ಶೃಂಗೇರಿ ತಾಲೂಕು ಪ್ರೌಢಶಾಲೆಗಳ ಐತಿಹಾಸಿಕ ಸಾಧನೆ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇಕಡಾ 100 ಫಲಿತಾಂಶ

ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ತಾಲೂಕಿನ ಎಲ್ಲಾ ಪ್ರೌಢಶಾಲೆಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇಕಡಾ 100 ಫಲಿತಾಂಶ ಸಾಧಿಸಿ ಜಿಲ್ಲೆಯಲ್ಲಿ ಗಮನಾರ್ಹ ಸಾಧನೆ ಮಾಡಿವೆ. ಈ ಸಾಧನೆಗೆ ಶೃಂಗೇರಿ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಮತಿ ವರಲಕ್ಷ್ಮಿ ಜಿ ಅವರ ನೇತೃತ್ವ, ಹಾಗೂ ಅಧಿಕಾರಿಗಳ ಸಮರ್ಪಕ ಮಾರ್ಗದರ್ಶನ ಪ್ರಮುಖ ಕಾರಣವಾಗಿದೆ.

ಈ ಹಿನ್ನೆಲೆಯಲ್ಲಿ ತಾಲೂಕಿನ ನೋಡಲು ಅಧಿಕಾರಿಗಳಾದ ಶ್ರೀ ಸಿದ್ದರಾಜು (ದೈಹಿಕ ಶಿಕ್ಷಣಾಧಿಕಾರಿಗಳು), ಎಲ್ಲಾ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು, ಶಾಲಾ ಅಭಿವೃದ್ಧಿ ಸಮಿತಿಗಳ ಅಧ್ಯಕ್ಷರು ಮತ್ತು ಸದಸ್ಯರು, ಪೋಷಕರು ಹಾಗೂ ವಿದ್ಯಾರ್ಥಿಗಳಿಗೆ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ.

ಶೃಂಗೇರಿ ತಾಲೂಕಿನ ಡಯಟ್ ನೋಡಲ್ ಅಧಿಕಾರಿಗಳಾದ ಡಾ. ಬಿ.ಆರ್. ಗಂಗಾಧರಪ್ಪ ಹಾಗೂ ಚಿಕ್ಕಮಗಳೂರು ಡಯಟ್ ಅಭಿವೃದ್ಧಿ ಉಪನಿರ್ದೇಶಕರಾದ ಸುಂದರೇಶ್ ಅವರು ಈ ಸಾಧನೆಗೆ ಕಾರಣರಾದ ಎಲ್ಲರಿಗೂ ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸಿ, ಇದೇ ರೀತಿಯ ಸಾಧನೆ ಮುಂದುವರೆಯಲಿ ಎಂದು ಹಾರೈಸಿದ್ದಾರೆ.

ತಾಲೂಕುವಾರು ಫಲಿತಾಂಶ

ತಾಲೂಕುವಾರು ಫಲಿತಾಂಶದಲ್ಲಿ ಶೃಂಗೇರಿ ತಾಲೂಕು ಶೇಕಡಾ 100 ಫಲಿತಾಂಶ ಪಡೆದು ಅಗ್ರಸ್ಥಾನ ಪಡೆದುಕೊಂಡಿದೆ. ಎನ್.ಆರ್.ಪುರ ತಾಲೂಕು 97.3% ಫಲಿತಾಂಶದೊಂದಿಗೆ ಎರಡನೇ ಸ್ಥಾನದಲ್ಲಿದ್ದು, ಕೊಪ್ಪ ತಾಲೂಕು 97% ಫಲಿತಾಂಶದೊಂದಿಗೆ ಮೂರನೇ ಸ್ಥಾನ ಪಡೆದಿದೆ.

ಮೂಡಿಗೆರೆ ತಾಲೂಕು 95.7% ಫಲಿತಾಂಶ ದಾಖಲಿಸಿದ್ದು, ಚಿಕ್ಕಮಗಳೂರು ತಾಲೂಕು 95.33% ಫಲಿತಾಂಶ ಗಳಿಸಿದೆ. ತರಿಕೇರೆ ತಾಲೂಕು 91.61%, ಬೀರೂರು ತಾಲೂಕು 90.77% ಹಾಗೂ ಕಡೂರು ತಾಲೂಕು 90.53% ಫಲಿತಾಂಶ ಪಡೆದುಕೊಂಡಿವೆ.

ಕಾಫಿನಾಡಿಗೆ ಕೀರ್ತಿ ತಂದ ಬೃಂದಾ:
ಚಿಕ್ಕಮಗಳೂರು: ನಗರದ ಸೆಂಟ್ ಮೇರಿಸ್ ಶಾಲೆಯ ವಿದ್ಯಾರ್ಥಿನಿ ಬೃಂದಾ ಅವರು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ. ಒಟ್ಟು 625ಕ್ಕೆ 625 ಅಂಕಗಳನ್ನು ಗಳಿಸುವ ಮೂಲಕ ರಾಜ್ಯ ಮಟ್ಟದಲ್ಲಿ ಕೀರ್ತಿ ತಂದಿರುವ ಅವರು, ಎಲ್ಲಾ ವಿಷಯಗಳಲ್ಲೂ ನೂರಕ್ಕೆ ನೂರು ಅಂಕಗಳನ್ನು ಪಡೆದ ಏಳು ವಿದ್ಯಾರ್ಥಿಗಳಲ್ಲಿ ಒಬ್ಬರಾಗಿದ್ದಾರೆ.

ಬೃಂದಾ ಅವರು ಪ್ರಾಥಮಿಕ ಶಿಕ್ಷಣದಿಂದಲೇ ಓದಿನಲ್ಲಿ ಮೇಲುಗೈ ಸಾಧಿಸುತ್ತಾ ಬಂದಿದ್ದು, ಶಿಕ್ಷಕರ ಮಾರ್ಗದರ್ಶನ ಹಾಗೂ ಪೋಷಕರ ನಿರಂತರ ಪ್ರೋತ್ಸಾಹದೊಂದಿಗೆ ತಮ್ಮ ಗುರಿಯನ್ನು ಸಾಧಿಸಿದ್ದಾರೆ. ಶಿಸ್ತಿನ ಓದು, ನಿಯಮಿತ ಅಭ್ಯಾಸ ಮತ್ತು ಸ್ಪಷ್ಟವಾದ ಯೋಜನೆಯೇ ಅವರ ಯಶಸ್ಸಿನ ಮಂತ್ರವಾಗಿದೆ ಎಂದು ಶಿಕ್ಷಕರು ತಿಳಿಸಿದ್ದಾರೆ.

ಫಲಿತಾಂಶ ಪ್ರಕಟವಾದ ಕೂಡಲೇ ಶಾಲೆಯ ಆವರಣದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು, ಶಿಕ್ಷಕರು ಹಾಗೂ ಸಹಪಾಠಿಗಳು ಸಿಹಿ ಹಂಚಿ ಸಂಭ್ರಮಿಸಿದರು. ಬೃಂದಾ ಅವರ ಈ ಸಾಧನೆ ಇತರ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದ್ದು, ಶಾಲೆಯ ಹೆಗ್ಗಳಿಕೆಯನ್ನು ಮತ್ತಷ್ಟು ಹೆಚ್ಚಿಸಿದೆ.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.