ಕೊಟ್ಟಿಗೆಹಾರ: (ನ್ಯೂಸ್ ಮಲ್ನಾಡ್ ವರದಿ) ಬಣಕಲ್ ವಿಮುಕ್ತಿ ಚಾರಿಟೇಬಲ್ ಟ್ರಸ್ಟ್ ಹಾಗೂ ವಿಮುಕ್ತಿ ಮಹಿಳಾ ಒಕ್ಕೂಟದ ಆಶ್ರಯದಲ್ಲಿ ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಮಹಿಳಾ ಶಕ್ತಿ ಸಂಭ್ರಮವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಇದನ್ನೂ ಓದಿ: ಆಸ್ತಿ ನೋಂದಣಿ ನಿಯಮಗಳಲ್ಲಿ ಮಹತ್ವದ ಬದಲಾವಣೆ; ಇನ್ಮುಂದೆ ಆಸ್ತಿ ರಿಜಿಸ್ಟ್ರೇಷನ್ ಗೆ ಈ ದಾಖಲೆಗಳು ಕಡ್ಡಾಯ!

ಕಾರ್ಯಕ್ರಮದ ಅಂಗವಾಗಿ ಬಣಕಲ್ ಪಟ್ಟಣದಲ್ಲಿ ವೀರ ಮಹಿಳೆಯರ ಸ್ಥಬ್ಧ ಚಿತ್ರಗಳು, ಕಲಶ ಹೊತ್ತ ಮಹಿಳೆಯರು ಹಾಗೂ ಡೊಳ್ಳು ವಾದ್ಯದೊಂದಿಗೆ ಭವ್ಯ ಮೆರವಣಿಗೆ ನಡೆಯಿತು.
ಬಣಕಲ್ ಚರ್ಚ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಸ್ತ್ರೀಪರ ಚಿಂತಕಿ ನಿವೇದಿತಾ ಕಾಮತ್ ಮಾತನಾಡಿ, ಮಹಿಳೆಯರಿಂದಲೇ ಮಹಿಳಾ ಸಬಲೀಕರಣ ಸಾಧ್ಯ. ಶಿಕ್ಷಣವೇ ಮಹಿಳೆಯರಿಗೆ ಸಮಾಜದ ಅಭಿವೃದ್ಧಿಯ ದೀಪ. ಹೆಣ್ಣು ಮಕ್ಕಳಿಗೆ ಸಮಾನ ಅವಕಾಶಗಳು ಹಾಗೂ ಮೂಲಭೂತ ಸೌಲಭ್ಯಗಳು ಸಿಗಬೇಕು. ಲೈಂಗಿಕ ದೌರ್ಜನ್ಯ, ಕಿರುಕುಳ ಹಾಗೂ ಇಷ್ಟವಿಲ್ಲದ ಮದುವೆಗಳು ತಪ್ಪಬೇಕು ಎಂದು ಹೇಳಿದರು.
ವಿಮುಕ್ತಿ ಘಟಕದ ಅಧ್ಯಕ್ಷೆ ಎಚ್.ಎಂ. ಸುನೀತಾ ಗುತ್ತಿಹಳ್ಳಿ ಮಾತನಾಡಿ, ಮಹಿಳೆಯರು ತಮ್ಮ ಮಕ್ಕಳಿಗೆ ಶಿಕ್ಷಣ, ಆರ್ಥಿಕ ಸಬಲೀಕರಣ ಹಾಗೂ ಕೌಶಲ್ಯಾಭಿವೃದ್ಧಿಗೆ ಆದ್ಯತೆ ನೀಡಬೇಕು. ಮಹಿಳಾ ಹಕ್ಕುಗಳ ಬಗ್ಗೆ ಅರಿವು ಮೂಡಿಸಿ, ಕುಟುಂಬದಲ್ಲಿ ಸಮಾನ ಹಕ್ಕು ಸಿಗುವಂತೆ ಪ್ರೇರೇಪಿಸಬೇಕು ಎಂದರು.
ಇದನ್ನೂ ಓದಿ: 6 ರಾಶಿಗೆ ಪ್ರಗತಿಯ ಹಾದಿ ತೆರೆಯಲಿದೆ.. ಭರ್ಜರಿ ಲಕ್!
ಕಾರ್ಯಕ್ರಮವನ್ನು ಗ್ರಾಮೀಣ ಸ್ವ ಉದ್ಯೋಗಿ ಲಿಲ್ಲಿ ಮೋನಿಸ್ ಉದ್ಘಾಟಿಸಿದರು. ಈ ವೇಳೆ ಡೀನಾ ರೊಡ್ರಿಗಸ್, ಸೂಲಗಿತ್ತಿ ಕಮಲಮ್ಮ ನಿಡುವಾಳೆ ಹಾಗೂ ಸುಶೀಲಾ ಗೋಪಾಲ್ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಫಾ. ಅರುಣ್ ಲೋಬೊ, ಸಂಯೋಜಕಿ ವಿಂದ್ಯಾ ಯೋಗೀಶ್, ಒಕ್ಕೂಟದ ಅಧ್ಯಕ್ಷೆ ಅತಿಕಾಭಾನು, ಲಕ್ಷ್ಮಿ, ಸುನಂದಾ, ಜಯ, ಮಮತ, ಪ್ರತಿಮಾ, ಸವಿತ ಸೇರಿದಂತೆ ಅನೇಕ ಸದಸ್ಯರು ಉಪಸ್ಥಿತರಿದ್ದರು. (ವರದಿ – ತನು ಕೊಟ್ಟಿಗೆಹಾರ)












