ಶೃಂಗೇರಿ: ( ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಆನೆಗುಂದ ಸಮೀಪದ ರಾಷ್ಟ್ರೀಯ ಹೆದ್ದಾರಿಯನ್ನು ಖಾಸಗಿ ಜಾಗದಂತೆ ಬಳಸುತ್ತಿರುವ ಕುರಿತು ನ್ಯೂಸ್ ಮಲ್ನಾಡ್ ನಿನ್ನೆ ವರದಿ ಪ್ರಕಟಿಸಿತ್ತು. ವರದಿ ಬಳಿಕ ಎಚ್ಚೆತ್ತ ಅಧಿಕಾರಿಗಳು ಹೆದ್ದಾರಿ ಬದಿಯಲ್ಲಿ ರಾಶಿ ಹಾಕಲಾಗಿದ್ದ ಕಟ್ಟಡ ಸಾಮಗ್ರಿಗಳನ್ನು ತೆರವು ಮಾಡಿಸಿದ್ದಾರೆ.
ಹೆದ್ದಾರಿಯ ಅರ್ಧ ಭಾಗದಲ್ಲಿ ಕಲ್ಲು, ಜಲ್ಲಿ, ಇಟ್ಟಿಗೆ ಸೇರಿದಂತೆ ವಿವಿಧ ಕಟ್ಟಡ ಸಾಮಗ್ರಿಗಳನ್ನು ರಾಶಿ ಹಾಕಲಾಗಿದ್ದು, ಇದು ವಾಹನ ಸಂಚಾರಕ್ಕೆ ಅಡಚಣೆ ಉಂಟುಮಾಡುತ್ತಿರುವ ಕುರಿತು ನ್ಯೂಸ್ ಮಲ್ನಾಡ್ ವರದಿ ಪ್ರಕಟಿಸಿತ್ತು. ಸುದ್ದಿ ಪ್ರಸಾರವಾದ ಬಳಿಕ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಕಟ್ಟಡ ಸಾಮಗ್ರಿಗಳನ್ನು ತೆರವು ಮಾಡಿಸಿದ್ದಾರೆ.

ಆದರೆ, ಹೆದ್ದಾರಿಯ ಎರಡೂ ಬದಿಗಳಲ್ಲಿ ಖಾಸಗಿ ಬಸ್‌ಗಳು ಸೇರಿದಂತೆ ಇತರ ವಾಹನಗಳನ್ನು ಅನಧಿಕೃತವಾಗಿ ನಿಲ್ಲಿಸುವ ಸಮಸ್ಯೆ ಮಾತ್ರ ಇನ್ನೂ ಬಗೆಹರಿದಿಲ್ಲ. ಈ ಸಂಬಂಧ ವಾಹನ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಶೃಂಗೇರಿ ಪೊಲೀಸ್ ಠಾಣೆಗೆ ಕೋರಿದ್ದಾರೆ. ಆದರೂ ಹೆದ್ದಾರಿಯಲ್ಲೇ ವಾಹನಗಳನ್ನು ನಿಲ್ಲಿಸುವ ಪ್ರವೃತ್ತಿ ಮುಂದುವರಿದಿದೆ.


ಆದ್ದರಿಂದ ಸಂಬಂಧಪಟ್ಟ ಇಲಾಖೆ ಹಾಗೂ ಪೊಲೀಸರು ಸಮನ್ವಯದಿಂದ ಕಾರ್ಯನಿರ್ವಹಿಸಿ, ಹೆದ್ದಾರಿಯಲ್ಲಿ ಅನಧಿಕೃತವಾಗಿ ವಾಹನ ನಿಲ್ಲಿಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಸಾರ್ವಜನಿಕರಿಗೆ ಸುರಕ್ಷಿತ ಹಾಗೂ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸಬೇಕಾಗಿದೆ.














