ಮಲೆನಾಡಿನ ಇಂದಿನ ಎಲ್ಲಾ ಪ್ರಮುಖ ಸುದ್ದಿಗಳ ಕ್ವಿಕ್‌ ರೌಂಡಪ್

ಚಿಕ್ಕಮಗಳೂರು ಜಿಲ್ಲಾ ಸುದ್ದಿ:

ಪ್ರೇಮ ನಿರಾಕರಿಸಿದ ಅಪ್ರಾಪ್ತ ಬಾಲಕಿ ಮೇಲೆ ಹಲ್ಲೆ; ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಸಾರ್ವಜನಿಕರು
ಚಿಕ್ಕಮಗಳೂರು: ಜಿಲ್ಲಾ ಕ್ರೀಡಾಂಗಣದಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಹಲ್ಲೆ ನಡೆಸಿದ ಆರೋಪದಡಿ ಯುವಕನನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ. ಕಡೂರು ಮೂಲದ ಬಾಲಕಿ ಹಾಸ್ಟೆಲ್‌ನಲ್ಲಿ ವಾಸವಿದ್ದು ವಿದ್ಯಾಭ್ಯಾಸ ಮಾಡುತ್ತಿದ್ದರು. ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಬಾಣಾವರ ಮೂಲದ ಪುನೀತ್ ಎಂಬಾತ ಬಾಲಕಿಯನ್ನು ಪ್ರೀತಿಸುವಂತೆ ನಿರಂತರವಾಗಿ ಒತ್ತಾಯಿಸುತ್ತಿದ್ದ ಎನ್ನಲಾಗಿದೆ. ಬಾಲಕಿ ನಿರಾಕರಿಸಿದ ಹಿನ್ನೆಲೆಯಲ್ಲಿ ಕ್ರೀಡಾಂಗಣದಲ್ಲಿ ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ. ಘಟನೆ ಗಮನಿಸಿದ ಸಾರ್ವಜನಿಕರು ಬಾಲಕಿಯ ರಕ್ಷಣೆಗೆ ಧಾವಿಸಿದ್ದು, ಸ್ಥಳದಿಂದ ಪರಾರಿಯಾಗಲು ಯತ್ನಿಸಿದ ಆರೋಪಿಯನ್ನು ಎಸ್ಪಿ ನಿವಾಸದ ಸಮೀಪ ಹಿಡಿದು ಮಹಿಳಾ ಪೊಲೀಸ್ ಸಿಬ್ಬಂದಿಗೆ ಒಪ್ಪಿಸಿದ್ದಾರೆ. ಆರೋಪಿ ಈ ಹಿಂದೆಯೂ ಬಾಲಕಿಯ ಮನೆ ಹಾಗೂ ಹಾಸ್ಟೆಲ್ ಬಳಿ ತೆರಳಿ ಬೆದರಿಕೆ ಹಾಕಿದ್ದಾನೆ ಎನ್ನುವ ಆರೋಪ ಕೇಳಿಬಂದಿದೆ. ಪ್ರಕರಣ ದಾಖಲಿಸಿಕೊಂಡಿರುವ ಚಿಕ್ಕಮಗಳೂರು ನಗರ ಠಾಣೆ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಚಾರ್ಮಾಡಿ ಘಾಟ್‌ನಲ್ಲಿ ಮಳೆಗಾಲದ ಸಂಭ್ರಮ; ಸೆಲ್ಫಿ–ರೀಲ್ಸ್ ಹುಚ್ಚಿಗೆ ಜೀವಪಾಯ
