ಶೃಂಗೇರಿ: ಕಳೆದ 14 ವರ್ಷಗಳಿಂದ ಬಿಇಒ ಕಚೇರಿಯ ಕುರ್ಚಿ ಒಬ್ಬ ಅಧಿಕಾರಿಯ ಹಿಡಿತದಲ್ಲೇ ಇದ್ದು, ಶೃಂಗೇರಿ ಬಿಇಒ ಕಚೇರಿಗೆ ಅದ್ಯಾವ ಗರ ಬಡಿದಿದೆಯೋ ಗೊತ್ತಿಲ್ಲ ಅಂತ ಇದ್ದಾರೆ ಸಾರ್ವಜನಿಕರು. ಹೌದು, ಬಿಇಒ ಕುರ್ಚಿ ಖಾಲಿಯಾದಾಗ ಅದೇ ತಾಲ್ಲೂಕಿನ ಬಿಆರ್‌ಸಿ ಅಧಿಕಾರಿ ಅಥವಾ ಪ್ರೌಢಶಾಲೆಯ ಹಿರಿಯ ಹೆಡ್ ಮಾಸ್ಟರ್ ಬಿಇಒ ಪ್ರಭಾರದಲ್ಲಿ ಇರಿಸಬೇಕಾಗಿರುತ್ತದೆ. ಆದರೆ, ಇಷ್ಟು ವರ್ಷ ಅನಿವಾರ್ಯವಾಗಿ ಸರ್ಕಾರಿ ಪ್ರೌಢಶಾಲೆ ಹೊಳೆಕೊಪ್ಪದ ಮುಖ್ಯೋಪಾಧ್ಯಾಯನಾಗಿದ್ದು, ಕಳೆದ 5-6 ವರ್ಷಗಳಿಂದ ಬಿಆರ್‌ಸಿ ಅಧಿಕಾರಿಯೂ ಆಗಿದ್ದು, ಇದು ಸಾಲದೆಂಬಂತೆ ಸಿಡಿಪಿಒ ಆಗಿಯೂ ಕರ್ತವ್ಯ ನಿರ್ವಹಿಸುತ್ತಿದ್ದ ಒಬ್ಬ ಅಧಿಕಾರಿಯೇ ಬಿಇಒ ಕುರ್ಚಿಯಲ್ಲಿ ಕೂತು ಅಧಿಕಾರ ನಡೆಸುವ ಅವಕಾಶ ಸಿಕ್ಕಿದೆ. ಇಲ್ಲಿಗೆ ಖಾಯಂ ಅಧಿಕಾರಿಗಳು ಬಂದರಂತೆ ಎಂದು ತಿಳಿಯುವ ಮೊದಲೇ ಹೋದರಂತೆ ಎಂದು ತಿಳಿಯುವಷ್ಟು ವೇಗವಾಗಿ ವರ್ಗಾವಣೆ, ಮುಂಬಡ್ತಿ ಅಥವಾ ನಿವೃತ್ತಿ ಕಾರಣದಿಂದ ಇಲ್ಲಿಂದ ಹೋಗುತ್ತಾರೆ.
ಇದನ್ನೂ ಓದಿ; ಇಂದಿನ ಮಾರುಕಟ್ಟೆಯಲ್ಲಿ ಅಡಿಕೆ ರೇಟ್ ಹೇಗಿದೆ?; ಏರಿಕೆಯಾಗಿದೆಯಾ? ಅಥವಾ ಇಳಿಕೆನಾ?

ಕಳೆದ 14 ವರ್ಷಗಳಲ್ಲಿ ದೇವಾಲೆಕೊಪ್ಪ, ಕಾವಡಿ, ತೊರೆಹಡ್ಲು, ಹರೂರು, ಹೆಗ್ಗದ್ದೆ, ಹಂಚಿನಕೊಡಿಗೆ, ಉಳುವೆ, ಶೃಂಗೇರಿ ಉರ್ದು ಶಾಲೆ ಸೇರಿದಂತೆ 14 ಕ್ಕೂ ಹೆಚ್ಚು ಶಾಲೆಗಳು ಮುಚ್ಚಿದವು. ಈ ಶಾಲೆಗಳ ಶಿಕ್ಷಕರು ಹೆಚ್ಚುವರಿ ವರ್ಗಾವಣೆ ನಿಯಮದಡಿ ತರೀಕೆರೆ, ಕಡೂರು, ಅಜ್ಜಂಪುರ ಸೇರಿದಂತೆ ಬಯಲು ಸೀಮೆಗೆ ಹೋದದ್ದು ಶಾಲೆಗಳು ಮುಚ್ಚಿದ್ದಕ್ಕೆ ಹಿಡಿದ ಕನ್ನಡಿಯಾಗಿದೆ. ಆದರೆ ಪ್ರಭಾರಿ ಅಧಿಕಾರಿ ಮಾತ್ರ ಜಾಣಮೌನವಾಗಿದ್ದು ಮೌನಂ ಸಮ್ಮತಿ ಎಂಬಂತಾಗಿದೆ. ಇತ್ತೀಚೆಗೆ ಈ ಪ್ರಭಾರಿ ಬಿಇಒ ಕೊಪ್ಪ ತಾಲ್ಲೂಕಿನ ಕೆಪಿಎಸ್ ಶಾಲೆಗೆ ವರ್ಗಾವಣೆ ಆದಾಗ ಶೃಂಗೇರಿಯ ಪ್ರಾಮಾಣಿಕ ಕಳಕಳಿಯ ಶಿಕ್ಷಕರು ಹೊಸ ಭರವಸೆಯೊಂದಿಗೆ ಶಾಲೆಗಳ ಶ್ರೇಯೋಭಿವೃದ್ದಿಗಾಗಿ ಕನಸು ಕಂಡರು.
