

ಜಯಪುರ: (ನ್ಯೂಸ್ ಮಲ್ನಾಡ್ ವರದಿ) ಗೌರಿ ಗಣೇಶ ಹಬ್ಬದ ಪ್ರಯುಕ್ತ ಜಯಪುರ ಪೊಲೀಸ್ ಠಾಣೆಯಲ್ಲಿ ವಿಶೇಷವಾಗಿ ಗೌರಿ ಹಬ್ಬವನ್ನು ಆಚರಿಸಲಾಯಿತು.
ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಹಿಳಾ ಪೊಲೀಸ್ ಸಿಬ್ಬಂದಿಗಳಾದ ವೀಣಾ, ಕಲಾವತಿ, ಅಂಬಿಕಾ ಹಾಗೂ ಪ್ರೇಮಕುಮಾರಿ ಅವರಿಗೆ ಪಿಎಸ್ಐ ರವೀಶ್ ಅವರು ಸೀರೆ, ಅರಿಶಿನ–ಕುಂಕುಮ ಸೇರಿದಂತೆ ಬಾಗಿನ ನೀಡಿ ಸತ್ಕರಿಸಿ ಹಬ್ಬದ ಶುಭಾಶಯ ಕೋರಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪಿಎಸ್ಐ ರವೀಶ್, ಗೌರಿ ಹಬ್ಬವು ಸ್ತ್ರೀಶಕ್ತಿಯನ್ನು ಗೌರವಿಸುವ ಪವಿತ್ರ ಸಂದರ್ಭವಾಗಿದ್ದು, ಮಹಿಳೆಯರ ತ್ಯಾಗ, ಸಹನೆ ಹಾಗೂ ಸೇವೆಯನ್ನು ಸ್ಮರಿಸುವ ದಿನವೂ ಹೌದು ಎಂದರು.
ಮಹಿಳಾ ಪೊಲೀಸ್ ಸಿಬ್ಬಂದಿಗಳು ಹಬ್ಬದ ಸಂದರ್ಭದಲ್ಲೂ ಕುಟುಂಬದೊಂದಿಗೆ ಸಮಯ ಕಳೆಯದೆ, ಕರ್ತವ್ಯಕ್ಕೆ ಆದ್ಯತೆ ನೀಡಿ ಸಾರ್ವಜನಿಕರ ಸೇವೆಯಲ್ಲಿ ತೊಡಗಿರುತ್ತಾರೆ. ಹೀಗಾಗಿ ಅವರಿಗೆ ಬಾಗಿನ ನೀಡಿ ಗೌರವಿಸುವ ಮೂಲಕ ಅವರ ಸೇವೆ ಹಾಗೂ ಕರ್ತವ್ಯನಿಷ್ಠೆಗೆ ಕೃತಜ್ಞತೆ ಸಲ್ಲಿಸಲಾಗಿದೆ ಎಂದು ಹೇಳಿದರು.
ಮನೆ-ಕುಟುಂಬದ ಜವಾಬ್ದಾರಿಯ ಜೊತೆಗೆ ಪೊಲೀಸ್ ಇಲಾಖೆಯ ಕರ್ತವ್ಯವನ್ನೂ ಸಮರ್ಥವಾಗಿ ನಿರ್ವಹಿಸುತ್ತಿರುವ ಮಹಿಳಾ ಸಿಬ್ಬಂದಿಯ ಸೇವೆ ಶ್ಲಾಘನೀಯ. ಅವರ ತ್ಯಾಗ ಮತ್ತು ಸೇವೆಗೆ ಗೌರವ ಸೂಚಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಪಿಎಸ್ಐ ರವೀಶ್ ಹೇಳಿದರು.
ವರದಿ: ಶಶಿ ಬೆತ್ತದಕೊಳಲು