ಮಳೆಗಾಲ ಆರಂಭವಾಗುತ್ತಿದ್ದಂತೆ ಚಾರ್ಮಾಡಿ ಘಾಟ್‌ನ ಜಲಪಾತಗಳಿಗೆ ಪ್ರವಾಸಿಗರ ದಂಡು ಹರಿದುಬರುತ್ತಿದೆ. ವಾರಾಂತ್ಯಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿರುವ ಪ್ರವಾಸಿಗರಲ್ಲಿ ಕೆಲವರು ಜಾರುವ ಬಂಡೆಗಳ ಮೇಲೆ ಏರಿ ಸೆಲ್ಫಿ, ಫೋಟೋ ಹಾಗೂ ರೀಲ್ಸ್ ಚಿತ್ರೀಕರಿಸುವ ಮೂಲಕ ಜೀವವನ್ನು ಪಣಕ್ಕಿಡುತ್ತಿದ್ದಾರೆ. ಬ್ಯಾರಿಕೇಡ್‌ಗಳು ಮತ್ತು ಎಚ್ಚರಿಕೆ ಫಲಕಗಳಿದ್ದರೂ ನಿಷೇಧಿತ ಪ್ರದೇಶಗಳಿಗೆ ಪ್ರವೇಶಿಸುತ್ತಿರುವ ಘಟನೆಗಳು ಮುಂದುವರಿದಿವೆ. ರಸ್ತೆ ಮಧ್ಯೆ ವಾಹನ ನಿಲ್ಲಿಸಿ ಡ್ಯಾನ್ಸ್‌, ವಿಡಿಯೊ ಚಿತ್ರೀಕರಣ ನಡೆಸುತ್ತಿರುವುದರಿಂದ ಸಂಚಾರಕ್ಕೂ ಅಡಚಣೆ ಉಂಟಾಗುತ್ತಿದೆ. ಮಳೆಯಿಂದ ಬಂಡೆಗಳು ಜಾರುವ ಸ್ಥಿತಿಯಲ್ಲಿರುವುದರಿಂದ ಅಪಘಾತದ ಅಪಾಯ ಹೆಚ್ಚಿದ್ದು, ನಿಯಮ ಉಲ್ಲಂಘಿಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ. ಪ್ರವಾಸಿಗರು ಸುರಕ್ಷತೆಗೆ ಆದ್ಯತೆ ನೀಡಿ ಜವಾಬ್ದಾರಿಯಿಂದ ವರ್ತಿಸಬೇಕೆಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.

ವೈದ್ಯರ ದಿನಾಚರಣೆ: ಹಿರಿಯ ವೈದ್ಯ ಡಾ. ಪಾದೂರ್‌ಗೆ ಸನ್ಮಾನ
ಬಣಕಲ್‌ನ ಸಾಯಿ ಕೃಷ್ಣ ಹೆಲ್ತ್ ಸೆಂಟರ್‌ನಲ್ಲಿ ವೈದ್ಯರ ದಿನಾಚರಣೆಯ ಅಂಗವಾಗಿ ಹಿರಿಯ ವೈದ್ಯರಾದ ಡಾ. ಅನಂತ ಕೃಷ್ಣ ಉಪಾಧ್ಯಾಯ ಪಾದೂರ್ ಅವರನ್ನು ಸನ್ಮಾನಿಸಲಾಯಿತು. 1964ರಿಂದ ಗ್ರಾಮೀಣ ಪ್ರದೇಶಗಳಲ್ಲಿ ನಿಸ್ವಾರ್ಥ ವೈದ್ಯಕೀಯ ಸೇವೆ ಸಲ್ಲಿಸಿರುವ ಅವರ ಸೇವೆಯನ್ನು ಸ್ಮರಿಸಿ ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ವೈದ್ಯಕೀಯ ನಿರ್ದೇಶಕ ಡಾ. ಮುರಳಿಕೃಷ್ಣ ಇರ್ವತ್ರಾಯ, “ಡಾ. ಪಾದೂರ್ ಅವರ ಸೇವಾಭಾವ, ಸಮರ್ಪಣೆ ಮತ್ತು ಮಾನವೀಯತೆ ಸಮಾಜಕ್ಕೆ ಹಾಗೂ ಯುವ ವೈದ್ಯರಿಗೆ ಆದರ್ಶವಾಗಿದೆ” ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಡಾ. ಚೈತನ್ಯ ನಾಯಕ್, ಡಾ. ಶ್ರೀಲಕ್ಷ್ಮಿ, ಡಾ. ಸುಮಂತ್, ಅನಂತ ಪ್ರಸಾದ್ ಸೇರಿದಂತೆ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.

ಮೇದ ಸಮುದಾಯಕ್ಕೆ ₹5 ಲಕ್ಷ ದೇಣಿಗೆ; ಸರ್ಕಾರಿ ಸವಲತ್ತುಗಳ ಸದ್ಬಳಕೆಗೆ ಕರೆ
ಎನ್.ಆರ್.ಪುರದ ಮೇದರ ಬೀದಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭದ್ರಾವತಿ ಶಾಸಕ ಬಿ.ಕೆ. ಸಂಗಮೇಶ್ವರ್ ಅವರ ಸಹೋದರ ಬಿ.ಕೆ. ಜಗನ್ನಾಥ್ ಅವರು ಮೇದ ಸಮುದಾಯದ ಅಭಿವೃದ್ಧಿಗಾಗಿ ₹5 ಲಕ್ಷ ದೇಣಿಗೆಯ ಚೆಕ್ ವಿತರಿಸಿದರು. ಈ ವೇಳೆ ಮಾತನಾಡಿದ ಶಿವಮೊಗ್ಗ ಭದ್ರಾ ಕಾಡಾ ಅಧ್ಯಕ್ಷ ಡಾ. ಕೆ.ಪಿ. ಅಂಶುಮಂತ್, ಶ್ರಮಿಕ ಸಮುದಾಯಗಳು ಸರ್ಕಾರದ ಸವಲತ್ತುಗಳನ್ನು ಸಮರ್ಪಕವಾಗಿ ಬಳಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕು ಎಂದು ಕರೆ ನೀಡಿದರು. ಬಿ.ಕೆ. ಜಗನ್ನಾಥ್ ಮಾತನಾಡಿ, ಮೇದ ಸಮುದಾಯದ ಶೈಕ್ಷಣಿಕ, ಆರ್ಥಿಕ ಹಾಗೂ ರಾಜಕೀಯ ಅಭಿವೃದ್ಧಿಗೆ ತಮ್ಮ ಸಹಕಾರ ಮುಂದುವರಿಯಲಿದೆ ಎಂದು ಭರವಸೆ ನೀಡಿದರು. ಕಾರ್ಯಕ್ರಮದಲ್ಲಿ ಗಣ್ಯರನ್ನು ಸನ್ಮಾನಿಸಲಾಗಿದ್ದು, ಸಮಾಜದ ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

21 ವರ್ಷದೊಳಗಿನವರಿಗೆ ತಂಬಾಕು ಮಾರಾಟ ಬೇಡ: ಪಿಎಸ್‌ಐ ಶ್ರೀಧರ್ ಎಚ್ಚರಿಕೆ
ಎನ್.ಆರ್.ಪುರ ತಾಲೂಕಿನ ಸಿಂಸೆ ಮತ್ತು ಕೈಮರ ಭಾಗದಲ್ಲಿ ಆರೋಗ್ಯ, ಪೊಲೀಸ್ ಹಾಗೂ ಶಿಕ್ಷಣ ಇಲಾಖೆಯ ಸಂಯುಕ್ತ ತಂಡ ವಿವಿಧ ಅಂಗಡಿ ಹಾಗೂ ಹೋಟೆಲ್‌ಗಳ ಮೇಲೆ ದಾಳಿ ನಡೆಸಿ ತಂಬಾಕು ಉತ್ಪನ್ನಗಳ ಮಾರಾಟ ಪರಿಶೀಲಿಸಿತು. ಈ ವೇಳೆ ಮಾತನಾಡಿದ ಪಿಎಸ್‌ಐ ಶ್ರೀಧರ್, 21 ವರ್ಷದೊಳಗಿನ ಮಕ್ಕಳಿಗೆ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವುದು ಕಾನೂನುಬಾಹಿರವಾಗಿದ್ದು, ನಿಯಮ ಉಲ್ಲಂಘಿಸಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಹಿರಿಯ ಆರೋಗ್ಯ ನಿರೀಕ್ಷಕ ದರ್ಶನ್, ತಂಬಾಕು ಸೇವನೆಯಿಂದ ಕ್ಯಾನ್ಸರ್ ಅಪಾಯ ಹೆಚ್ಚಾಗುತ್ತದೆ. ಶಾಲೆಗಳ 100 ಮೀಟರ್ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ನಿಷೇಧಿಸಲಾಗಿದೆ ಎಂದು ತಿಳಿಸಿದರು. ದಾಳಿಯಲ್ಲಿ ಶಿಕ್ಷಣ ಸಂಯೋಜಕ ಬಿ. ರಂಗಪ್ಪ ಹಾಗೂ ಗೃಹರಕ್ಷಕ ದಳದ ಸಿಬ್ಬಂದಿ ನಾಗರತ್ನ ಭಾಗವಹಿಸಿದ್ದರು.