ಇನ್ನು ಶಿಕ್ಷಣ ಇಲಾಖೆ ಆಯುಕ್ತರ ಸುತ್ತೋಲೆ ಹೇಳುವ ಪ್ರಕಾರ, ಶಿಕ್ಷಣ ಇಲಾಖೆಯಲ್ಲಿ ಜಿಲ್ಲಾ ಉಪನಿರ್ದೇಶಕರು, ಡಯಟ್ ಪ್ರಾಂಶುಪಾಲರು ಮತ್ತು ಪದನಿಮಿತ್ತ ಉಪನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಮುಂತಾದ ಆಡಳಿತಾತ್ಮಕ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿಗಳ ಬಡ್ತಿ, ವರ್ಗಾವಣೆ, ನಿವೃತ್ತಿ ಮುಂತಾದ ಕಾರಣಗಳಿಂದ ಹುದ್ದೆ ತೆರವಾದಾಗ ಖಾಯಂ ನೇಮಕಾತಿ ಮಾಡುವವರೆಗೆ ಆಡಳಿತದ ಹಿತದೃಷ್ಠಿಯಿಂದ ಬೇರೊಬ್ಬ ಅಧಿಕಾರಿಯನ್ನು ತಾತ್ಕಾಲಿಕವಾಗಿ ಹೆಚ್ಚುವರಿ ಪ್ರಭಾರ ವ್ಯವಸ್ಥೆ ಮಾಡಬೇಕಾಗಿರುವುದು ಅನಿವಾರ್ಯವಾಗಿದೆ.
ಇದನ್ನೂ ಓದಿ; ಮತ್ತೆ APL-BPL ಕಾರ್ಡ್ ಗೆ ಅರ್ಜಿ ಸಲ್ಲಿಕೆ ಆರಂಭ; ಈ ದಾಖಲೆಗಳನ್ನು ರೆಡಿ ಇಟ್ಟುಕೊಳ್ಳಿ..!
ಅಂಥಹಾ ಸಂದರ್ಭದಲ್ಲಿ ತಾತ್ಕಾಲಿಕ ಹೆಚ್ಚುವರಿ ಪ್ರಭಾರ ವ್ಯವಸ್ಥೆ ಮಾಡುವಾಗ ಜೇಷ್ಠತಾನುಸಾರ ಹಿರಿಯ ಅಧಿಕಾರಿಯನ್ನು ಹೆಚ್ಚುವರಿ ಪ್ರಭಾರದಲ್ಲಿಡಬೇಕಾದುದು ಸಾಮಾನ್ಯ ನಿಯಮವಾಗಿದೆ. ಜೇಷ್ಠತೆಯಲ್ಲಿ ಕಿರಿಯದಾದದ ಅಧಿಕಾರಿಯನ್ನು ಉನ್ನತ ಹುದ್ದೆಯ ಪ್ರಭಾರದಲ್ಲಿಡುವುದರಿಂದ ಹಿರಿಯ ಅಧಿಕಾರಿಗಳಿಗೆ ನೈತಿಕ ತೇಜೋವದೆ ಉಂಟಾಗಿ ಅದರಿಂದ ಸುಗಮ ಆಡಳಿತ ನಿರ್ವಹಣೆಗೆ ಅಡಚಣೆಯಾಗುತ್ತದೆ. ಆದ್ದರಿಂದ ಕೆಪಿಎಸ್‌ಆರ್ ನಿಯಮ ೬೮ರ ಅಡಿಯಲ್ಲಿ ತಾತ್ಕಾಲಿಕವಾಗಿ ಹೆಚ್ಚವರಿ ಪ್ರಭಾರ ವ್ಯವಸ್ಥೆ ಮಾಡಬೇಕಾದ ಸಂದರ್ಭದಲ್ಲಿ ಕೆಲವು ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗುತ್ತದೆ.
