ ಟಿಸಿ ಬಸ್ ನಿಲ್ದಾಣ ಸಮೀಪದ ರಸ್ತೆಯ ಬದಿ ಕುಸಿತವಾಗಿದೆ. ಪಾದಚಾರಿ ರಸ್ತೆ ಸಂಪೂರ್ಣ ಕುಸಿದಿದ್ದು ಆತಂಕ ಮೂಡಿಸಿದೆ. ಮಳೆ ಮುಂದುವರಿದಿದೆ. ಬಸ್ ನಿಲ್ದಾಣದ ರಸ್ತೆಯಲ್ಲಿ ಸಂಚಾರವನ್ನು ಸಂಪೂರ್ಣ ನಿರ್ಬಂಧಿಸಲಾಗಿದೆ.

ಕೊಡಗು: ಮಲ್ಲಳ್ಳಿ ಜಲಪಾತದಲ್ಲಿ ಸಿಲುಕಿದ್ದ ಆಂಧ್ರಪ್ರದೇಶದ ಇಬ್ಬರ ರಕ್ಷಣೆ
ಸೋಮವಾರಪೇಟೆ (ಕೊಡಗು ಜಿಲ್ಲೆ) : ತಾಲ್ಲೂಕಿನ ಮಲ್ಲಳ್ಳಿ ಜಲಪಾತದ ಬಂಡೆಯಲ್ಲಿ ನೀರಿನ ನಡುವೆ ಸಿಲುಕಿದ್ದ ಇಬ್ಬರು ವಿದ್ಯಾರ್ಥಿಗಳನ್ನು ಅಗ್ನಿಶಾಮಕ ಪಡೆ ಸೋಮವಾರ ರಕ್ಷಿಸಿದೆ. ಆಂಧ್ರಪ್ರದೇಶದ ವಿದ್ಯಾರ್ಥಿಗಳಾದ ಗಣೇಶ್ ನಾಯಕ್ (21) ಹಾಗೂ ಸಂತೋಷ್ ಕುಮಾರ್(23) ಅಪಾಯದಿಂದ ಪಾರಾದವರು. ಇವರು ರಕ್ಷಣಾ ಬೇಲಿ ದಾಟಿ ನೀರಿಗೆ ಇಳಿದು, ಬಂಡೆಯ ಮೇಲೆ ಕುಳಿತಿದ್ದರು. ಆಗ ವಿದ್ಯುತ್ ಉತ್ಪಾದನಾ ಘಟಕದಿಂದ ಹೊಳೆಗೆ ನೀರು ಬಿಡಲಾಗಿದೆ. ಈ ವೇಳೆ ಹೊರಡಿಸಿದ ಸೈರನ್ ಶಬ್ದ ವಿದ್ಯಾರ್ಥಿಗಳ ಗಮನಕ್ಕೆ ಬಂದಿಲ್ಲ. ಒಮ್ಮೆಗೆ ನೀರಿನ ರಭಸ ಹೆಚ್ಚಾಗಿ ಬಂಡೆ ಸುತ್ತಲೂ ನೀರು ಸೇರಿತು. ಈ ವೇಳೆ ಹೊರಬರಲಾಗದೇ ಅವರು ರಕ್ಷಣೆಗೆ ಮೊರೆ ಇಟ್ಟರು. ಸುಮಾರು 2 ಗಂಟೆಗಳ ಕಾಲ ಬಂಡೆಯನ್ನು ಹಿಡಿದುಕೊಂಡಿದ್ದ ಅವರನ್ನು ಸ್ಥಳೀಯರ ನೆರವಿನಿಂದ ಜೀವರಕ್ಷಕ ಜಾಕೆಟ್ ಹಾಗೂ ಹಗ್ಗವನ್ನು ಬಳಸಿ ರಕ್ಷಿಸಲಾಯಿತು ಎಂದು ಅಗ್ನಿಶಾಮಕ ಪಡೆಯ ಮೂಲಗಳು ತಿಳಿಸಿವೆ.