ಜುಲೈ 6ರಿಂದ ಕೊಪ್ಪ–ಬಾಳಗಡಿ, ಕೊಪ್ಪ–ಶೃಂಗೇರಿ ನಡುವೆ ಹೊಸ ಕೆಎಸ್‌ಆರ್‌ಟಿಸಿ ಬಸ್ ಸೇವೆ
ಕೊಪ್ಪ: ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಬಹುದಿನಗಳ ಬೇಡಿಕೆಗೆ ಸ್ಪಂದಿಸಿ, ಜುಲೈ 6ರಿಂದ ಕೊಪ್ಪ–ಬಾಳಗಡಿ ಹಾಗೂ ಕೊಪ್ಪ–ಬಿ.ಜಿ. ಕಟ್ಟೆ–ಉತ್ತಮೇಶ್ವರ–ಎತ್ತಿನಟ್ಟಿ–ಶೃಂಗೇರಿ ಮಾರ್ಗಗಳಲ್ಲಿ ಎರಡು ಹೊಸ ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರ ಆರಂಭವಾಗಲಿದೆ. ಬಾಳಗಡಿಯಲ್ಲಿ ಪ್ರಥಮ ದರ್ಜೆ ಕಾಲೇಜು ಹಾಗೂ ವಿವಿಧ ಸರ್ಕಾರಿ ಕಚೇರಿಗಳಿರುವ ಹಿನ್ನೆಲೆ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕೊಪ್ಪ–ಬಾಳಗಡಿ ನಡುವೆ ಹಲವು ಟ್ರಿಪ್‌ಗಳನ್ನು ನಿಗದಿಪಡಿಸಲಾಗಿದೆ. ಜೊತೆಗೆ ಕೊಪ್ಪ–ನಾರ್ವೆ–ಬಿ.ಜಿ. ಕಟ್ಟೆ–ಉತ್ತಮೇಶ್ವರ–ಎತ್ತಿನಟ್ಟಿ–ಅಗಳಗಂಡಿ ಮಾರ್ಗವಾಗಿ ಶೃಂಗೇರಿಗೂ ನೇರ ಬಸ್ ಸೇವೆ ಕಲ್ಪಿಸಲಾಗಿದೆ. ಈ ಹೊಸ ಬಸ್ ಸೇವೆ ಕಲ್ಪಿಸಲು ಸಹಕರಿಸಿದ ಶೃಂಗೇರಿ ಕ್ಷೇತ್ರದ ಶಾಸಕ ಹಾಗೂ ನವೀಕರಿಸಬಹುದಾದ ಇಂಧನ ನಿಗಮದ ಅಧ್ಯಕ್ಷ ಟಿ.ಡಿ. ರಾಜೇಗೌಡ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಶಿವಾನಂದ ಸ್ವಾಮಿ, ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಹಾಗೂ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಸದಸ್ಯರಿಗೆ ಕೊಪ್ಪ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಓಣಿತೋಟ ರತ್ನಾಕರ್ ಅಭಿನಂದನೆ ಸಲ್ಲಿಸಿದ್ದಾರೆ.

