ಚನ್ನರಾಯಪಟ್ಟಣ: (ನ್ಯೂಸ್ ಮಲ್ನಾಡ್ ವರದಿ) ಆಸ್ತಿ ಮಾರಾಟದ ವಿಚಾರವಾಗಿ ತಂದೆ-ಮಗನ ನಡುವೆ ಉಂಟಾದ ಜಗಳ ದುರಂತದಲ್ಲಿ ಅಂತ್ಯಗೊಂಡಿದ್ದು, ತಂದೆಯನ್ನು ಕೊಲೆಗೈದ ಪುತ್ರ ಬಳಿಕ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ಪಟ್ಟಣದ ಗೂರಮಾರನಹಳ್ಳಿ ವಾರ್ಡ್‌ನಲ್ಲಿ ನಡೆದಿದೆ.
ನಿವೃತ್ತ ಮುಖ್ಯಶಿಕ್ಷಕ ಬಿ.ಎನ್. ಚನ್ನೇಗೌಡ (73) ಕೊಲೆಯಾದವರು. ಅವರ ಪುತ್ರ ಬಿಂದುಕುಮಾರ್ (42) ತಂದೆಯನ್ನು ಹತ್ಯೆಗೈದ ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಪೊಲೀಸರ ಪ್ರಾಥಮಿಕ ಮಾಹಿತಿಯ ಪ್ರಕಾರ, ಮನೆ ಮಾರಾಟ ಮಾಡಿ ಹಣ ನೀಡುವಂತೆ ಬಿಂದುಕುಮಾರ್ ತಂದೆಯ ಮೇಲೆ ಒತ್ತಡ ಹಾಕುತ್ತಿದ್ದ ಎನ್ನಲಾಗಿದೆ. ಶನಿವಾರ ಬೆಳಗ್ಗೆ ಗೂರಮಾರನಹಳ್ಳಿಯಲ್ಲಿರುವ ಮನೆಗೆ ಬಂದಿದ್ದ ಆತ ಆಸ್ತಿ ಮಾರಾಟದ ವಿಚಾರವಾಗಿ ತಂದೆಯೊಂದಿಗೆ ಜಗಳವಾಡಿದ್ದಾನೆ. ಜಗಳ ತೀವ್ರಗೊಂಡ ವೇಳೆ ಮಾರಕಾಸ್ತ್ರದಿಂದ ಹಲ್ಲೆ ನಡೆಸಿ ತಂದೆಯನ್ನು ಕೊಲೆಗೈದಿದ್ದಾನೆ. ಬಳಿಕ ಮನೆಯಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಘಟನೆಯ ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
ತಂದೆಯನ್ನು ಕೊಂದು ಮಗ ನೇಣಿಗೆ ಶರಣು
















