ಬೀರೂರು (ಕಡೂರು): (ನ್ಯೂಸ್ ಮಲ್ನಾಡ್ ವರದಿ) ಪಟ್ಟಣದ ರಾಜಾಜಿನಗರ ಬಡಾವಣೆಯೊಂದರಲ್ಲಿ ಮನೆಯ ಮಾಲೀಕರು ಊರಿಗೆ ತೆರಳಿದ್ದ ವೇಳೆ ಕಳ್ಳರು ಮನೆಯ ಬಾಗಿಲು ಮುರಿದು, ಒಳನುಗ್ಗಿ ಚಿನ್ನಾಭರಣ ಹಾಗೂ ಬೆಳ್ಳಿ ವಸ್ತುಗಳನ್ನು ಕಳವು ಮಾಡಿದ್ದಾರೆ.
ಎಸ್‌ಜೆಎಂ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲ ಕುಮಾರ್ ಅವರಿಗೆ ಸೇರಿದ ಮನೆಯಲ್ಲಿ ಕಳವು ನಡೆದಿದ್ದು, ಕಳುವಾದ ವಸ್ತುಗಳ ಒಟ್ಟು ಮೌಲ್ಯ ₹1.45 ಲಕ್ಷ ಎಂದು ಅಂದಾಜಿಸಲಾಗಿದೆ.

ಕುಮಾರ್ ಅವರು ಕಳೆದವಾರ ರಜೆ ಪ್ರಯುಕ್ತ ಸ್ವಗ್ರಾಮವಾದ ಹೊಸದುರ್ಗ ತಾಲ್ಲೂಕಿನ ದುಗ್ಗಾವರಕ್ಕೆ ತೆರಳಿದ್ದರು. ಸೋಮವಾರ ಬೆಳಗಿನ ಜಾವ ಸಹೋದ್ಯೋಗಿ ರಾಜೇಶ್ ಅವರು ದೂರವಾಣಿ ಮೂಲಕ ಮನೆಯ ಬಾಗಿಲು ಮುರಿದಿರುವುದಾಗಿ ಮಾಹಿತಿ ನೀಡಿದರು. ಕಳ್ಳರು ಮನೆಯ ಬೀಗ ಮುರಿದು ಒಳನುಗ್ಗಿ ಬೆಡ್‌ರೂಮ್‌ನ ವಾರ್ಡ್ ರೋಬ್‌ನಲ್ಲಿ ಇರಿಸಿದ್ದ ಬಂಗಾರದ ಓಲೆ, ಜುಮುಕಿ, ಬೆಳ್ಳಿಯ ಚೊಂಬು ಹಾಗೂ ನಾಲ್ಕು ಬೆಳ್ಳಿಯ ದೀಪಗಳನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದಾರೆ.

ಕಳುವಾದ ಸ್ವತ್ತುಗಳನ್ನು ಪತ್ತೆಹಚ್ಚಿ ಆರೋಪಿಗಳನ್ನು ಬಂಧಿಸುವಂತೆ ಕುಮಾರ್ ಅವರು ಬೀರೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.













