ಎನ್. ಆರ್. ಪುರ: (ನ್ಯೂಸ್ ಮಲ್ನಾಡ್ ವರದಿ) ತಾಲ್ಲೂಕಿನ ಮಡಬೂರು ಗ್ರಾಮದ ಗರನಕೊಪ್ಪದಲ್ಲಿ ಮಹಿಳೆಯೊಬ್ಬರಿಗೆ ನಾಗರಹಾವು ಕಚ್ಚಿ ಮೃತಪಟ್ಟ ಘಟನೆ ಶನಿವಾರ (ಮೇ 23) ನಡೆದಿದೆ. ಮೃತರನ್ನು ಮಡಬೂರು ಗ್ರಾಮದ ಗರನಕೊಪ್ಪದ ಪ್ರೇಮ (69) ಎಂದು ಗುರುತಿಸಲಾಗಿದೆ.
ಶನಿವಾರ ಬೆಳಿಗ್ಗೆ ಪ್ರೇಮ ಅವರು ತಮ್ಮ ಮನೆ ಸಮೀಪದ ತೋಟದಿಂದ ದನದ ಕೊಟ್ಟಿಗೆಗೆ ದರಗು ತರಲು ತೆರಳಿದ್ದರು. ಈ ವೇಳೆ ದರಗು ತೆಗೆಯುತ್ತಿದ್ದಾಗ ಅಲ್ಲಿ ಅಡಗಿದ್ದ ನಾಗರಹಾವು ಅವರ ಬಲಗೈಗೆ ಕಚ್ಚಿದೆ ಎನ್ನಲಾಗಿದೆ.

ಹಾವು ಕಚ್ಚಿದ ತಕ್ಷಣ ಪ್ರೇಮ ಅವರು ಮನೆಗೆ ಓಡಿ ಬಂದು ವಿಷಯವನ್ನು ಕುಟುಂಬದವರಿಗೆ ತಿಳಿಸಿದ್ದಾರೆ. ಬಳಿಕ ಪುತ್ರ ಮಹೇಶ್ ಹಾಗೂ ಇತರ ಕುಟುಂಬದವರು ಅವರನ್ನು ತಕ್ಷಣ ನರಸಿಂಹರಾಜಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಪ್ರೇಮ ಅವರು ಮೃತಪಟ್ಟಿದ್ದಾರೆ.
ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.












