ಅಡ್ಡಗದ್ದೆ: (ನ್ಯೂಸ್ ಮಲ್ನಾಡ್ ವರದಿ) ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಡ್ಡಗದ್ದೆ ಮಂಡಲದ ವತಿಯಿಂದ ಅಡ್ಡಗದ್ದೆಯ ರಾಜಬೀದಿಗಳಲ್ಲಿ ಭವ್ಯ ಪಥಸಂಚಲನ ಮತ್ತು ಉತ್ಸವ ನಡೆಯಿತು. ಅಡ್ಡಗದ್ದೆ ಗ್ರಾಮ ಪಂಚಾಯಿತಿಯ 4 ಗ್ರಾಮಗಳಿಂದ ಒಟ್ಟು 120 ಗಣವೇಶಧಾರಿ ಸ್ವಯಂಸೇವಕರು ಪಥಸಂಚಲನದಲ್ಲಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಆರ್‌ಎಸ್‌ಎಸ್ ಜಿಲ್ಲಾ ಬೌದ್ಧಿಕ್ ಪ್ರಮುಖ ರತ್ನಾಕರ್ ಗಡಿಗೇಶ್ವರ ಅವರು, 101 ವರ್ಷಗಳ ಹಿಂದೆ ವಿಜಯದಶಮಿಯ ಪವಿತ್ರ ದಿನದಂದು ರಾಷ್ಟ್ರೀಯ ಸ್ವಯಂಸೇವಕ ಸಂಘ ಪ್ರಾರಂಭವಾಯಿತು. ವಿಜಯದಶಮಿ ಶಕ್ತಿಯ ಆರಾಧನೆಯ ದಿನವಾಗಿದ್ದು, ಸಂಘವೂ ಅದೇ ಮಾರ್ಗದಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.

ಕಲಿಯುಗದಲ್ಲಿ ಸಂಘಟನೆಯ ಮೂಲಕವೇ ಧರ್ಮರಕ್ಷಣೆ ಸಾಧ್ಯ. ಇಂದು ಸಮಾಜ ಮತ್ತು ದೇಶ ಎದುರಿಸುತ್ತಿರುವ ಸಮಸ್ಯೆಗಳನ್ನು 100 ವರ್ಷಗಳ ಹಿಂದೆ ಡಾಕ್ಟರ್ ಜಿ ಅವರು ಸಂಘವನ್ನು ಸ್ಥಾಪಿಸುವ ಸಂದರ್ಭದಲ್ಲಿಯೂ ಎದುರಿಸಲಾಗಿತ್ತು. ಈ ಎಲ್ಲ ಸಮಸ್ಯೆಗಳಿಗೆ ಸಂಘದ ಶಾಖೆಯ ಕಾರ್ಯಪದ್ಧತಿಯೇ ಪರಿಹಾರವಾಗಿದೆ ಎಂದು ಅಭಿಪ್ರಾಯಪಟ್ಟರು.
ಮನೆ ಸ್ವಚ್ಛವಾಗಿಲ್ಲದಿದ್ದಾಗ ಜಿರಳೆ, ಹಾವು, ಚೇಳುಗಳು ಸೇರಿಕೊಳ್ಳುವುದು ಸಹಜ. ಅದೇ ರೀತಿ ದೇಶವೆಂಬ ಮನೆಯನ್ನು ಸಂಸ್ಕಾರಗಳ ಮೂಲಕ ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದು ಅವರು ಕರೆ ನೀಡಿದರು.
ಈ ಸಂದರ್ಭದಲ್ಲಿ ಮಾನ್ಯ ತಾಲೂಕು ಸಂಘಚಾಲಕರಾದ ಶ್ರೀ ವಿಶ್ವನಾಥ ಹಾಲಂದೂರು, ಜಿಲ್ಲಾ ಕಾರ್ಯವಾಹರಾದ ನೂತನ ಸೂರ್ಯ, ಗೋಪಾಲಕೃಷ್ಣ, ರಾಘವೇಂದ್ರ ಹಂಚಲಿ, ಹರೀಶ್ ತೊರೆಹಡ್ಲು, ಸವಿತೃ ಭಾರ್ಗವ ಸೇರಿದಂತೆ ಇತರರು ಉಪಸ್ಥಿತರಿದ್ದರು.













