ಶೃಂಗೇರಿ: ಕಳಪೆ ಗೊಬ್ಬರ ಮಾರಾಟ: ಗುಣಮಟ್ಟ ಪರೀಕ್ಷೆಗೆ ರೈತರ ಒತ್ತಾಯ

ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ತಾಲ್ಲೂಕಿನಾದ್ಯಂತ ಪರವಾನಿಗೆ ಪಡೆದ ಅಂಗಡಿಗಳಲ್ಲಿ ಮಾರಾಟವಾಗುತ್ತಿರುವ ಮೈಲುತುತ್ತಾ ಮತ್ತು ರಸಗೊಬ್ಬರಗಳ ಗುಣಮಟ್ಟ ಪರಿಶೀಲನೆ ನಡೆಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ-ಹಸಿರು ಸೇನೆ, ಶೃಂಗೇರಿ ತಾಲ್ಲೂಕು ವತಿಯಿಂದ ಆಗ್ರಹಿಸಿದ್ದಾರೆ.

ಕಳೆದ ಎರಡು ರಿಂದ ಮೂರು ವರ್ಷಗಳಿಂದ ಅಡಿಕೆ ತೋಟಗಳು, ಕಾಫಿ ಹಾಗೂ ಕಾಳುಮೆಣಸು ಬೆಳೆಗಳಿಗೆ ಮೈಲುತುತ್ತಾ ಸಿಂಪಡನೆ ಮಾಡಿದರೂ ಸಹ ಬೆಳೆಗಳು ಕೊಳೆ ರೋಗಕ್ಕೆ ತುತ್ತಾಗುತ್ತಿದೆ. ಇದರಿಂದಾಗಿ ಮಾರಾಟವಾಗುತ್ತಿರುವ ಗೊಬ್ಬರ ಮತ್ತು ಮೈಲುತುತ್ತಾದ ಗುಣಮಟ್ಟದ ಬಗ್ಗೆ ಅನುಮಾನ ವ್ಯಕ್ತವಾಗಿದೆ.

ಈ ಹಿನ್ನೆಲೆಯಲ್ಲಿ ಶೃಂಗೇರಿ ತಾಲ್ಲೂಕಿನಾದ್ಯಂತ ಪರವಾನಿಗೆ ಪಡೆದು ಮಾರಾಟ ಮಾಡುತ್ತಿರುವ ಅಂಗಡಿಗಳಿಂದ ಸ್ಯಾಂಪಲ್‌ಗಳನ್ನು ಸಂಗ್ರಹಿಸಿ, ಸಂಬಂಧಪಟ್ಟ ಇಲಾಖೆಯ ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ. ವರದಿ ಬಂದ ಬಳಿಕವೇ ರೈತರಿಗೆ ಗೊಬ್ಬರ ವಿತರಣೆ ಮಾಡಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಅದೇ ರೀತಿ ಪರವಾನಿಗೆ ಇಲ್ಲದೆ ಗೊಬ್ಬರ ಹಾಗೂ ಮೈಲುತುತ್ತಾ ಮಾರಾಟ ಮಾಡುತ್ತಿರುವ ಅಂಗಡಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಗಿದೆ. ಈ ಬಗ್ಗೆ ಈ ಹಿಂದೆ ತಾಲ್ಲೂಕು ಕೃಷಿ ಇಲಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ, ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇರುವುದಾಗಿ ಉತ್ತರ ನೀಡಲಾಗಿದೆ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಖಾಲಿ ಇರುವ ಹುದ್ದೆಗಳಿಗೆ ಕೂಡಲೇ ಸಿಬ್ಬಂದಿ ನಿಯೋಜಿಸಿ ರೈತರಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ.

ಇದೇ ವೇಳೆ ಶೃಂಗೇರಿ ತಾಲ್ಲೂಕಿನಲ್ಲಿ ಯೂರಿಯಾ ಸೇರಿದಂತೆ ವಿವಿಧ ರಸಗೊಬ್ಬರಗಳ ಕೊರತೆ ಉಂಟಾಗಿದ್ದು, ತಕ್ಷಣ ಅಗತ್ಯ ಗೊಬ್ಬರವನ್ನು ಸರಬರಾಜು ಮಾಡುವಂತೆ ರೈತರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ರೈತರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯ:
ಶೃಂಗೇರಿ ತಾಲ್ಲೂಕಿನ ರೈತರು ಮತ್ತು ಸಾರ್ವಜನಿಕರು ಭೂ ಹಕ್ಕು, ಸಾಗುವಳಿ ಚೀಟಿ, ಅರಣ್ಯ ಸರ್ವೆ, ಆಧಾರ್ ಸೇವೆ ಸೇರಿದಂತೆ ಹಲವು ಸಮಸ್ಯೆಗಳ ಪರಿಹಾರಕ್ಕೆ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ನಮೂನೆ 53ರಲ್ಲಿ ಅರ್ಜಿ ಸಲ್ಲಿಸಿ ಬ್ಯಾಂಕ್ ಚಲನ್ ಕಟ್ಟಿದ್ದರೂ ಹಲವಾರು ರೈತರಿಗೆ ಇದುವರೆಗೆ ಪಹಣಿ ಮತ್ತು ಮ್ಯುಟೇಶನ್ ದಾಖಲಾಗಿಲ್ಲ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅದೇ ವರ್ಷದಲ್ಲಿ ಸಾಗುವಳಿ ಚೀಟಿ ಪಡೆದ ಕೆಲವರಿಗೆ ಮಾತ್ರ ದಾಖಲೆ ಮಾಡಿರುವುದಾಗಿ ಆರೋಪಿಸಿದ್ದು, ಬಾಕಿ ಇರುವ ರೈತರಿಗೂ ತಕ್ಷಣ ಪಹಣಿ ಹಾಗೂ ಮ್ಯುಟೇಶನ್ ಮಾಡಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.

ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಬಗರ್ ಹುಕುಂ ಸಮಿತಿಯಲ್ಲಿ ಅರ್ಜಿಗಳು ಅಂಗೀಕಾರವಾಗಿದ್ದು, ಕೆಲವರಿಗೆ ಹಂಗಾಮಿ ಸಾಗುವಳಿ ಚೀಟಿ ನೀಡಲಾಗಿದೆ. ಆದರೂ ಶಾಶ್ವತ ಸಾಗುವಳಿ ಚೀಟಿ ನೀಡದಿರುವುದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ದೂರಲಾಗಿದೆ. ನಮೂನೆ 94ಸಿ ಅಡಿಯಲ್ಲಿ ಅರ್ಜಿ ಸಲ್ಲಿಸಿದ ಸುಮಾರು 100 ವರ್ಷಗಳ ಇತಿಹಾಸವಿರುವ ಮನೆಗಳಿಗೆ ಹಕ್ಕುಪತ್ರ ನೀಡಿಲ್ಲ. “ಸೊಪ್ಪಿನಬೆಟ್ಟ ಪ್ರದೇಶ” ಎಂಬ ಕಾರಣ ಹೇಳಿ ಸಾಗುವಳಿ ಚೀಟಿ ಮತ್ತು ಹಕ್ಕುಪತ್ರ ವಿತರಣೆ ವಿಳಂಬ ಮಾಡಬಾರದು ಎಂದು ರೈತರು ಒತ್ತಾಯಿಸಿದ್ದಾರೆ.