ಶಿವಮೊಗ್ಗ ಜಿಲ್ಲಾ ಸುದ್ದಿ:

ವಿದ್ಯುತ್ ಟ್ರಾನ್ಸ್‌ಫಾರ್ಮರ್‌ಗೆ ಗ್ರೌಂಡಿಂಗ್; ವಿದ್ಯುತ್ ಸ್ಪರ್ಶಿಸಿ ಹಸು ಸಾವು
ಶಿಕಾರಿಪುರ: ತಾಲ್ಲೂಕಿನ ಆಪಿನಕಟ್ಟೆ ಗ್ರಾಮದಲ್ಲಿ ವಿದ್ಯುತ್ ಟ್ರಾನ್ಸ್‌ಫಾರ್ಮರ್‌ಗೆ ಅಳವಡಿಸಿದ್ದ ತಂತಿಯಲ್ಲಿ ಗ್ರೌಂಡಿಂಗ್ ಉಂಟಾಗಿ ವಿದ್ಯುತ್ ಸ್ಪರ್ಶಿಸಿದ ಪರಿಣಾಮ ಗಬ್ಬದ ಹಸುವೊಂದು ಶುಕ್ರವಾರ ಮೃತಪಟ್ಟಿದೆ. ಗ್ರಾಮದ ಫಕ್ಕೀರಪ್ಪ ಅವರು ಜಾನುವಾರು ಮೇಯಿಸಲು ತೆರಳಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಹಸುವಿಗೆ ಕಟ್ಟಿದ್ದ ಹಗ್ಗವನ್ನು ಕೈಬಿಟ್ಟಿದ್ದರಿಂದ ಫಕ್ಕೀರಪ್ಪ ಅವರು ಅಪಾಯದಿಂದ ಪಾರಾಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಈ ಟ್ರಾನ್ಸ್‌ಫಾರ್ಮರ್‌ನಲ್ಲಿ ಈ ಹಿಂದೆಯೂ ಗ್ರೌಂಡಿಂಗ್ ಸಮಸ್ಯೆ ಉಂಟಾಗಿದ್ದು, ಮೆಸ್ಕಾಂ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ದುರಸ್ತಿ ಕೈಗೊಳ್ಳಲಾಗಿರಲಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಘಟನೆ ಹಿನ್ನೆಲೆಯಲ್ಲಿ ತಕ್ಷಣ ಸಮಸ್ಯೆ ಪರಿಹರಿಸಿ ಇಂತಹ ಅವಘಡಗಳು ಮರುಕಳಿಸದಂತೆ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಜೋಗ ಜಲಪಾತದಲ್ಲಿ ಅಭಿವೃದ್ಧಿ ಹೆಸರಿನಲ್ಲಿ ಅರಣ್ಯ ನಾಶ: ಭೋಜರಾಜ್ ಆರೋಪ
ಸಾಗರ: ಜೋಗ ಜಲಪಾತ ಪ್ರದೇಶದಲ್ಲಿ ಅಭಿವೃದ್ಧಿ ಕಾಮಗಾರಿಗಳ ಹೆಸರಿನಲ್ಲಿ ವ್ಯಾಪಕ ಅರಣ್ಯ ನಾಶ ನಡೆಯುತ್ತಿದ್ದು, ಪರಿಸರಕ್ಕೆ ಧಕ್ಕೆ ಉಂಟಾಗುತ್ತಿದೆ ಎಂದು ಕರ್ನಾಟಕ ರಾಜ್ಯ ಜನಪರ ಹೋರಾಟ ವೇದಿಕೆ ಅಧ್ಯಕ್ಷ ಕೆ.ಎಲ್. ಭೋಜರಾಜ್ ಆರೋಪಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ₹185 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳ ನೆಪದಲ್ಲಿ ಗುಡ್ಡ-ಬೆಟ್ಟಗಳನ್ನು ಅಗೆದು ಜಲಪಾತದ ನೈಸರ್ಗಿಕ ಸೌಂದರ್ಯ ಮತ್ತು ಅಸ್ತಿತ್ವಕ್ಕೆ ಹಾನಿ ಮಾಡಲಾಗುತ್ತಿದೆ ಎಂದು ದೂರಿದರು. ಪರಿಸರ ಸೂಕ್ಷ್ಮ ಪ್ರದೇಶವಾಗಿರುವ ಜೋಗದಲ್ಲಿ ಅರಣ್ಯ ಮತ್ತು ಪ್ರಾಕೃತಿಕ ಸಂಪತ್ತನ್ನು ಉಳಿಸಿಕೊಂಡು ಅಭಿವೃದ್ಧಿ ಕಾರ್ಯ ಕೈಗೊಳ್ಳಬೇಕಿದ್ದು, ಅದರ ಬದಲು ಕಾಂಕ್ರೀಟ್ ಕಟ್ಟಡಗಳಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ಟೀಕಿಸಿದರು. ಜಲಪಾತದ ಸಮೀಪ ಪಂಚತಾರಾ ಹೋಟೆಲ್ ನಿರ್ಮಾಣ ಯೋಜನೆಯನ್ನು ಕೈಬಿಡಬೇಕು ಹಾಗೂ ಪರಿಸರ ಸ್ನೇಹಿ ಅಭಿವೃದ್ಧಿಗೆ ಒತ್ತು ನೀಡಬೇಕು. ಇಲ್ಲದಿದ್ದರೆ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಸುದ್ದಿಗೋಷ್ಠಿಯಲ್ಲಿ ಕುಂಟಗೋಡು ಸೀತಾರಾಮ್, ಸತೀಶ್ ಜೋಗ್, ನಿರಂಜನ್, ಸತೀಶ್ ಹಾಗೂ ಸುನೈನಾ ಉಪಸ್ಥಿತರಿದ್ದರು.

ಕೊಡಗು ಜಿಲ್ಲಾ ಸುದ್ದಿ:

ಮಡಿಕೇರಿಯಲ್ಲಿ ಬಸ್‌ನಿಂದ ಬಿದ್ದ ವ್ಯಕ್ತಿಗೆ ಚಾಲಕ, ನಿರ್ವಾಹಕರಿಂದ ಚಿಕಿತ್ಸೆ
ಮಡಿಕೇರಿ: ಮಡಿಕೇರಿಯಿಂದ ಕುಶಾಲನಗರಕ್ಕೆ ತೆರಳುತ್ತಿದ್ದ ಗ್ರಾಮೀಣ ಸಾರಿಗೆ ಬಸ್‌ನಿಂದ ಕೊಡಗರಹಳ್ಳಿಯಲ್ಲಿ ಬಿದ್ದಿದ್ದ ವ್ಯಕ್ತಿಯೊಬ್ಬರನ್ನು ಚಾಲಕ, ನಿರ್ವಾಹಕರು ಚಿಕಿತ್ಸೆ ಕೊಡಿಸಿ ಮನೆಗೆ ಕಳುಹಿಸಿದ್ದಾರೆ. ವ್ಯಕ್ತಿ ಬಿದ್ದಿದ್ದಾರೆ ಎಂದು ಹಿಂದಿನಿಂದ ಬಂದ ವಾಹನಗಳ ಚಾಲಕರು ಹೇಳುವ ಹೊತ್ತಿಗೆ ಬಸ್ ಸುಂಟಿಕೊಪ್ಪ ತಲುಪಿತ್ತು. ನಂತರ, ಚಾಲಕ ಮತ್ತು ನಿರ್ವಾಹಕರು ಆಟೊದಲ್ಲಿ ಕೊಡಗರಹಳ್ಳಿಗೆ ಬಂದು ಬಿದ್ದಿದ್ದ ವ್ಯಕ್ತಿಯನ್ನು ಉಪಚರಿಸಿ, ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದರು. ಕೊಡಗರಹಳ್ಳಿ ನಿಲ್ದಾಣದಲ್ಲಿ ನಿಂತಾಗ ಬಸ್‌ನಿಂದ ಇಳಿಯುವಾಗ ವ್ಯಕ್ತಿ ಆಯತಪ್ಪಿ ಬಿದ್ದಿದ್ದಾರೆ. ಇದು ಚಾಲಕ, ನಿರ್ವಾಹಕರ ಗಮನಕ್ಕೆ ಬಂದಿರಲಿಲ್ಲ. ನಿಂತಿದ್ದ ಬಸ್‌ನಿಂದ ಬಿದ್ದಿದ್ದರಿಂದ ವ್ಯಕ್ತಿಗೆ ತರಚಿದ ಗಾಯ ಬಿಟ್ಟರೆ ಹೆಚ್ಚಿನ ಗಾಯಗಳಾಗಿರಲಿಲ್ಲ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ತಿಳಿಸಿದರು.

