ಕಡೂರು: (ನ್ಯೂಸ್ ಮಲ್ನಾಡ್ ವರದಿ) ದೇವಸ್ಥಾನಕ್ಕೆ ತೆರಳಿ ಪೂಜೆ ಮುಗಿಸಿಕೊಂಡು ವಾಪಸ್ ಬರುತ್ತಿದ್ದ ವೇಳೆ ಬೈಕಿಗೆ ಹಾವು ಅಡ್ಡ ಬಂದ ಪರಿಣಾಮ ಮಹಿಳೆಯೊಬ್ಬರು ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡ ಘಟನೆ ಬಾಣಾವಾರ-ಸಖರಾಯಪಟ್ಟಣ ಮುಖ್ಯರಸ್ತೆಯಲ್ಲಿ ನಡೆದಿದೆ. ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಅರಕೆರೆ ಗ್ರಾಮದ ತಿಲೋತ್ತಮ (39) ಗಾಯಗೊಂಡ ಮಹಿಳೆ.
ಮಧು ಅವರು ಚಲಾಯಿಸುತ್ತಿದ್ದ ಬೈಕ್ನಲ್ಲಿ ತಿಲೋತ್ತಮ ಅವರು ಹಿಂಬದಿಯಲ್ಲಿ ಕುಳಿತು ದೇವಸ್ಥಾನದಿಂದ ಮನೆಗೆ ಹಿಂದಿರುಗುತ್ತಿದ್ದರು. ಈ ವೇಳೆ ಏಕಾಏಕಿ ಹಾವು ರಸ್ತೆ ದಾಟಿದ ಪರಿಣಾಮ ಸವಾರ ಮಧು ದಿಢೀರ್ ಬ್ರೇಕ್ ಹಾಕಿದ್ದಾರೆ. ಪರಿಣಾಮ ನಿಯಂತ್ರಣ ತಪ್ಪಿ ತಿಲೋತ್ತಮ ಅವರು ರಸ್ತೆಗೆ ಬಿದ್ದಿದ್ದಾರೆ. ಅಪಘಾತದಲ್ಲಿ ತಿಲೋತ್ತಮ ಅವರ ಎರಡು ಕಾಲುಗಳು ಹಾಗೂ ಬಲಭುಜಕ್ಕೆ ತೀವ್ರ ಗಾಯಗಳಾಗಿವೆ. ಕೂಡಲೇ ಸ್ಥಳೀಯರು ಗಾಯಾಳುವನ್ನು ಬಾಣಾವಾರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಚಿಕ್ಕಮಗಳೂರು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.

ಈ ಸಂಬಂಧ ಬೈಕ್ ಸವಾರ ಮಧು ವಿರುದ್ಧ ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