ಪ್ರಾಸ್ತಾವಿಕ ಅರಣ್ಯ ಸೆಟ್ಲೈಂಟ್ ಅಧಿಕಾರಿಗಳ ಅವಧಿ ಮುಗಿದಿರುವುದರಿಂದ ಅನೇಕ ಅರ್ಜಿಗಳು ಬಾಕಿ ಉಳಿದಿವೆ. ಕೂಡಲೇ ಅಧಿಕಾರಿಗಳನ್ನು ಮರು ನೇಮಕ ಮಾಡಿ ಅರ್ಜಿಗಳ ವಿಲೇವಾರಿ ಮಾಡಬೇಕು. ಮೀಸಲು ಅರಣ್ಯ ಘೋಷಣೆಯ ವೇಳೆ ರೈತರು ವಾಸವಿರುವ ಮನೆಗಳು ಹಾಗೂ ಕೃಷಿ ಸಾಗುವಳಿ ಪ್ರದೇಶಗಳನ್ನು ಹೊರತುಪಡಿಸಬೇಕು ಎಂದು ಆಗ್ರಹಿಸಲಾಗಿದೆ. ಜೊತೆಗೆ ಸರ್ಕಾರಿ ಜಾಗದಲ್ಲಿ ಮನೆ ನಿರ್ಮಾಣಕ್ಕೆ ಅರಣ್ಯ ಮತ್ತು ಕಂದಾಯ ಇಲಾಖೆ ತೊಂದರೆ ನೀಡಬಾರದು.

ಎಸ್‌ಐಟಿ ಸರ್ವೆ, ಅರಣ್ಯ ಹಕ್ಕು ಸಮಿತಿ ಸರ್ವೆ, ಡೀಮ್ಸ್ ಫಾರೆಸ್ಟ್ ಸರ್ವೆ ಸೇರಿದಂತೆ ವಿವಿಧ ಸರ್ವೆಗಳು ಸಾರ್ವಜನಿಕರಿಗೆ ಮಾಹಿತಿ ನೀಡದೇ ನಡೆಯುತ್ತಿವೆ ಎಂದು ಆರೋಪಿಸಲಾಗಿದೆ. ಈ ಕುರಿತು ಗ್ರಾಮ ಸಭೆ ನಡೆಸಿ ಮಾಹಿತಿ ನೀಡಬೇಕು ಹಾಗೂ ರೈತರಿಗೆ ಯಾವುದೇ ತೊಂದರೆಯಾಗದಂತೆ ಸರ್ವೆ ಕಾರ್ಯ ನಡೆಸಬೇಕು ಎಂದು ಒತ್ತಾಯಿಸಲಾಗಿದೆ.

ಇದೇ ವೇಳೆ ಶೃಂಗೇರಿಯಲ್ಲಿ ವಾರದಲ್ಲಿ ಒಂದೇ ದಿನ ಆಧಾರ್ ಕಾರ್ಡ್ ತಿದ್ದುಪಡಿ ಮತ್ತು ಹೊಸ ನೋಂದಣಿ ಕಾರ್ಯ ನಡೆಯುತ್ತಿರುವುದರಿಂದ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ತಾಲ್ಲೂಕು ಕಚೇರಿಯಲ್ಲಿ ಖಾಯಂ ಆಧಾರ್ ಸೇವಾ ಕೇಂದ್ರ ಆರಂಭಿಸಿ ಪ್ರತಿದಿನ ಸೇವೆ ನೀಡಬೇಕು ಎಂದು ಮನವಿ ಮಾಡಿದ್ದಾರೆ.

ಈಗಾಗಲೇ ಮಂಜೂರಾದ ಜಮೀನುಗಳಿಗೆ ಪೋಡಿ ಕಾರ್ಯ ಸರ್ಕಾರದ ಆದೇಶ ಇದ್ದರೂ ಪೂರ್ಣಗೊಂಡಿಲ್ಲ. “ಸೊಪ್ಪಿನಬೆಟ್ಟ” ನೆಪ ಹೇಳದೇ ರೈತರ ಜಮೀನುಗಳನ್ನು ತಕ್ಷಣ ಪೋಡಿ ಮಾಡಿಕೊಡಬೇಕು ಎಂದು ಆಗ್ರಹಿಸಿ ತಹಶೀಲ್ದಾರ್‌ ಗೆ ಮನವಿ ಪತ್ರ ಸಲ್ಲಿಸಿದ್ದಾರೆ.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.