ಹಾಸನ ಜಿಲ್ಲಾ ಸುದ್ದಿ:

ಹಾಸನದ ಲಕ್ಕುಂದ ಗ್ರಾಮದಲ್ಲಿ ಒಂಟಿಸಲಗ ಸಂಚಾರ; ಆತಂಕ
ಹಾಸನ: ಬೇಲೂರು ತಾಲ್ಲೂಕಿನ ಲಕ್ಕುಂದ ಗ್ರಾಮದಲ್ಲಿ ಶುಕ್ರವಾರ ಬೆಳಿಗ್ಗೆ ಒಂಟಿಸಲಗ ಸಂಚರಿಸಿದ್ದು, ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು. ಗ್ರಾಮದೊಳಗೆ ಘೀಳಿಡುತ್ತಾ ಬಂದ ಕಾಡಾನೆ, ಮನೆಗಳ ಸಮೀಪದಲ್ಲೇ ಸಂಚರಿಸಿದ್ದು, ಸ್ಥಳೀಯರು ಭಯಭೀತರಾಗಿದ್ದರು. ಶಾಲೆಯ ಮುಂಭಾಗದಿಂದಲೇ ಹಾದು ಹೋದ ಆನೆಯನ್ನು ಕಂಡು ಗ್ರಾಮಸ್ಥರು ಮನೆಗಳಿಂದ ಹೊರಬರಲು ಹೆದರಿದರು. ಒಂಟಿಸಲಗ ಗ್ರಾಮದಲ್ಲಿ ಸಂಚರಿಸುವ ವೇಳೆ ಅದರ ಹಿಂದೆ ನಾಯಿಗಳು ಬೊಗಳುತ್ತಾ ಓಡಿದ ದೃಶ್ಯ ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ. ಕಾಡಾನೆ ಗ್ರಾಮದ ವಿವಿಧ ಭಾಗಗಳಲ್ಲಿ ಕೆಲಕಾಲ ಅಲೆದಾಡಿದ ಬಳಿಕ ಸಮೀಪದ ಕಾಫಿ ತೋಟದಲ್ಲಿ ಆಶ್ರಯ ಪಡೆದಿದೆ ಎಂದು ತಿಳಿದುಬಂದಿದೆ. ಗ್ರಾಮಸ್ಥರು ಅರಣ್ಯ ಇಲಾಖೆಯ ಇಟಿಎಫ್ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದು, ಕಾಡಾನೆಯನ್ನು ಸುರಕ್ಷಿತವಾಗಿ ಕಾಡಿಗೆ ಅಟ್ಟುವ ಕಾರ್ಯಾಚರಣೆಗೆ ಸಿದ್ಧತೆ ನಡೆಸಿದ್ದಾರೆ. ಗ್ರಾಮದ ಸುತ್ತಮುತ್ತ ಎಚ್ಚರಿಕೆಯಿಂದ ಇರಲು ಅರಣ್ಯ ಇಲಾಖೆ ಸಾರ್ವಜನಿಕರಿಗೆ ಸೂಚನೆ ನೀಡಿದ್ದು, ಕಾಡಾನೆಯ ಚಲನವಲನಗಳ ಮೇಲೆ ನಿಗಾ ವಹಿಸಲಾಗಿದೆ.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.