ಕ್ಷೇತ್ರ ಶಿಕ್ಷಣಾಧಿಕಾರಿ ಹುದ್ದೆ ತೆರವಾದ ಸಂದರ್ಭದಲ್ಲಿ ಸ್ಥಳೀಯವಾಗಿ ಡಯಟ್ ಇದ್ದಲ್ಲಿ ಇಲ್ಲಿನ ಉಪನ್ಯಾಸಕರ ಪೈಕಿ ಸೇವಾ ಜೇಷ್ಠತೆಯಲ್ಲಿ ಹಿರಿಯ ಅಧಿಕಾರಿಗೆ ಹೆಚ್ಚುವರಿ ಪ್ರಭಾರವನ್ನು ವಹಿಸಿಕೊಡುವುದು. ಡಯಟ್ ಇಲ್ಲದ ಸಂದರ್ಭದಲ್ಲಿ ಸ್ಥಳೀಯ ಬಿಆರ್‌ಸಿ ಕೋ ಆರ್ಡಿನೇಟರ್ ಕೇಂದ್ರ ಸ್ಥಾನದಲ್ಲಿರುವ ಸರ್ಕಾರಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕರ ಪೈಕಿ ಸೇವಾ ಜೇಷ್ಠತೆಯಲ್ಲಿ ಹಿರಿತನ ಹೊಂದಿದ ಅಧಿಕಾರಿಗೆ ಹೆಚ್ಚುವರಿ ಪ್ರಭಾರವನ್ನು ವಹಿಸಿಕೊಡಬೇಕಾಗುತ್ತದೆ ಎಂಬ ನಿಯಮವಿದೆ.
ಇದನ್ನೂ ಓದಿ; ಅಡುಗೆ ಎಣ್ಣೆ ದರ ದಿಢೀರ್ ಏರಿಕೆ; ಎಷ್ಟಿದೆ ಗೊತ್ತಾ?
ಆದರೆ, ಈ ನಿಯಮಗಳನ್ನು ಗಾಳಿಗೆ ತೂರಿ ಶಾಸಕರ ಒತ್ತಾಸೆ ಮೇರೆಗೆ ಅವರ ಆಪ್ತರಿಗೆ ನಿಯಮಾವಳಿಯಲ್ಲಿ ಅವಕಾಶ ಇಲ್ಲದಿದ್ದಾಗಿಯೂ ಜಿ.ಪಂ ಹಿರಿಯ ಅಧಿಕಾರಿಗಳು ತಾಲ್ಲೂಕಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪ್ರೌಢ ಶಾಲಾ ಮುಖ್ಯೋಪಾದ್ಯಾಯರ ಅಭಿಮತ ಪಡೆಯದೇ ಏಕಪಕ್ಷೀಯವಾಗಿ ಕೊಪ್ಪ ತಾಲ್ಲೂಕಿನ ಕೆಪಿಎಸ್ ಪ್ರೌಢಶಾಲೆಯ ಉಪ ಪ್ರಾಂಶುಪಾಲರಿಗೆ ಇನ್ನೊಂದು ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಪ್ರಭಾರ ವಹಿಸಿರುವುದು ಆಶ್ಚರ್ಯವೇ ಸರಿ.
ಒಂದು ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಿಗೆ ವಾರದಲ್ಲಿ 8-10 ಅವಧಿ ಪಾಠ ಮಾಡಬೇಕಿರುತ್ತದೆ. ಹಾಗೂ ಶಾಲೆಯ ಸರ್ವಾಂಗಿಣ ಅಭಿವೃದ್ದಿ ವಿದ್ಯಾರ್ಥಿಗಳ ಶೈಕ್ಷಣಿಕ ಹಿತ ಕಾಯಬೇಕಾದ ಮಹತ್ತರ ಜವಾಬ್ದಾರಿ ಇರುತ್ತದೆ. ಕ್ಷೇತ್ರ ಶಿಕ್ಷಣಾಧಿಕಾರಿಗೆ ಸಂಪೂರ್ಣ ತಾಲ್ಲೂಕಿನ ಜವಾಬ್ದಾರಿ ಇದ್ದು ಪಕ್ಕದ ತಾಲ್ಲೂಕಿನಿಂದ ಪ್ರೌಢಶಾಲೆಯ ವಿದ್ಯಾರ್ಥಿಗಳ ಹಿತವನ್ನು ಕಡೆಗಣಿಸಿ ಶೃಂಗೇರಿ ತಾಲ್ಲೂಕಿನ ಶೈಕ್ಷಣಿಕ ಪ್ರಗತಿಗೆ ಕುಂಟಿತವಾಗಲು ಕಾರಣರಾರು ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
ಇದನ್ನೂ ಓದಿ; ಕೇವಲ 10 ಸಾವಿರಕ್ಕೆ ಮನೆಗೆ ತರಬಹುದು ಈ ಬೈಕ್; ಹೇಗೆ ಗೊತ್ತಾ? ಇಲ್ಲಿದೆ ನೋಡಿ
ಈ ಸಂಬಂಧ ಶಿಕ್ಷಣ ಇಲಾಖಾ ಆಯುಕ್ತರಿಂದಲೇ ಸ್ಪಷ್ಟನೆ ನೀಡಬೇಕಿದೆ.
ಇದನ್ನೂ ಓದಿ; ಕಡಿಮೆ ಬೆಲೆಗೆ ಐಫೋನ್ 16 ಖರೀದಿಸಬೇಕಾ?; ಹಳೆಯ ಸ್ಮಾರ್ಟ್ ಫೋನ್ ಮರಳಿಸಿದರೆ ಭರ್ಜರಿ ಡಿಸ್ಕೌಂಟ್












