ಹಾಸನ: (ನ್ಯೂಸ್ ಮಲ್ನಾಡ್ ವರದಿ) ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಮಹಿಳೆಯೊಬ್ಬರ ಪರ್ಸ್‌ನಲ್ಲಿದ್ದ ಸುಮಾರು ₹1.04 ಲಕ್ಷ ಮೌಲ್ಯದ ಚಿನ್ನಾಭರಣ ಕಳುವಾಗಿರುವ ಘಟನೆ ಬೆಳಕಿಗೆ ಬಂದಿದೆ.
ಬೆಂಗಳೂರಿನ ಮಹದೇವಪುರ ನಿವಾಸಿ ಲಕ್ಷ್ಮಿದೇವಿ ಅವರು ಜುಲೈ 23ರಂದು ಬೆಳಿಗ್ಗೆ ಗೊರಗುಂಟೆಪಾಳ್ಯದಿಂದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಚಿಕ್ಕಮಗಳೂರಿನಲ್ಲಿರುವ ತಮ್ಮ ಮಗಳ ಮನೆಗೆ ತೆರಳುತ್ತಿದ್ದರು. ಈ ವೇಳೆ ತಮ್ಮ ಪರ್ಸ್‌ನಲ್ಲಿ 28 ಗ್ರಾಂ ತೂಕದ ಚಿನ್ನದ ಸರ, 4 ಗ್ರಾಂ ತೂಕದ ಚಿನ್ನದ ತಾಳಿ ಹಾಗೂ 1 ಗ್ರಾಂ ತೂಕದ ಚಿನ್ನದ ಗುಂಡ ಸೇರಿ ಒಟ್ಟು 33 ಗ್ರಾಂ ಚಿನ್ನಾಭರಣ ಇಟ್ಟುಕೊಂಡಿದ್ದರು.

ಹಾಸನ ನಗರದ ಚನ್ನಪಟ್ಟಣ ಬೈಪಾಸ್ ಬಳಿ ಬಸ್ ನಿಂತಾಗ ಪಕ್ಕದ ಸೀಟಿನಲ್ಲಿ ಕುಳಿತಿದ್ದ ವ್ಯಕ್ತಿಯೊಬ್ಬರು ಬಸ್‌ನಿಂದ ಇಳಿದಿದ್ದಾರೆ. ಬಳಿಕ ಪರ್ಸ್ ಪರಿಶೀಲಿಸಿದಾಗ ಅದರಲ್ಲಿದ್ದ ಚಿನ್ನಾಭರಣಗಳು ಕಾಣೆಯಾಗಿರುವುದು ತಿಳಿದುಬಂದಿದೆ.

ಕಳುವಾದ ಚಿನ್ನಾಭರಣಗಳ ಮೌಲ್ಯ ಸುಮಾರು ₹1.04 ಲಕ್ಷ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಸಂಬಂಧ ಹಾಸನ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
















