
ನರಸಿಂಹರಾಜಪುರ: (ನ್ಯೂಸ್ ಮಲ್ನಾಡ್ ವರದಿ) ತಾಲ್ಲೂಕಿನ ಮೆಣಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ಒಂಟಿ ಕಾಡಾನೆ ಸಂಚಾರ ಮಾಡುತ್ತಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರು ಹಾಗೂ ವಾಹನ ಸವಾರರು ಎಚ್ಚರಿಕೆಯಿಂದ ಇರುವಂತೆ ಅರಣ್ಯ ಇಲಾಖೆ ಮನವಿ ಮಾಡಿದೆ.
ಪ್ರಮುಖವಾಗಿ ಮಳಲಿ ಹಾಗೂ ಬಡಗಬೈಲು ಗ್ರಾಮದ ಸುತ್ತಮುತ್ತ ಒಂಟಿ ಸಲಗ ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಕೋಟೆಬೈಲು, ಕಣಗೇರಿ, ದ್ವಾರಮಕ್ಕಿ, ಬಣಗಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಜನರು ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.
ವಿಶೇಷವಾಗಿ ಮಳಲಿ-ದ್ವಾರಮಕ್ಕಿ ರಸ್ತೆಯಲ್ಲಿ ರಾತ್ರಿ ವೇಳೆ ಸಂಚಾರ ಮಾಡದಂತೆ ಅರಣ್ಯ ಇಲಾಖೆ ಎಚ್ಚರಿಕೆ ನೀಡಿದೆ. ಅನಗತ್ಯವಾಗಿ ರಾತ್ರಿ ವೇಳೆ ಹೊರಗೆ ಓಡಾಡದೆ ಮುನ್ನೆಚ್ಚರಿಕೆ ವಹಿಸುವಂತೆ ಗ್ರಾಮಸ್ಥರಿಗೆ ತಿಳಿಸಲಾಗಿದೆ. ಇದೇ ಒಂಟಿ ಸಲಗ ಎರಡು ದಿನಗಳ ಹಿಂದೆ ಬಡಗಬೈಲು ಗ್ರಾಮದ ಕನ್ನಗೆರೆ ಕೆ.ಕೆ. ಜಾರ್ಜ್ ಅವರ ಜಮೀನಿಗೆ ನುಗ್ಗಿ ಅಪಾರ ಪ್ರಮಾಣದ ಭತ್ತದ ಬೆಳೆಯನ್ನು ನಾಶಪಡಿಸಿತ್ತು ಎನ್ನಲಾಗಿದೆ.

ಕಾಡಾನೆ ಕಂಡುಬಂದರೆ ತಕ್ಷಣ ಮಾಹಿತಿ ನೀಡಿ:
ಸಾರ್ವಜನಿಕರು ಕಾಡಾನೆಯನ್ನು ಕಂಡಲ್ಲಿ ಅದರ ಸಮೀಪಕ್ಕೆ ಹೋಗದೆ, ಯಾವುದೇ ರೀತಿಯಲ್ಲಿ ಕೆಣಕದೆ ತಕ್ಷಣ ಆನೆ ಕಾರ್ಯಪಡೆಯ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡುವಂತೆ ಅರಣ್ಯ ಇಲಾಖೆ ಮನವಿ ಮಾಡಿದೆ. ಆನೆ ಕಾರ್ಯಪಡೆ ಕಂಟ್ರೋಲ್ ರೂಂ: 7204004261














