ಬೆಳ್ತಂಗಡಿ: (ನ್ಯೂಸ್ ಮಲ್ನಾಡ್ ವರದಿ) ಧರ್ಮಸ್ಥಳ ತಲೆಬುರುಡೆ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದ (ಎಸ್‌ಐಟಿ) ಎಸ್ಪಿ ಸಿ.ಎ. ಸೈಮನ್ ಪ್ರಯಾಣಿಸುತ್ತಿದ್ದ ಕಾರು ಪಲ್ಟಿಯಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಸಮೀಪ ಮಂಗಳವಾರ ನಡೆದಿದೆ.
ಎಸ್‌ಐಟಿ ಎಸ್ಪಿ ಸಿ.ಎ. ಸೈಮನ್, ಇನ್ಸ್‌ಪೆಕ್ಟರ್ ಕುಸುಮಾಧರ್, ಚಾಲಕ ಹಾಗೂ ಸಿಬ್ಬಂದಿಯೊಬ್ಬರನ್ನು ಒಳಗೊಂಡ ತಂಡ ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಎಸ್‌ಐಟಿ ತನಿಖಾಧಿಕಾರಿಯಾಗಿರುವ ಜೀತೇಂದ್ರ ದಯಾಮ ಅವರನ್ನು ಭೇಟಿಯಾಗಲು ತೆರಳುತ್ತಿತ್ತು. ಈ ವೇಳೆ ಚಾರ್ಮಾಡಿ ಸಮೀಪ ಇನ್ನೋವಾ ಕಾರು ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.

ಅಪಘಾತದಲ್ಲಿ ಎಸ್ಪಿ ಸೈಮನ್, ಇನ್ಸ್‌ಪೆಕ್ಟರ್ ಕುಸುಮಾಧರ್, ಕಾರು ಚಾಲಕ ಹಾಗೂ ಸಿಬ್ಬಂದಿಯೊಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಗಾಯಗೊಂಡವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು, ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ.

ಘಟನೆಯ ಕುರಿತು ಸ್ಥಳೀಯ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.













