ಚಿಕ್ಕಮಗಳೂರು ನಗರದ ಮಲ್ಲಂದೂರು ರಸ್ತೆಯಲ್ಲಿ ಶಾಲಾ ಬಸ್ ಚಾಲಕನನ್ನು ಹೆದರಿಸಿ ಬಲವಂತವಾಗಿ ಆಟೋರಿಕ್ಷಾದಲ್ಲಿ ಕರೆದುಕೊಂಡು ಹೋಗಿ ಹಲ್ಲೆ ನಡೆಸಿ ನಗದು ದೋಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಸವನಹಳ್ಳಿ ಪೊಲೀಸ್ ಠಾಣೆಯ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: ರೈತರಿಗೆ ಸಿಹಿ ಸುದ್ದಿ ಕೊಟ್ಟ ರಾಜ್ಯ ಸರ್ಕಾರ; ಬೆಂಬಲ ಬೆಲೆ ಯೋಜನೆಯಡಿಯಲ್ಲಿ ವಿವಿಧ ಬೆಳೆಗಳ ಖರೀದಿ ಅವಧಿ ವಿಸ್ತರಣೆ

ಜನವರಿ 17ರಂದು ನಡೆದ ಈ ಘಟನೆಯಲ್ಲಿ ಆರೋಪಿಗಳು ಶಾಲಾ ಬಸ್ ಚಾಲಕನನ್ನು ಬೆದರಿಸಿ ಆಟೋರಿಕ್ಷಾದಲ್ಲಿ ಅಪಹರಿಸಿ, ಹಲ್ಲೆ ನಡೆಸಿ ರೂ. 8,500 ನಗದು ಕಿತ್ತುಕೊಂಡು ಪರಾರಿಯಾಗಿದ್ದರು. ಈ ಕುರಿತು ದಾಖಲಾಗಿದ್ದ ದೂರಿನ ಆಧಾರದ ಮೇಲೆ ತನಿಖೆ ನಡೆಸಿದ ಬಸವನಹಳ್ಳಿ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳಿಂದ ದೋಚಿಕೊಂಡಿದ್ದ ನಗದು ಹಣವನ್ನು ಹಾಗೂ ಅಪರಾಧಕ್ಕೆ ಬಳಸಿದ್ದ ಆಟೋರಿಕ್ಷಾವನ್ನು ವಶಪಡಿಸಿಕೊಳ್ಳಲಾಗಿದೆ.
ಈ ಕಾರ್ಯಾಚರಣೆಯನ್ನು ಬಸವನಹಳ್ಳಿ ವೃತ್ತದ ಸಿಪಿಐ ಶ್ರೀ ವಿಜಯ್ ಕುಮಾರ್ ಬಿರಾದಾರ್ ಅವರ ಮಾರ್ಗದರ್ಶನದಲ್ಲಿ ಪಿಎಸ್‌ಐಗಳಾದ ಶ್ರೀ ಕೀರ್ತಿಕುಮಾರ್ ಹಾಗೂ ಶ್ರೀ ಅಜರುದ್ದೀನ್ ಮತ್ತು ಪೊಲೀಸ್ ಸಿಬ್ಬಂದಿಗಳಾದ ಶ್ರೀ ರವೀಂದ್ರ, ಶ್ರೀ ರಾಜ್ ಕುಮಾರ್, ಶ್ರೀ ಲಿಂಗಮೂರ್ತಿ, ಶ್ರೀ ಮಧುಸೂಧನ್, ಶ್ರೀ ಜಯರಾಮ ಹಾಗೂ ಶ್ರೀ ಚಂದ್ರಶೇಖರ್ ಅವರು ಯಶಸ್ವಿಯಾಗಿ ನೆರವೇರಿಸಿದ್ದಾರೆ.












