ಶಿವಮೊಗ್ಗ: (ನ್ಯೂಸ್ ಮಲ್ನಾಡ್ ವರದಿ) ಭದ್ರಾವತಿ ತಾಲೂಕಿನ ಶಂಕರಘಟ್ಟದಲ್ಲಿರುವ ಜಿಲ್ಲಾ ಕೇಂದ್ರ ಸಹಕಾರಿ (ಡಿಸಿಸಿ) ಬ್ಯಾಂಕ್‌ನ ಶಾಖೆಗೆ ಮಂಗಳವಾರ ಬೆಳಿಗ್ಗೆ ಅನಿರೀಕ್ಷಿತ ಅತಿಥಿಯಂತೆ ಜಿಂಕೆಯೊಂದು ನುಗ್ಗಿ ಕೆಲಕಾಲ ಆತಂಕ ಹಾಗೂ ಕುತೂಹಲ ಮೂಡಿಸಿದ ಘಟನೆ ನಡೆದಿದೆ. ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದ ಸಿಬ್ಬಂದಿ ಸಮಯಪ್ರಜ್ಞೆ ಮೆರೆದು ಜಿಂಕೆಯನ್ನು ರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ.
ಇದನ್ನೂ ಓದಿ: ರೈತರಿಗೆ ಸಿಹಿ ಸುದ್ದಿ ಕೊಟ್ಟ ರಾಜ್ಯ ಸರ್ಕಾರ; ಬೆಂಬಲ ಬೆಲೆ ಯೋಜನೆಯಡಿಯಲ್ಲಿ ವಿವಿಧ ಬೆಳೆಗಳ ಖರೀದಿ ಅವಧಿ ವಿಸ್ತರಣೆ

ಕುವೆಂಪು ವಿಶ್ವವಿದ್ಯಾಲಯದ ಆವರಣದ ಸಮೀಪವಿರುವ ಅರಣ್ಯ ಪ್ರದೇಶದಿಂದ ಹೊರಬಂದಿದ್ದ ಜಿಂಕೆಯನ್ನು ಬೀದಿನಾಯಿಗಳ ಹಿಂಡು ಬೆನ್ನಟ್ಟಿವೆ. ನಾಯಿಗಳಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಗಾಬರಿಯಿಂದ ಓಡಿದ ಜಿಂಕೆ, ವಿಶ್ವವಿದ್ಯಾಲಯದ ಆವರಣದಿಂದ ಜಿಗಿದು ನೇರವಾಗಿ ಪಕ್ಕದಲ್ಲೇ ಇದ್ದ ಡಿಸಿಸಿ ಬ್ಯಾಂಕ್‌ನೊಳಗೆ ನುಗ್ಗಿದೆ.

ಬ್ಯಾಂಕ್‌ನೊಳಗೆ ನುಗ್ಗಿದ ಜಿಂಕೆ ದಾರಿ ಕಾಣದೆ ಗಾಬರಿಯಲ್ಲಿ ಅಲ್ಲಿದ್ದ ಗಾಜಿನ ಬಾಗಿಲಿಗೆ ರಭಸವಾಗಿ ಗುದ್ದಿದೆ. ಇದರಿಂದಾಗಿ ಜಿಂಕೆ ಸ್ಥಳದಲ್ಲೇ ಕುಸಿದು ಬಿದ್ದಿತ್ತು. ಈ ವೇಳೆ ಬ್ಯಾಂಕ್‌ನಲ್ಲಿದ್ದ ಸಿಬ್ಬಂದಿ ಹಾಗೂ ಗ್ರಾಹಕರು ಒಂದು ಕ್ಷಣ ದಿಕ್ಕಾಪಾಲಾಗಿ ಓಡಿದರು. ಆದರೆ ತಕ್ಷಣವೇ ಎಚ್ಚೆತ್ತುಕೊಂಡ ಸಿಬ್ಬಂದಿಗಳು ಬ್ಯಾಂಕ್‌ನ ಗೇಟ್‌ಗಳನ್ನು ಬಂದ್ ಮಾಡಿ ಜಿಂಕೆ ಹೊರಹೋಗದಂತೆ ತಡೆದರು.
ಬ್ಯಾಂಕ್ ಸಿಬ್ಬಂದಿ ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದ ಸಿಬ್ಬಂದಿಗಳು, ಗಾಯಗೊಂಡಿದ್ದ ಜಿಂಕೆಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಸುರಕ್ಷಿತವಾಗಿ ರಕ್ಷಿಸಿ ಬಳಿಕ ಜಿಂಕೆಯನ್ನು ಸಮೀಪದ ಅರಣ್ಯ ಪ್ರದೇಶಕ್ಕೆ ಬಿಡಲಾಯಿತು.













