ಕಡೂರು: ಪಿಕಪ್ ವಾಹನ ಡಿಕ್ಕಿ: ಮೊಪೆಡ್‌ ಸವಾರ ಸಾವು

ಕಡೂರು: (ನ್ಯೂಸ್ ಮಲ್ನಾಡ್ ವರದಿ) ಬೀರೂರು–ಯಗಟಿ ರಸ್ತೆಯ ಜಕ್ಕನಹಳ್ಳಿ ಕ್ರಾಸ್ ಸಮೀಪ ಬುಧವಾರ ರಾತ್ರಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೊಪೆಡ್ ಸವಾರರೊಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ.

ಮೃತರನ್ನು ಯಗಟಿ ಹೋಬಳಿಯ ನಾಗಗೊಂಡನಹಳ್ಳಿಯ ನಿವಾಸಿ ಹಾಗೂ ಕೃಷಿಕ ಚಂದ್ರಪ್ಪ (41) ಎಂದು ಗುರುತಿಸಲಾಗಿದೆ. ಚಂದ್ರಪ್ಪ ಅವರು ಅಭಿಷೇಕ್ ಎಂಬುವರೊಂದಿಗೆ ಮೊಪೆಡ್‌ನಲ್ಲಿ ಜಕ್ಕನಹಳ್ಳಿ ಕ್ರಾಸ್‌ನಲ್ಲಿರುವ ತಮ್ಮ ಜಮೀನಿನತ್ತ ತೆರಳುತ್ತಿದ್ದ ವೇಳೆ, ಬಿಸಿಲೆರೆ ಕಡೆಯಿಂದ ಬೀರೂರು ಕಡೆಗೆ ಸಂಚರಿಸುತ್ತಿದ್ದ ಬೊಲೆರೊ ಪಿಕಪ್ ವಾಹನ ಡಿಕ್ಕಿ ಹೊಡೆದಿದೆ.

ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಚಂದ್ರಪ್ಪ ಹಾಗೂ ಅಭಿಷೇಕ್ ಅವರನ್ನು ಪಿಕಪ್ ವಾಹನ ಚಾಲಕ ಬೀರೂರು ಆಸ್ಪತ್ರೆಗೆ ದಾಖಲಿಸಿದ್ದನು. ಪ್ರಾಥಮಿಕ ಚಿಕಿತ್ಸೆ ಬಳಿಕ ಹೆಚ್ಚಿನ ಚಿಕಿತ್ಸೆಯ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ ಹಿನ್ನೆಲೆಯಲ್ಲಿ ಗಾಯಾಳುಗಳನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿನ ವೈದ್ಯರ ಸಲಹೆ ಮೇರೆಗೆ ಶಿವಮೊಗ್ಗದ ಸರ್ಕಾರಿ ಆಸ್ಪತ್ರೆಗೆ ಸಾಗಿಸುತ್ತಿದ್ದ ವೇಳೆ ಚಂದ್ರಪ್ಪ ಮಾರ್ಗಮಧ್ಯೆಯೇ ಮೃತಪಟ್ಟಿದ್ದಾರೆ.

ಅಪಘಾತದಲ್ಲಿ ಗಾಯಗೊಂಡ ಅಭಿಷೇಕ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಭಿಷೇಕ್ ನೀಡಿದ ದೂರಿನ ಮೇರೆಗೆ ಯಗಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.