ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಯಾವುದೇ ಅಧಿಕೃತ ಪರವಾನಗಿ ಇಲ್ಲದೆ ಕಳಪೆ ಸಾವಯವ ಗೊಬ್ಬರವನ್ನು ರೈತರಿಗೆ ಮಾರಾಟ ಮಾಡಲು ಯತ್ನಿಸುತ್ತಿದ್ದ ಜಾಲವನ್ನು ಕೃಷಿ ಇಲಾಖೆ ಅಧಿಕಾರಿಗಳು ಭೇದಿಸಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಕೆಳಗೂರು ಸಮೀಪದ ದಿಣ್ಣೆಕೆರೆ ಗ್ರಾಮದಲ್ಲಿ ನಡೆದಿದೆ.
ಸಮೃದ್ಧಿ ಅಂಕನಾಥೇಶ್ವರ ಗೊಬ್ಬರ ಕಂಪನಿಯ ಏಜೆಂಟ್ ತಿಪ್ಪೇಸ್ವಾಮಿ ಎಂಬುವವರು ‘ಸಿರಿ ಸಮೃದ್ಧಿ ಬಯೋ ಆರ್ಗ್ಯಾನಿಕ್’ ಹೆಸರಿನಲ್ಲಿ ರೈತರಿಗೆ ಸಾವಯವ ಗೊಬ್ಬರ ಮಾರಾಟ ಮಾಡಲು ಮುಂದಾಗಿದ್ದರು. ಆದರೆ ಸ್ಥಳೀಯ ರೈತರು ಅನುಮಾನಗೊಂಡು ಗೊಬ್ಬರವನ್ನು ನೀರಿನಲ್ಲಿ ಪರೀಕ್ಷಿಸಿದಾಗ ಅದರಲ್ಲಿ ಕೇವಲ ಮಣ್ಣು ಮಿಶ್ರಿತವಾಗಿರುವುದು ಪತ್ತೆಯಾಗಿ, ಅದು ಕಳಪೆ ಗುಣಮಟ್ಟದ ಕಲಬೆರಕೆ ಗೊಬ್ಬರ ಎಂಬುದು ಬೆಳಕಿಗೆ ಬಂದಿದೆ.

ತಕ್ಷಣ ರೈತರು ಕೃಷಿ ಇಲಾಖೆಗೆ ಮಾಹಿತಿ ನೀಡಿದ್ದು, ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ತನಿಖೆ ವೇಳೆ ಗೊಬ್ಬರವನ್ನು ಮದ್ದೂರಿನಿಂದ ಸರಬರಾಜು ಮಾಡಲಾಗುತ್ತಿದ್ದು, ರೈತರನ್ನು ದಾರಿ ತಪ್ಪಿಸುವ ಉದ್ದೇಶದಿಂದ ಚೀಲಗಳ ಮೇಲೆ ತಪ್ಪು ಲೇಬಲಿಂಗ್ ಅಳವಡಿಸಿರುವುದು ಪತ್ತೆಯಾಯಿತು. ಯಾವುದೇ ಅಧಿಕೃತ ಪರವಾನಗಿ ಇಲ್ಲದೆ ರಸಗೊಬ್ಬರ ಸರಬರಾಜು ಮಾಡುವುದು ಹಾಗೂ ತಪ್ಪು ಲೇಬಲಿಂಗ್ ಮೂಲಕ ವಂಚನೆ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಅಧಿಕಾರಿಗಳು ಸ್ಥಳದಲ್ಲಿದ್ದ 30 ಮೂಟೆ ಕಳಪೆ ಸಾವಯವ ಗೊಬ್ಬರ ಮತ್ತು ಸರಬರಾಜಿಗೆ ಬಳಸಿದ್ದ ವಾಹನವನ್ನು ಜಪ್ತಿ ಮಾಡಿದ್ದಾರೆ.
ಈ ಸಂಬಂಧ ವಾಹನ ಚಾಲಕ ಕುಮಾರ್ ಹಾಗೂ ಏಜೆಂಟ್ ತಿಪ್ಪೇಸ್ವಾಮಿ ಅವರನ್ನು ವಶಕ್ಕೆ ಪಡೆದು ಆಲ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.












