ಸಿದ್ದಾಪುರ: (ನ್ಯೂಸ್ ಮಲ್ನಾಡ್ ವರದಿ) ಅತ್ತಿಮಂಗಲ-ಹೊಕ್ಕೇರಿ ರಸ್ತೆಯಲ್ಲಿ ಕಾರು ಚಾಲಕನ ಮೇಲೆ ಕಾಡಾನೆ ದಾಳಿಗೆ ಯತ್ನಿಸಿದ ಘಟನೆ ನಡೆದಿದ್ದು, ಚಾಲಕ ಸಮಯಪ್ರಜ್ಞೆಯಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಹಾಕತ್ತೂರು ಗ್ರಾಮದ ನಿವಾಸಿ ಸಮದ್ ಅವರು ಗುರುವಾರ ರಾತ್ರಿ ಸಿದ್ದಾಪುರದಿಂದ ಮರಗೋಡು ಮಾರ್ಗವಾಗಿ ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ ಅತ್ತಿಮಂಗಲದ ರಬ್ಬರ್ ತೋಟದ ಸಮೀಪ ಎರಡು ಸಲಗಗಳು ರಸ್ತೆ ಬದಿಯಲ್ಲಿ ನಿಂತಿರುವುದನ್ನು ಗಮನಿಸಿದ್ದಾರೆ. ಕಾಡಾನೆಗಳು ರಸ್ತೆಯಿಂದ ತೋಟದೊಳಗೆ ತೆರಳಿದ ಬಳಿಕ ಮುಂದುವರಿಯಲು ನಿರ್ಧರಿಸಿ ಕೆಲಕಾಲ ಕಾದಿದ್ದಾರೆ. ಆದರೆ ಆನೆಗಳು ರಸ್ತೆಯಿಂದ ಕದಲದೇ ನಿಂತಿದ್ದರಿಂದ ಸ್ವಲ್ಪ ಸಮಯದ ಬಳಿಕ ಕಾರನ್ನು ನಿಧಾನವಾಗಿ ಚಲಾಯಿಸಿದ್ದಾರೆ.

ಆನೆಗಳ ಸಮೀಪ ತಲುಪುತ್ತಿದ್ದಂತೆಯೇ ಸಲಗವೊಂದು ಏಕಾಏಕಿ ಕಾರಿನತ್ತ ದಾಳಿಗೆ ಮುಂದಾಗಿದೆ. ತಕ್ಷಣ ಎಚ್ಚೆತ್ತ ಸಮದ್ ಕಾರಿನ ವೇಗ ಹೆಚ್ಚಿಸಿ ಸ್ಥಳದಿಂದ ದೂರ ಸರಿದ ಪರಿಣಾಮ ಯಾವುದೇ ಅನಾಹುತ ಸಂಭವಿಸದೆ ಪಾರಾಗಿದ್ದಾರೆ.

ಇತ್ತೀಚೆಗೆ ಅತ್ತಿಮಂಗಲ, ಹೊಕ್ಕೇರಿ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ರಾತ್ರಿ ವೇಳೆ ವಾಹನ ಸಂಚಾರ ನಡೆಸುವುದು ಅಪಾಯಕಾರಿಯಾಗಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ರಸ್ತೆ ಬದಿಯಲ್ಲೇ ಕಾಡಾನೆಗಳು ನಿಲ್ಲುತ್ತಿರುವುದರಿಂದ ದ್ವಿಚಕ್ರ ವಾಹನ ಸವಾರರು ಸಂಚರಿಸಲು ಭಯಪಡುವಂತಾಗಿದೆ.
ಇದೇ ವೇಳೆ ಕಾಟಿಬಾಣೆ, ಸಂಪಿಗೆಕೊಲ್ಲಿ ಸೇರಿದಂತೆ ಸುತ್ತಮುತ್ತಲಿನ ಕಾಫಿ ತೋಟಗಳಲ್ಲೂ ಕಾಡಾನೆ ಹಿಂಡು ದಾಂದಲೆ ನಡೆಸುತ್ತಿದ್ದು, ಕಾಫಿ ಹಾಗೂ ಅಡಿಕೆ ಬೆಳೆಗಳಿಗೆ ಹಾನಿ ಉಂಟುಮಾಡುತ್ತಿದೆ. ತೋಟಗಳಲ್ಲೇ ಬೀಡುಬಿಟ್ಟಿರುವ ಕಾಡಾನೆಗಳಿಂದ ಕಾರ್ಮಿಕರು ಕೂಡ ಭಯದ ವಾತಾವರಣದಲ್ಲಿ ಕೆಲಸ ನಿರ್ವಹಿಸುವಂತಾಗಿದೆ.
ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿ ಕಾಡಾನೆಗಳನ್ನು ಬರಡಿ, ವಾಲ್ಕೂರು ಮಾರ್ಗವಾಗಿ ದುಬಾರೆ ಅರಣ್ಯ ಪ್ರದೇಶಕ್ಕೆ ಅಟ್ಟಿದರೂ, ಕೆಲವೇ ದಿನಗಳಲ್ಲಿ ಮತ್ತೆ ತೋಟ ಪ್ರದೇಶಗಳಿಗೆ ಮರಳುತ್ತಿವೆ ಎಂದು ಗ್ರಾಮಸ್ಥರು ದೂರಿದ್ದಾರೆ. ಕಾಡಾನೆ ಹಾವಳಿಯಿಂದ ಕಂಗಾಲಾಗಿರುವ ಗ್ರಾಮಸ್ಥರು, ಶಾಶ್ವತ ಪರಿಹಾರ ಕ್ರಮ ಕೈಗೊಂಡು ಕಾಡಾನೆಗಳನ್ನು ಕಾಡಿನೊಳಗೆ ಓಡಿಸಬೇಕೆಂದು ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.
















