ಶಿವಮೊಗ್ಗ: (ನ್ಯೂಸ್ ಮಲ್ನಾಡ್ ವರದಿ) ಜಿಂಕೆ ಬೇಟೆಯಾಡಿ ಅದರ ಮಾಂಸವನ್ನು ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಭದ್ರಾವತಿ ವಿಭಾಗದ ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದ್ದು, ಸುಮಾರು 20 ಕೆ.ಜಿ ಜಿಂಕೆ ಮಾಂಸವನ್ನು ವಶಕ್ಕೆ ಪಡೆದಿದ್ದಾರೆ. ಪ್ರಕರಣದ ಪ್ರಮುಖ ಆರೋಪಿ ಪರಾರಿಯಾಗಿದ್ದಾನೆ.
ಕಾಚಗೊಂಡನಹಳ್ಳಿಯ ಆರ್ಮುಗ ಪ್ರಮುಖ ಆರೋಪಿಯಾಗಿದ್ದು, ಘಟನೆ ಬಳಿಕ ನಾಪತ್ತೆಯಾಗಿದ್ದಾನೆ. ಸೀಗೆಬಾಗಿಯ ಮುನ್ನ, ಸುರಗಿತೋಪಿನ ಚಂದ್ರಶೇಖರ್ ಹಾಗೂ ಹೊಸಸಿದ್ದಾಪುರದ ಮೂರ್ತಿ ಬಂಧಿತ ಆರೋಪಿಗಳಾಗಿದ್ದಾರೆ.

ಜಿಂಕೆ ಬೇಟೆಯಾಡಿ ಮಾಂಸ ತಂದು ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದರು. ಮಿಲಿಟರಿ ಕ್ಯಾಂಪ್, ಬಸ್ ನಿಲ್ದಾಣ ಹಾಗೂ ಸಂತೆ ಮೈದಾನದ ಸುತ್ತಮುತ್ತ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಮಾಂಸದೊಂದಿಗೆ ಬಂಧಿಸಿದ್ದಾರೆ.
ಬಂಧಿತರಿಂದ ಅಂದಾಜು 20 ಕೆ.ಜಿ ಜಿಂಕೆ ಮಾಂಸವನ್ನು ವಶಕ್ಕೆ ಪಡೆಯಲಾಗಿದೆ. ಪರಾರಿಯಾಗಿರುವ ಪ್ರಮುಖ ಆರೋಪಿ ಆರ್ಮುಗ ಬಂಧನವಾದ ಬಳಿಕ ಜಿಂಕೆಯನ್ನು ಬೇಟೆಯಾಡಿದ ಸ್ಥಳ ಸೇರಿದಂತೆ ಪ್ರಕರಣದ ಇನ್ನಷ್ಟು ವಿವರಗಳು ಬೆಳಕಿಗೆ ಬರಲಿವೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.














