ಕೊಪ್ಪ: (ನ್ಯೂಸ್ ಮಲ್ನಾಡ್ ಫೋಕಸ್ ಸ್ಟೋರಿ) ಕೊಪ್ಪ ಪಿ ಎಸ್ ಐ ಬಸವರಾಜ್ ಮಹಿಳಾ ಸಿಬ್ಬಂದಿಗೆ ಕಿರುಕುಳ ಆರೋಪ ಸಂಬಂಧ ತನಿಖಾಧಿಕಾರಿಗಳು ಮಹಿಳಾ ಸಿಬ್ಬಂದಿಗಳ ಹೇಳಿಕೆ ಪಡೆದಿದ್ದು, ಮಹಿಳಾ ಸಿಬ್ಬಂದಿ ಉನ್ನತ ಅಧಿಕಾರಿಗಳಿಗೆ ತಮಗಾಗುತ್ತಿರುವ ಕಿರುಕುಳದ ಕುರಿತು ದೂರು ನೀಡಿದ್ದು, ಮಾಹಿತಿ ಪಡೆದುಕೊಂಡ ತನಿಖಾಧಿಕಾರಿಗಳು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಪ್ರಕರಣದ ಮಾಹಿತಿಯನ್ನು ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಈ ಬಗ್ಗೆ ಏನು ಕ್ರಮ ಕೈಗೊಳ್ಳುತ್ತಾರೆ ಎಂದು ಕಾದು ನೋಡಬೇಕಿದೆ.

ಪೊಲೀಸ್ ಇಲಾಖೆಗೆ ಹೆಣ್ಣಿನ ಗೌರವ ಮುಖ್ಯವೋ, ಇಲಾಖೆಯ ಹೆಸರು ಮುಖ್ಯವೋ ಕಾದುನೋಡಬೇಕಿದೆ!
ಪೊಲೀಸ್ ಇಲಾಖೆಯ ಒಳಗೇ ಇಂತಹ ಪರಿಸ್ಥಿತಿ ಇರುವುದು ಜನಸಾಮಾನ್ಯರಿಗೆ ನ್ಯಾಯ ವ್ಯವಸ್ಥೆಯ ಬಗ್ಗೆ ಅನುಮಾನ, ಅಭದ್ರತೆ ಮೂಡಿಸುತ್ತಿದೆ.
ಮಹಿಳೆಯರು ಪೊಲೀಸ್ ಠಾಣೆಗೆ ಧೈರ್ಯದಿಂದ ಹೇಗೆ ಹೋಗುವುದು ಎಂಬ ಅಭಿಪ್ರಾಯ ಸಹ ವ್ಯಕ್ತವಾಗುತ್ತಿದೆ. ಹೆಣ್ಣಿನ ಗೌರವವನ್ನು ರಕ್ಷಿಸುವ ಜವಾಬ್ದಾರಿ ಹೊತ್ತಿರುವ ಪೊಲೀಸ್ ಇಲಾಖೆ ತಮ್ಮ ಇಲಾಖೆಯ ಹೆಣ್ಣಿಗಾಗುತ್ತಿರುವ ಅನ್ಯಾಯಕ್ಕೇ ನ್ಯಾಯ ಕೊಡಿಸಲಾಗದ ಪರಿಸ್ಥಿತಿಯಲ್ಲಿದೆಯೇ ? ಹಾಗಾದಲ್ಲಿ ಅದು ಪುರುಷ ಪ್ರಧಾನ ಪೊಲೀಸ್ ವ್ಯವಸ್ಥೆಯಲ್ಲಿರುವ ಅಧಿಕಾರಿಗಳ ದಾಷ್ಟ್ಯಕ್ಕೆ ಹಿಡಿದ ಕೈಗನ್ನಡಿಯಾಗುತ್ತದೆ.
ಪೊಲೀಸ್ ಇಲಾಖೆಯು, ಆಧಾರ ಇಲ್ಲದೆ ಮಾಧ್ಯಮಗಳು ಸುದ್ದಿ ಪ್ರಕಟಿಸುತ್ತಿವೆ ಎಂಬ ಭ್ರಮೆಯಿಂದ ಹೊರಬಂದು, ನೊಂದವರಿಗೆ ನ್ಯಾಯ ನೀಡುವ ಬಗ್ಗೆ ತಮ್ಮ ಬದ್ಧತೆ ತೋರಬೇಕು. ತಪ್ಪು ಮಾಡಿರುವ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಂಡಲ್ಲಿ ಇಲಾಖೆಯ ಗೌರವ ಇನ್ನಷ್ಟು ಹೆಚ್ಚುತ್ತದೆಯೇ ಹೊರತು ಕಡಿಮೆ ಆಗುವುದಿಲ್ಲ.
ಅದನ್ನು ಬಿಟ್ಟು ಯಾವುದೇ ತಪ್ಪೇ ನಡೆದಿಲ್ಲ ಎಂದು ಪ್ರಕರಣ ಮುಚ್ಚಿ ಹಾಕಿದಲ್ಲಿ, ಮಾಧ್ಯಮಗಳು ತಮ್ಮಲ್ಲಿರುವ ದಾಖಲೆಗಳನ್ನು ಹೊರಬಿಟ್ಟಲ್ಲಿ ಅಂತಹ ಸಂದರ್ಭದಲ್ಲಿ ಸಂಪೂರ್ಣ ಪೊಲೀಸ್ ಇಲಾಖೆಯು ತಲೆ ತಗ್ಗಿಸಬೇಕಾಗುತ್ತದೆ ಎಂದು ಉನ್ನತ ಅಧಿಕಾರಿಗಳು ತಿಳಿದಿರಬೇಕು.
ನೊಂದವರು ಸಹ ಯಾವುದೇ ಗೊಡ್ಡು ಬೆದರಿಕೆಗಳಿಗೆ ಹೆದರದೆ ಸಮಾಜಕ್ಕೆ ಮಾದರಿಯಾಗಬಹುದಾದ ದಿಟ್ಟತನ ತೋರಬೇಕು ಎಂಬುದು ನ್ಯೂಸ್ ಮಲ್ನಾಡ್ ಆಶಯ.












