ಸೋಮವಾರಪೇಟೆ: (ನ್ಯೂಸ್ ಮಲ್ನಾಡ್ ವರದಿ) ತಾಲ್ಲೂಕಿನ ಯಡವನಾಡು ಮೀಸಲು ಅರಣ್ಯದ ಗೇಟ್ ಸಮೀಪ ಬೃಹತ್ ಗಾತ್ರದ ಹೆಬ್ಬಾವೊಂದು ರಸ್ತೆ ದಾಟುತ್ತಿರುವ ದೃಶ್ಯ ಗುರುವಾರ ತಡರಾತ್ರಿ ಕಂಡುಬಂದಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ಯಡವಾರೆ ಗ್ರಾಮದ ನಿವಾಸಿಯೊಬ್ಬರು ರಾತ್ರಿ ಸುಮಾರು 9 ಗಂಟೆ ವೇಳೆಗೆ ಕುಶಾಲನಗರದಿಂದ ತಮ್ಮ ಮನೆಗೆ ಹಿಂತಿರುಗುತ್ತಿದ್ದ ಸಂದರ್ಭದಲ್ಲಿ ರಸ್ತೆ ದಾಟುತ್ತಿದ್ದ ಬೃಹತ್ ಹೆಬ್ಬಾವನ್ನು ಗಮನಿಸಿದ್ದಾರೆ. ಸುಮಾರು 13 ಅಡಿಗೂ ಹೆಚ್ಚು ಉದ್ದವಿದ್ದ ಈ ಹೆಬ್ಬಾವಿನ ಚಲನವಲನವನ್ನು ಅವರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ.

ಯಡವನಾಡು ಮೀಸಲು ಅರಣ್ಯ ವ್ಯಾಪ್ತಿಯಲ್ಲಿ ಇಷ್ಟು ದೊಡ್ಡ ಗಾತ್ರದ ಹೆಬ್ಬಾವು ಕಾಣಿಸಿಕೊಂಡಿರುವುದು ಅಪರೂಪದ ಘಟನೆಯಾಗಿದ್ದು, ಸಾರ್ವಜನಿಕರ ಗಮನ ಸೆಳೆದಿದೆ. ಅರಣ್ಯದ ಸಮೀಪವಿರುವ ಪ್ರದೇಶಗಳಲ್ಲಿ ಸಂಚರಿಸುವವರು ಹಾಗೂ ಜಾನುವಾರುಗಳನ್ನು ಮೇಯಿಸಲು ತೆರಳುವವರು ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಸ್ಥಳೀಯರು ಮನವಿ ಮಾಡಿದ್ದಾರೆ.

















