ಜಯಪುರ: (ನ್ಯೂಸ್ ಮಲ್ನಾಡ್ ವರದಿ) ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಾಂತಿಗ್ರಾಮದಲ್ಲಿ ಏಪ್ರಿಲ್ 28 ಹಾಗೂ 29ರಂದು ನಡೆಯಲಿರುವ ಅಮೃತ ಮಹೋತ್ಸವದ ಆಹ್ವಾನ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಸತೀಶ್ ಶೆಟ್ಟಿ ಮಾತನಾಡಿ, ಆಹ್ವಾನ ಪತ್ರಿಕೆ ಹಂಚುವ ಕುರಿತು ಮಾಹಿತಿ ನೀಡಿದರು. “ಮದುವೆ ಅಥವಾ ಮನೆ ಕಾರ್ಯಕ್ರಮಗಳ ಆಹ್ವಾನ ಪತ್ರಿಕೆಯನ್ನು ಹೇಗೆ ಗೌರವದಿಂದ ಹಂಚುತ್ತೇವೋ, ಅದೇ ರೀತಿಯಲ್ಲಿ ಈ ಮಹೋತ್ಸವದ ಆಹ್ವಾನ ಪತ್ರಿಕೆಯನ್ನು ಸಹ ಪ್ರೀತಿ ಮತ್ತು ಆತ್ಮೀಯತೆಯಿಂದ ಹಂಚಬೇಕು. ಪ್ರತಿಯೊಬ್ಬರೂ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಮನವಿ ಮಾಡಬೇಕು” ಎಂದು ಕರೆ ನೀಡಿದರು.

ಅಮೃತ ಮಹೋತ್ಸವವನ್ನು ಯಶಸ್ವಿಯಾಗಿ ಹಾಗೂ ಅಚ್ಚುಕಟ್ಟಾಗಿ ನಡೆಸಲು ಎಲ್ಲರ ಸಹಕಾರ ಅಗತ್ಯವಿದೆ ಎಂದು ಅವರು ಹೇಳಿದರು. ಸುತ್ತಮುತ್ತಲಿನ ಯಾವುದೇ ಮನೆಯನ್ನು ಬಿಟ್ಟುಬಿಡದೆ ಆಹ್ವಾನ ಪತ್ರಿಕೆ ತಲುಪಿಸುವ ಜವಾಬ್ದಾರಿ ನಮ್ಮದಾಗಿದೆ ಎಂದು ತಿಳಿಸಿ, ಈ ಕಾರ್ಯಕ್ಕಾಗಿ ತಂಡವು ಶ್ರಮಿಸುತ್ತಿದೆ ಎಂದರು. ಸಭೆಯಲ್ಲಿ ವಿವಿಧ ಸಮಿತಿಗಳ ಕಾರ್ಯಗಳ ರೂಪರೇಷೆಗಳ ಬಗ್ಗೆ ಚರ್ಚೆ ನಡೆಯಿತು.
ಈ ಸಂದರ್ಭದಲ್ಲಿ ಕೊಪ್ಪ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಹರ್ಷ, ಗುಡ್ಡೆತೋಟ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರಾದ ಪ್ರಶಾಂತ್ ಜಾಳ್ಮರ ಮತ್ತು ಕೀರ್ತಿಸುಂದರರಾಜ್, ಕೃಷಿಕರಾದ ಬೆಂಡೆಹಕ್ಲು ನಾರಾಯಣ್, ಪ್ರವೀಣ್ ಜಾಳ್ಮರ, ಗ್ರಾಮ ಪಂಚಾಯತಿ ಮಾಜಿ ಉಪಾಧ್ಯಕ್ಷ ರವಿ ಎನ್, ಖಾದರ್, ಮಂಜುನಾಥ್ ಕೆ.ಜೆ., ಸುರೇಶ್, ಎಸ್ಡಿಎಂಸಿ ಅಧ್ಯಕ್ಷ ಕಿಟ್ಟಯ್ಯ, ಶಾಲಾ ಶಿಕ್ಷಕರಾದ ಶ್ರೀನಿವಾಸ ಮತ್ತು ಆನಂದ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. (ವರದಿ- ಶಶಿ ಬೆತ್ತದಕೊಳಲು)












