ಕೊಪ್ಪ: ( ನ್ಯೂಸ್ ಮಲ್ನಾಡ್ ವರದಿ) ತಾಲೂಕಿನ ಕುಂಚೂರು ಗ್ರಾಮದಲ್ಲಿ ಕಾಡು ಪ್ರಾಣಿಯ ದಾಳಿಯಿಂದ ಗಾಯಗೊಂಡ ರೈತ ಅನಿಲ್ ಅವರ ಆರೋಗ್ಯ ವಿಚಾರಿಸಲು ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದ ಅಧ್ಯಕ್ಷರಾದ ವಿಶ್ವನಾಥ್ ಗದ್ದೆಮನೆ ಅವರು ಭೇಟಿ ನೀಡಿದರು.
ಈ ವೇಳೆ ಮಾತನಾಡಿದ ಅವರು, ಕಳೆದ ಕೆಲವು ದಿನಗಳಿಂದ ರೈತರು ಕಾಡಾನೆ ಹಾಗೂ ಕಾಡುಕೋಣಗಳ ದಾಳಿಯಿಂದ ಸಂಕಷ್ಟ ಅನುಭವಿಸುತ್ತಿದ್ದು, ಇದೀಗ ಕಾಡುಹಂದಿಗಳ ದಾಳಿಯ ಘಟನೆಗಳು ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಹೇಳಿದರು. ಕಾಡು ಪ್ರಾಣಿಗಳ ಹಾವಳಿಯಿಂದ ರೈತರ ಜೀವ ಹಾಗೂ ಬೆಳೆಗಳಿಗೆ ಅಪಾಯ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಮತ್ತು ಅರಣ್ಯ ಇಲಾಖೆ ತಕ್ಷಣ ಸೂಕ್ತ ಹಾಗೂ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ರೈತ ಒಕ್ಕೂಟದ ಕಸಬಾ ಹೋಬಳಿ ಅಧ್ಯಕ್ಷ ಪ್ರದೀಪ್ ಕುಂಚೂರು, ಎನ್.ಆರ್.ಪುರ ತಾಲೂಕು ಅಧ್ಯಕ್ಷ ಪ್ರದೀಪ್ ಕಿಚ್ಚೆಬ್ಬಿ, ಮಾಜಿ ತಾಲೂಕು ಪಂಚಾಯಿತಿ ಸದಸ್ಯ ಪೂರ್ಣಚಂದ್ರ, ತಾಲೂಕು ಪ್ರಧಾನ ಕಾರ್ಯದರ್ಶಿ ಕಾರ್ಬೈಲ್ ಮಂಜುನಾಥ್ ಗೌಡ, ದರ್ಶನ್ ಬಾಳಗಡಿ, ಸುಮಿತ್ ಗೌರಿಗದ್ದೆ, ರಾಜೇಶ್ ಸಿಸ್ಲೆ ಸೇರಿದಂತೆ ಹಲವರು ಉಪಸ್ಥಿತರಿದ್ದರು. (ವರದಿ: ಶಶಿ ಬೆತ್ತದಕೊಳಲು)












