ಎನ್. ಪುರ. ಪುರ: (ನ್ಯೂಸ್ ಮಲ್ನಾಡ್ ವರದಿ) ರೈತರ ಸಮಸ್ಯೆಗಳಿಗೆ ಸ್ಪಂದಿಸುವ ಉದ್ದೇಶದಿಂದ ಶೃಂಗೇರಿ ಕ್ಷೇತ್ರ ರೈತ ಒಕ್ಕೂಟ ಸ್ಥಾಪನೆ ಮಾಡಲಾಗಿದ್ದು, ಕಂದಾಯ ಇಲಾಖೆಯಿಂದ ರೈತರಿಗೆ ಅವಶ್ಯಕ ಮಾಹಿತಿ ಹಾಗೂ ಸಹಾಕರ ನೀಡಬೇಕೆಂದು ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದ ಅಧ್ಯಕ್ಷ ವಿಶ್ವನಾಥ್ ಗದ್ದೆಮನೆ ಆಗ್ರಹಿಸಿದರು.
ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದಿಂದ ಶನಿವಾರ ಆಯೋಜಿಸಿದ್ದ ತಹಶೀಲ್ದಾರ್ಗೆ ಹಲವು ದಾಖಲೆ ನೀಡುವಂತೆ ಮನವಿ ಸಲ್ಲಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಾಲ್ಲೂಕಿನ ಯಾವ ಗ್ರಾಮದಲ್ಲಿ ಯಾವ ಸರ್ವೆ ನಂಬರ್ನಲ್ಲಿ ಎಷ್ಟು ವಿಸ್ತೀರ್ಣದ ಗೋಮಾಳದ ಜಾಗವನ್ನು ಸೆಕ್ಷನ್ 17 ಮಾಡಲಾಗಿದೆ. ಯಾವ ಸರ್ವೆ ನಂಬರ್ನಲ್ಲಿ ಎಷ್ಟು ಕಂದಾಯ ಭೂಮಿ ಉಳಿಸಿಕೊಳ್ಳಲಾಗಿದೆ. ಪ್ರತಿ 100 ಗೋವುಗಳಿಗೆ ಕನಿಷ್ಠ 30 ಎಕರೆ ಗೋಮಾಳವನ್ನು ಮೀಸಲಿಡಬೇಕೆಂಬ ಸರ್ಕಾರದ ಆದೇಶವಿದೆ. ತಾಲ್ಲೂಕಿನಲ್ಲಿರುವ ಗೋವುಗಳ ಸಂಖ್ಯೆಗೆ ಅನುಗುಣವಾಗಿ ಗ್ರಾಮಗಳ ವ್ಯಾಪ್ತಿಯಲ್ಲಿ ಎಷ್ಟು ಎಕರೆ ಗೋಮಾಳಕ್ಕೆ ಮೀಸಲಿಡಲಾಗಿದೆ. 1980ರ ನಂತರ ಎಷ್ಟು ರೈತರಿಗೆ ಹಕ್ಕು ಪತ್ರ, ಸಾಗುವಳಿ ಪತ್ರ ನೀಡಲಾಗಿದೆ ಎಂಬ ಸಂಪೂರ್ಣ ಮಾಹಿತಿ ನೀಡಬೇಕು ಎಂದು ಆಗ್ರಹಿಸಿದರು.

ಸರ್ಕಾರ ನೇಮಿಸಿರುವ ಎಸ್ಐಟಿಯಿಂದ ಮುಂದಿನ 50 ವರ್ಷಗಳಲ್ಲಿ ಆಗಬಹುದಾದ ಜನಸಂಖ್ಯೆ ಅಂದಾಜಿಸಿ ನಾಗರಿಕ ಅಗತ್ಯಗಳನ್ನು ಮೀಸಲಿಟ್ಟು ಅರಣ್ಯ ಸ್ವರೂಪದ ಭೂಮಿಗಳನ್ನು ಮಾತ್ರ ಡೀಮ್ಸ್ ವ್ಯಾಪ್ತಿಗೆ ನಕ್ಷೆ ತಯಾರಿಸಬೇಕು. ಪೋಡಿ ಮಾಡಲು ಪಹಣಿಯಲ್ಲಿ ಅರಣ್ಯ ಎಂದು ನಮೂದಾಗಿರುವ ಸರ್ವೆನಂಬರ್ಗಳನ್ನು ಮಾತ್ರ ಅರಣ್ಯ ಇಲಾಖೆ ಎನ್ಸಿ ಕಳುಹಿಸಬೇಕು. ಉಳಿದವುಗಳನ್ನು ಅರಣ್ಯ ಇಲಾಖೆ ಅಭಿಪ್ರಾಯಕ್ಕೆ ಕಳುಹಿಸದೆ ರೈತರಿಗೆ ಪೋಡಿ ಮಾಡಿಕೊಡಬೇಕು ಎಂದರು.
ಜಂಟಿ ಸಮೀಕ್ಷೆ ವಿಳಂಬ ಮಾಡುತ್ತಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ರೈತರು ಫಾರಂ ನಂ 57ರಲ್ಲಿ ಸಲ್ಲಿಸಲಾಗಿರುವ ಅರ್ಜಿಗಳನ್ನು ಫಾರಂ ನಂ 53ಕ್ಕೆ ಪರಿವರ್ತಿಸಿ, ಅರ್ಹ ಪ್ಲಾಂಟೇಷನ್ ರೈತರಿಗೆ ಸಾಗುವಳಿ ನೀಡಬೇಕು ಎಂದರು.