ಹಾಸನ ಜಿಲ್ಲಾ ಸುದ್ದಿ:
ಕಲ್ಲಿದ್ದಲು ಸಾಗಿಸುತ್ತಿದ್ದ ಲಾರಿಗೆ ಬೆಂಕಿ
ಬೇಲೂರು: ತಾಲ್ಲೂಕಿನ ಹಳೇಬೀಡು ಸಮೀಪದ ಹೆಬ್ಬಾಳು ಬಳಿ ಚಲಿಸುತ್ತಿದ್ದ ಲಾರಿಯಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು, ಕೆಲವೇ ಕ್ಷಣಗಳಲ್ಲಿ ವಾಹನ ಭಾಗಶಃ ಹೊತ್ತಿ ಉರಿದ ಘಟನೆ ಸೋಮವಾರ ನಡೆದಿದೆ. ಮಂಗಳೂರಿನಿಂದ ಹಿರಿಯೂರು ಕಡೆಗೆ ಕಲ್ಲಿದ್ದಲು ಸಾಗಿಸುತ್ತಿದ್ದ ಲಾರಿಯಲ್ಲಿ ಸಂಚರಿಸುತ್ತಿರುವಾಗಲೇ ಬೆಂಕಿ ಕಾಣಿಸಿಕೊಂಡಿದೆ. ಪರಿಸ್ಥಿತಿಯನ್ನು ಗಮನಿಸಿದ ಚಾಲಕ ತಕ್ಷಣವೇ ಲಾರಿಯನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ ಕೆಳಗಿಳಿದಿದ್ದು, ಇದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಆದರೆ ನೋಡುತ್ತಿದ್ದಂತೆಯೇ ಬೆಂಕಿ ಲಾರಿಯ ಬಹುತೇಕ ಭಾಗಕ್ಕೆ ವ್ಯಾಪಿಸಿ ವಾಹನ ಭಾಗಶಃ ಸುಟ್ಟುಹೋಗಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬೆಂಕಿ ಕಾಣಿಸಿಕೊಳ್ಳಲು ಕಾರಣವೇನು ಎಂಬ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಹಳೇಬೀಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಕೊಣನೂರು: ರಸ್ತೆ ಅಡ್ಡಲಾಗಿ ಬಿದ್ದಿದ್ದ ಮರಕ್ಕೆ ಡಿಕ್ಕಿ ಹೊಡೆದು ಬೈಕ್ ಸವಾರ ಸಾವು
ರಾಮನಾಥಪುರ ಹೋಬಳಿಯ ಮಲ್ಲಾಪುರದ ಗ್ರಾಮದ ಮೃತ್ಯುಂಜಯ (45) ಭಾನುವಾರ ರಾತ್ರಿ ಬೆಟ್ಟದಪುರದ ಕಡೆಯಿಂದ ಮಲ್ಲಾಪುರಕ್ಕೆ ತಮ್ಮ ಬೈಕ್‌ನಲ್ಲಿ ಬರುತ್ತಿದ್ದರು. ರಾತ್ರಿ ಸುಮಾರು 8 ಗಂಟೆಯ ಸಮಯದಲ್ಲಿ ಗಾಳಿ-ಮಳೆಯಿಂದ ಪಿರಿಯಾಪಟ್ಟಣ – ಹಾಸನ ಮುಖ್ಯರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ಮರಕ್ಕೆ ಡಿಕ್ಕಿ ಹೊಡೆದು ಮಾರಣಾಂತಿಕವಾಗಿ ಗಾಯಗೊಂಡಿದ್ದ ಅವರನ್ನು ಆಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ತಲುಪಿದಾಗ ಮೃತಪಟ್ಟಿರುವುದು ದೃಢಪಟ್ಟಿದೆ. ಪ್ರಕರಣ ದಾಖಲಾಗಿದ್ದು, ಮೃತ ದೇಹದ ಅಂತ್ಯ ಕ್ರಿಯೆಯು ಮಲ್ಲಾಪುರದಲ್ಲಿ ಸೋಮವಾರ ನಡೆಯಿತು.













