ಮೂಡಿಗೆರೆ: ಕಳ್ಳಬೇಟೆಯಾಡಿ ಕಾಡುಪ್ರಾಣಿ ಸಾಗಾಟ: ಇಬ್ಬರು ಆರೋಪಿಗಳ ಬಂಧನ

ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಕಾಡುಪ್ರಾಣಿ ಕಳ್ಳಬೇಟೆ ನಡೆಸಿ ಅವುಗಳನ್ನು ಕಳ್ಳಸಾಗಣೆ ಮಾಡುತ್ತಿದ್ದ ಪ್ರಕರಣವನ್ನು ಅರಣ್ಯ ಇಲಾಖೆ ಬಯಲಿಗೆಳೆದು, ಮೂರು ಪುನುಗುಬೆಕ್ಕುಗಳ ಮೃತದೇಹಗಳೊಂದಿಗೆ ಇಬ್ಬರನ್ನು ಬಂಧಿಸಿರುವ ಘಟನೆ ಮೂಡಿಗೆರೆ ತಾಲ್ಲೂಕಿನ ಹಾಲೂರು ಸಮೀಪ ನಡೆದಿದೆ.

ಗೋಣಿಬೀಡು ಶಾಖೆಯ ಉಪ ವಲಯ ಅರಣ್ಯಾಧಿಕಾರಿಗಳ ತಂಡಕ್ಕೆ ಬಂದ ಖಚಿತ ಮಾಹಿತಿಯ ಮೇರೆಗೆ, ಜನ್ನಾಪುರದಿಂದ ಮೂಡಿಗೆರೆ ಕಡೆಗೆ ಸಾಗುತ್ತಿದ್ದ ಮಹೀಂದ್ರ ಬೊಲೆರೋ ಮ್ಯಾಕ್ಸ್ ಟ್ರಕ್ (KA-46-6330) ವಾಹನವನ್ನು ಮೂಡಿಗೆರೆ–ಬೇಲೂರು ಮುಖ್ಯರಸ್ತೆಯ ಜೋಗಣ್ಣನಕೆರೆ ಬಸ್ ನಿಲ್ದಾಣದ ಬಳಿ ತಪಾಸಣೆ ನಡೆಸಲಾಯಿತು.

ಈ ವೇಳೆ ವಾಹನವನ್ನು ನಿಲ್ಲಿಸಲು ಸೂಚಿಸಿದರೂ ಚಾಲಕ ವಾಹನವನ್ನು ನಿಲ್ಲಿಸದೆ ಮುಂದುವರಿದನು. ತಕ್ಷಣ ಬೆನ್ನಟ್ಟಿದ ಅರಣ್ಯ ಸಿಬ್ಬಂದಿ ಕೆಲ ದೂರದಲ್ಲಿ ವಾಹನವನ್ನು ನಿಲ್ಲಿಸುವಲ್ಲಿ ಯಶಸ್ವಿಯಾಗಿ, ಅದರಲ್ಲಿ ಇದ್ದ ನಾಲ್ವರು ಆರೋಪಿಗಳ ಪೈಕಿ ಇಬ್ಬರನ್ನು ಬಂಧಿಸಿದರು. ಉಳಿದ ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ.

ಬಂಧಿತ ಆರೋಪಿಗಳನ್ನು A1, A2 ಎಂದು ಗುರುತಿಸಲಾಗಿದ್ದು, ಪರಾರಿಯಾದವರು A3, A4 ಆಗಿದ್ದಾರೆ. ಪ್ರಕರಣದಲ್ಲಿ ಕೃಷ್ಣಪ್ಪ ಬಿನ್ ನಾಗರಾಜು (A5) ಕೂಡ ಭಾಗಿಯಾಗಿರುವುದು ತಿಳಿದುಬಂದಿದ್ದು, ಇವರು ತಲೆಮರೆಸಿಕೊಂಡಿದ್ದಾರೆ.

