
ಮಡಿಕೇರಿ: (ನ್ಯೂಸ್ ಮಲ್ನಾಡ್ ವರದಿ) ಸಮೀಪದ ಅಪ್ಪಂಗಳದಲ್ಲಿ ಹಾಡಹಗಲೇ ಮನೆಗೆ ನುಗ್ಗಿದ ಕಳ್ಳರು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದು ದೋಚಿರುವ ಘಟನೆ ಗುರುವಾರ ನಡೆದಿದೆ.
ಬಿಎಸ್ಎಫ್ನ ನಿವೃತ್ತ ನಿರೀಕ್ಷಕ ತಳೂರು ಲಾಲ ಹಾಗೂ ಅವರ ಪತ್ನಿ ಕಳ್ಳತನ ನಡೆದ ದಿನ ಬೆಳಗ್ಗೆ ಕಾಫಿ ಕಟಾವಿನ ಕೆಲಸಕ್ಕಾಗಿ ಮನೆಯಿಂದ ಸುಮಾರು ಒಂದೂವರೆ ಕಿಲೋಮೀಟರ್ ದೂರದಲ್ಲಿರುವ ತಮ್ಮ ತೋಟಕ್ಕೆ ತೆರಳಿದ್ದರು. ಈ ವೇಳೆ ಮನೆಗೆ ಬೀಗ ಹಾಕಿ ತೆರಳಿದ್ದರು.
ದಂಪತಿ ತೋಟದ ಕೆಲಸ ಮುಗಿಸಿ ಮನೆಗೆ ಮರಳಿದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ಮನೆಯಲ್ಲಿದ್ದ 200 ಗ್ರಾಂಗೂ ಅಧಿಕ ಚಿನ್ನಾಭರಣ ಹಾಗೂ ಅಂದಾಜು 35 ಸಾವಿರ ರೂಪಾಯಿ ನಗದನ್ನು ಕಳ್ಳರು ದೋಚಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
















