ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಸರ್ಕಾರಿ ಹೊರಗುತ್ತಿಗೆ ನೌಕರರ ಸಂಘದ ರಚನೆ, ಪದಾಧಿಕಾರಿಗಳ ಆಯ್ಕೆ ಹಾಗೂ ಕುಂದುಕೊರತೆ ಸಭೆಯನ್ನು ಶೃಂಗೇರಿ ಕನ್ನಡ ಭವನದಲ್ಲಿ ಯಶಸ್ವಿಯಾಗಿ ನಡೆಸಲಾಯಿತು.
ಇದನ್ನೂ ಓದಿ: ರೈತರಿಗೆ ಸಿಹಿ ಸುದ್ದಿ ಕೊಟ್ಟ ರಾಜ್ಯ ಸರ್ಕಾರ; ಬೆಂಬಲ ಬೆಲೆ ಯೋಜನೆಯಡಿಯಲ್ಲಿ ವಿವಿಧ ಬೆಳೆಗಳ ಖರೀದಿ ಅವಧಿ ವಿಸ್ತರಣೆ

ಈ ಸಭೆಯಲ್ಲಿ ಜಿಲ್ಲೆಯ ಅಧ್ಯಕ್ಷರಾದ ಮಂಜು (ತರೀಕೆರೆ), ಜಿಲ್ಲಾ ಉಪಾಧ್ಯಕ್ಷರಾದ ಗಿರೀಶ್ (ಶೃಂಗೇರಿ), ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ (ಕೊಪ್ಪ), ಸಂಘಟನಾ ಸಂಚಾಲಕರಾದ ಪ್ರದೀಪ್ (ಚಿಕ್ಕಮಗಳೂರು) ಹಾಗೂ ಚಿಕ್ಕಮಗಳೂರು ತಾಲೂಕಿನ ಅಧ್ಯಕ್ಷರಾದ ರಾಕೇಶ್ ಉಪಸ್ಥಿತರಿದ್ದು, ಶೃಂಗೇರಿ ತಾಲೂಕಿನ ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳನ್ನು ಆಯ್ಕೆ ಮಾಡಿದರು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾಧ್ಯಕ್ಷ ಮಂಜು ಅವರು, ಹೊರಗುತ್ತಿಗೆ ಪದ್ಧತಿಯನ್ನು ಸಂಪೂರ್ಣವಾಗಿ ರದ್ದುಪಡಿಸಿ, ನೌಕರರಿಗೆ ಸೇವಾ ಭದ್ರತೆ, ಕನಿಷ್ಠ ವೇತನ ಹಾಗೂ ಅಗತ್ಯ ಸೌಲಭ್ಯಗಳನ್ನು ಒದಗಿಸುವುದೇ ಸಂಘದ ಮೂಲ ಉದ್ದೇಶ ಎಂದು ಹೇಳಿದರು.
ಜಿಲ್ಲಾ ಉಪಾಧ್ಯಕ್ಷ ಗಿರೀಶ್ ಅವರು ಮಾತನಾಡಿ, ಹೊರಗುತ್ತಿಗೆ ಪದ್ಧತಿಯಿಂದ ನೌಕರರು ಅನೇಕ ರೀತಿಯ ಶೋಷಣೆಗೆ ಒಳಗಾಗುತ್ತಿದ್ದಾರೆ. ಸಕಾಲದಲ್ಲಿ ವೇತನ ದೊರೆಯದೆ ಜೀವನ ಕಷ್ಟಕರವಾಗಿದೆ. ದಿನನಿತ್ಯದ ವಸ್ತುಗಳ ಬೆಲೆ ಏರಿಕೆಯಾಗುತ್ತಿದ್ದರೂ ಕನಿಷ್ಠ ವೇತನ ಪರಿಷ್ಕರಣೆ ಆಗಿಲ್ಲ. ಜಿಎಸ್ಟಿ ಕಡಿತಗೊಂಡರೂ ವೇತನ ಹೆಚ್ಚಳವಾಗಿಲ್ಲ. ಸುಪ್ರೀಂ ಕೋರ್ಟ್ 2028ರೊಳಗೆ ಹೊರಗುತ್ತಿಗೆ ಪದ್ಧತಿ ರದ್ದುಪಡಿಸಲು ಸೂಚಿಸಿದ್ದರೂ, ರಾಜ್ಯ ಸರ್ಕಾರ ಬೀದರ್ ಮಾದರಿ ಸಹಕಾರಿ ಸಂಘ ರಚನೆಗೆ ಮುಂದಾಗಿದ್ದು, ಇದು ನೌಕರರ ಭವಿಷ್ಯಕ್ಕೆ ಮಾರಕವಾಗಿದೆ ಎಂದು ಹೇಳಿದರು. ಇದನ್ನು ಈಗಾಗಲೇ ರಾಜ್ಯಾಧ್ಯಕ್ಷ ಸುಧಾಕರ್ ವಿರೋಧಿಸಿದ್ದು, ಸೇವಾ ಭದ್ರತೆ ಮತ್ತು ಸೌಲಭ್ಯಗಳಿಗಾಗಿ ಎಲ್ಲಾ ನೌಕರರು ಒಗ್ಗಟ್ಟಾಗಿ ಹೋರಾಡಬೇಕು ಎಂದರು.
ಸಂಘಟನಾ ಸಂಚಾಲಕ ಪ್ರದೀಪ್ ಸಂಘದ ರೂಪುರೇಷೆಗಳ ಕುರಿತು ಮಾಹಿತಿ ನೀಡಿ, ನ್ಯಾಯ ಸಿಗಬೇಕಾದರೆ ಸಂಘವನ್ನು ಬಲಪಡಿಸಬೇಕು ಎಂದು ಹೇಳಿದರು. ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ ಅವರು ಇಎಸ್ಐ, ಇಪಿಎಫ್ ಕುರಿತು ಸಂಪೂರ್ಣ ಮಾಹಿತಿ ನೀಡಿ, ಅದರ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.
ನೂತನ ಅಧ್ಯಕ್ಷ ಅಣ್ಣಪ್ಪ ಮಾತನಾಡಿ, ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿ ಸಂಘವನ್ನು ಬಲಿಷ್ಠಗೊಳಿಸೋಣ ಎಂದು ಕರೆ ನೀಡಿದರು. ಈ ಸಂಧರ್ಭದಲ್ಲಿ ಜಿಲ್ಲಾಧ್ಯಕ್ಷರನ್ನು ಅಭಿನಂದಿಸಲಾಯಿತು.
ಶೃಂಗೇರಿ ತಾಲೂಕಿನ ಸರ್ಕಾರಿ ಹೊರಗುತ್ತಿಗೆ ನೌಕರರ ಸಂಘದ ನೂತನ ಅಧ್ಯಕ್ಷರಾಗಿ ಅಣ್ಣಪ್ಪ, ಉಪಾಧ್ಯಕ್ಷರು ಸುಮಿತ್ರಾ (ಬಿಸಿಎಂ ಹಾಸ್ಟೆಲ್), ಪ್ರಧಾನ ಕಾರ್ಯದರ್ಶಿಗಳು ಪ್ರದೀಪ್ (ರೆವೆನ್ಯೂ), ಅಶ್ವಲ್ (ರೆವೆನ್ಯೂ) ಸಹ ಕಾರ್ಯದರ್ಶಿಗಳು ಸಂದೇಶ, ಶರತ್ (ಪಶುಸಂಗೋಪನೆ), ಸಂಘಟನಾ ಸಂಚಾಲಕರು ರಾಜೇಶ್ (ಸೋಶಿಯಲ್ ವೆಲ್ಫೇರ್), ಸುರೇಶ್ (ಮೆಸ್ಕಾಂ)ಖಜಾಂಚಿ – ವಿದ್ಯಾ (ಟಿಪಿಎಸ್) ಹಾಗೂ ಸಲಹಾ ಸಮಿತಿಯ ಸದಸ್ಯರಾಗಿ ರೇಖಾ (ಸಮಾಜ ಕಲ್ಯಾಣ ಇಲಾಖೆ), ಜಯಶೀಲ, ಪವಿತ್ರ (ಬಿಸಿಎಂ), ಕವನ, ಸುನಿತಾ (ಕೃಷಿ ಇಲಾಖೆ), ಸೀಮಾ (ತೋಟಗಾರಿಕೆ), ಜಯಂತಿ, ಅಶ್ವಿನ್ (ಹಾಸ್ಪಿಟಲ್), ರವಿಕುಮಾರ್ (ಕೋರ್ಟ್), ನವೀನ್, ನಿತ್ಯಾನಂದ (ಅರಣ್ಯ ಇಲಾಖೆ), ವಿದ್ಯಾ (ಟಿಪಿಎಸ್), ಪ್ರಿಯ (ಡಿಗ್ರಿ ಕಾಲೇಜು), ಭಾಗ್ಯ (ಪಿಡಬ್ಲ್ಯುಡಿ), ಆಶ್ರಯ (ಹೈವೇ) ಆಯ್ಕೆಯಾಗಿದ್ದಾರೆ.