ವಾಹನ ಪರಿಶೀಲನೆಯ ವೇಳೆ ಪ್ಲಾಸ್ಟಿಕ್ ಚೀಲದಲ್ಲಿ ಸತ್ತ ಮೂರು ಪುನುಗುಬೆಕ್ಕುಗಳ ಮೃತದೇಹಗಳು ಪತ್ತೆಯಾಗಿವೆ. ಜೊತೆಗೆ ಕೃತ್ಯಕ್ಕೆ ಬಳಸಿದ ಎರಡು ಒಂಟಿನಳಿಕೆ ಬಂದೂಕುಗಳು, ನಾಲ್ಕು ಉಪಯೋಗಿಸದ ತೋಟಗಳು, ಒಂದು ಟಾರ್ಚ್ ಹಾಗೂ ಎರಡು ಮೊಬೈಲ್ ಫೋನ್‌ಗಳನ್ನು ಜಪ್ತಿ ಮಾಡಲಾಗಿದೆ.
ಬಂಧಿತ ಆರೋಪಿಗಳು ವಿಚಾರಣೆಯಲ್ಲಿ ಚಿಕ್ಕಮಗಳೂರು ತಾಲ್ಲೂಕಿನ ಕಳಸಾಪುರ ಹಾಗೂ ಮರ್ಲೆ ಗ್ರಾಮದ ಸುತ್ತಮುತ್ತಲಿನ ಅರಣ್ಯ ಪ್ರದೇಶಗಳಲ್ಲಿ ರಾತ್ರಿ ವೇಳೆ ಸರ್ಚ್‌ಲೈಟ್ ಬಳಸಿ ಕಳ್ಳಬೇಟೆ ನಡೆಸಿರುವುದಾಗಿ ಒಪ್ಪಿಕೊಂಡಿದ್ದಾರೆ. ನಂತರ ಬೇಟೆಯಾಡಿದ ಪ್ರಾಣಿಗಳನ್ನು ವಾಹನದಲ್ಲಿ ಸಾಗಿಸಿ ಮಾಂಸ ತಯಾರಿಸಲು ಉದ್ದೇಶಿಸಿದ್ದಾಗಿ ತಿಳಿದುಬಂದಿದೆ.

ಇದೇ ಪ್ರಕರಣದಲ್ಲಿ ಹಾಲೂರು ಗ್ರಾಮದ ಹೆಚ್.ಜಿ. ಕರುಣಾಕರಮೂರ್ತಿ (60) (A6) ಅವರು ತಮ್ಮ ಪರವಾನಗಿ ಹೊಂದಿದ ಒಂಟಿನಳಿಕೆ ಬಂದೂಕನ್ನು ನೀಡುವ ಮೂಲಕ ಕೃತ್ಯಕ್ಕೆ ಸಹಕರಿಸಿರುವುದಾಗಿ ಬಂಧಿತರು ಹೇಳಿಕೆ ನೀಡಿದ್ದಾರೆ. ಈ ಸಂಬಂಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ WLOR/No.03/2026-27, ದಿನಾಂಕ 22-04-2026ರಂದು ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

ಈ ಕಾರ್ಯಾಚರಣೆ ಉಪ ಅರಣ್ಯ ಸಂರಕ್ಷಣಾಧಿಕಾರಿ ರಮೇಶ್ ಬಾಬು ಎನ್. ಹಾಗೂ ಅರಣ್ಯ ಸಂರಕ್ಷಣಾಧಿಕಾರಿ ಆರ್.ಕೆ.ಟಿ. ಸಂಜಯ್ ಅವರ ಮಾರ್ಗದರ್ಶನದಲ್ಲಿ, ವಲಯ ಅರಣ್ಯಾಧಿಕಾರಿ ಮಂಜುನಾಥ ಜಿ., ಉಪ ವಲಯ ಅರಣ್ಯಾಧಿಕಾರಿ ರವಿರಾಜ್, ಗಸ್ತು ಪಾಲಕರಾದ ಪರಮೇಶ್, ಶಿವರಾಜ್, ಆದರ್ಶ್, ವೀರೇಶ್, ಉದಯ್, ಚಾಲಕ ನಟರಾಜ್ ಭಾಗವಹಿಸಿದ್ದರು. (ವರದಿ- ತನು ಕೊಟ್ಟಿಗೆಹಾರ)

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.