ಅರಣ್ಯ ಇಲಾಖೆಯಿಂದ ಕಂದಾಯ ಇಲಾಖೆಗೆ ಹಿಂದಕ್ಕೆ ಪಡೆಯಲಾದ ಭೂಮಿಗಳ ಬಗ್ಗೆ ಜನವರಿ 3, 1991ರ ಆದೇಶವನ್ನು ಕಡ್ಡಾಯವಾಗಿ ಕಂದಾಯ ಇಲಾಖೆ ಪಾಲಿಸಬೇಕು. ಅರಣ್ಯ ವ್ಯವಸ್ಥಾಪನಾ ಅಧಿಕಾರಿ(ಎಫ್ಎಸ್ಒ) ಬಳಿ ಇರುವ ಸೆಕ್ಷನ್ 1/4 ಕಡತಗಳನ್ನು ಪುನರ್ ಪರಿಶೀಲನೆ ಮಾಡಿ ರೈತರಿಗೆ ತಕರಾರು ಸಲ್ಲಿಸಲು ಅವಕಾಶ ಮಾಡಿಕೊಡಬೇಕು. ತಹಶೀಲ್ದಾರ್ ಅವರು ಗ್ರಾಮಗಳಿಗೆ ಗೋಮಾಳ ನಿಗದಿಗೊಳಿಸಿ, 94 ಸಿ, 94 ಸಿಸಿ ಪ್ರಕರಣಗಳನ್ನು ಹಾಗೂ ಫಾರಂ ಸಂಖ್ಯೆ 50, 53, ಮತ್ತು 57 ಅರ್ಜಿಗಳ ಪ್ರಕರಣಗಳನ್ನು ವಿಲೇವಾರಿ ಮಾಡಿ ನಂತರ ಮುಂದಿನ 50 ವರ್ಷಗಳ ಜನಸಂಖ್ಯೆಯ ಅವಶ್ಯಕತೆಗೆ ಭೂಮಿ ಉಳಿಸಿಕೊಂಡು ನಂತರ ಅರಣ್ಯ ಇಲಾಖೆಗೆ ಹಸ್ತಾಂತರಿಸಬೇಕು ಎಂದರು.
ಅಕ್ರಮ ಸಕ್ರಮದಡಿ ಫಾರಂ 50, 53, 57 ಅಡಿ ಹಾಗೂ 94 ಸಿ ಮತ್ತು 94 ಸಿಸಿ ಅಡಿ ಮಂಜೂರು ಮಾಡಲಾಗದ ಅರ್ಜಿಗಳಿಗೆ ಸೂಕ್ತಕಾರಣ ನೀಡಬೇಕು. ಭದ್ರಾ ಅಣೆಕಟ್ಟೆ ನಿರ್ಮಾಣದಿಂದ ನಿರಾಶ್ರಿತರಾದ ಜನರಿಗೆ ಬದಲಿ ಜಮೀನು ನೀಡಿಲ್ಲ. ಬದಲಿ ಜಮೀನು ನೀಡಿದ್ದರೂ ಕೆಲವರಿಗೆ ಸಾಗುವಳಿ ಪತ್ರ ನೀಡಿಲ್ಲ. ಪಕ್ಕಾಪೋಡಿ ಮಾಡಿಕೊಟ್ಟಿಲ್ಲ. ಈ ಬಗ್ಗೆ ಸೂಕ್ತ ಕಾರಣ ನೀಡಬೇಕು. ಅರಣ್ಯ ಹಕ್ಕು ಕಾಯ್ದೆಯಡಿ ಸೂಕ್ತ ದಾಖಲೆಗಳನ್ನು ನೀಡಿದ್ದರೂ ಇದನ್ನು ಪರಿಗಣಿಸಿಲ್ಲ. ಇದರ ಪುನರ್ ಪರಿಶೀಲನೆಗೆ ಅವಕಾಶ ಮಾಡಿಕೊಡಬೇಕು. 1ಚೀಲ ಯೂರಿಯಾ ಗೊಬ್ಬರಕ್ಕೆ 1ಬಾಟಲಿ ನ್ಯಾನೊ ಖರೀದಿಸಬೇಕು ಎಂದು ವ್ಯಾಪಾರಸ್ಥರು ಕಡ್ಡಾಯಗೊಳಿಸಿದ್ದು, ಇದರ ಬಗ್ಗೆ ಪರಿಶೀಲನೆ ಮಾಡಬೇಕು ಎಂದು ಆಗ್ರಹಿಸಿದರು.
ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದ ಪ್ರದೀಪ್ ಕಿಚ್ಚಬ್ಬಿ, ಹಂಚಿನಮನೆ ರಾಘವೇಂದ್ರ, ಕ್ಷೇವಿಯಾರ್, ಕಿರಣ್ ಗುಬ್ಬಿಗಾ, ವಿಕಾಸ್, ಪದಾಧಿಕಾರಿಗಳು ಭಾಗವಹಿಸಿದ್ದರು.












