
ತರೀಕೆರೆ: (ನ್ಯೂಸ್ ಮಲ್ನಾಡ್ ವರದಿ) ಹೊಲದಲ್ಲಿ ಬಾಳೆ ಗಿಡಗಳನ್ನು ನೆಡುವ ವೇಳೆ ಏಕಾಏಕಿ ಜೇನುನೊಣಗಳ ಹಿಂಡು ದಾಳಿ ನಡೆಸಿದ ಪರಿಣಾಮ ಕಾರ್ಮಿಕರೊಬ್ಬರು ಮೃತಪಟ್ಟಿರುವ ದಾರುಣ ಘಟನೆ ಜಿಲ್ಲೆಯ ತರೀಕೆರೆ ತಾಲ್ಲೂಕಿನ ಕೋರನಹಳ್ಳಿ ಗ್ರಾಮದಲ್ಲಿ ನಡೆದಿದೆ. ಮೃತರನ್ನು ಶಿವಪ್ಪ (58) ಎಂದು ಗುರುತಿಸಲಾಗಿದೆ.
ಕೋರನಹಳ್ಳಿ ಗ್ರಾಮದ ಹೊಲವೊಂದರಲ್ಲಿ ಶಿವಪ್ಪ ಸೇರಿದಂತೆ ಮೂವರು ಕಾರ್ಮಿಕರು ಬಾಳೆ ಗಿಡಗಳನ್ನು ನೆಡುವ ಕೆಲಸದಲ್ಲಿ ತೊಡಗಿದ್ದರು. ಈ ವೇಳೆ ಏಕಾಏಕಿ ಜೇನುನೊಣಗಳ ಹಿಂಡು ಕಾರ್ಮಿಕರ ಮೇಲೆ ದಾಳಿ ನಡೆಸಿದೆ.
ಜೇನುನೊಣಗಳ ದಾಳಿಯಿಂದ ಬೆದರಿದ ಇಬ್ಬರು ಕಾರ್ಮಿಕರು ಸ್ಥಳದಿಂದ ಓಡಿ ಹೋಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ, ಶಿವಪ್ಪ ಅವರು ಜೇನುನೊಣಗಳ ದಾಳಿಗೆ ಸಿಲುಕಿದ್ದು, ಅವರ ಮುಖ, ಕೈ, ಕಾಲು ಸೇರಿದಂತೆ ದೇಹದ ವಿವಿಧ ಭಾಗಗಳಿಗೆ ನೂರಾರು ಜೇನುನೊಣಗಳು ಕಚ್ಚಿವೆ. ಗಂಭೀರವಾಗಿ ಅಸ್ವಸ್ಥಗೊಂಡಿದ್ದ ಶಿವಪ್ಪ ಅವರನ್ನು ತಕ್ಷಣ ತರೀಕೆರೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ತರೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.














