ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಸೊಪ್ಪಿನಬೆಟ್ಟ ಜಾಗ ಮಂಜೂರಾತಿ ಪ್ರಕ್ರಿಯೆಯನ್ನು ತಡೆಹಿಡಿದಿರುವುದನ್ನು ಖಂಡಿಸಿ ಹಾಗೂ ರೈತರು ಮತ್ತು ಸಾರ್ವಜನಿಕರ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರಲು ಮಲೆನಾಡು ನಾಗರಿಕ ಹಕ್ಕುಗಳ ಹೋರಾಟ ಸಮಿತಿಯ ನೇತೃತ್ವದಲ್ಲಿ ಸೋಮವಾರ ಶೃಂಗೇರಿ ತಾಲ್ಲೂಕು ಕಚೇರಿ ಮುಂಭಾಗ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ರೈತರು ಮತ್ತು ಸಾರ್ವಜನಿಕರು ರಸ್ತೆ ತಡೆ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಸ್ಥಳಕ್ಕೆ ತಹಸೀಲ್ದಾರ್ ಹಾಗೂ ಜಿಲ್ಲಾಧಿಕಾರಿ ಆಗಮಿಸಿ ಸಮಸ್ಯೆಗೆ ಸ್ಪಷ್ಟ ಭರವಸೆ ನೀಡಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಸೊಪ್ಪಿನಬೆಟ್ಟ ಪ್ರದೇಶವು ಬ್ರಿಟಿಷರ ಕಾಲದಿಂದಲೂ ರೈತರಿಗೆ ಸಂಬಂಧಿಸಿದ ಜಾಗವಾಗಿದ್ದು, 1867ರಲ್ಲಿ ಬ್ರಿಟಿಷ್ ಸರ್ಕಾರ ರೈತರಿಗೆ ಸೊಪ್ಪು, ಧರಗು ಹಾಗೂ ಮಣ್ಣು ಪಡೆಯುವ ಹಕ್ಕು ನೀಡಿತ್ತು. ಬಳಿಕ 1869ರಲ್ಲಿ ಪ್ರತಿ ಎಕರೆಗೆ ನಾಲ್ಕು ಆಣೆ ಕರ ವಿಧಿಸಿ ಜಾಗ ಬಳಕೆಗೆ ಅಧಿಕೃತ ಹಕ್ಕು ನೀಡಲಾಗಿತ್ತು. ಹೀಗಿರುವಾಗ ರೈತರಿಗೆ ಇದ್ದ ಐತಿಹಾಸಿಕ ಹಕ್ಕುಗಳನ್ನು ಈಗಿನ ಸರ್ಕಾರಗಳು ಕಸಿದುಕೊಳ್ಳಲು ಮುಂದಾಗಿರುವುದು ಖಂಡನೀಯ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಅಂದಿನ ಜಿಲ್ಲಾಧಿಕಾರಿಯ ಆದೇಶದಂತೆ ಸೊಪ್ಪಿನಬೆಟ್ಟ ಪ್ರದೇಶವನ್ನು ಅರಣ್ಯ ಕಾಯ್ದೆಯ ಸೆಕ್ಷನ್ 4(1) ಅಡಿಯಲ್ಲಿ ಸೇರಿಸಿರುವುದರಿಂದ ಮನೆ ಜಾಗ ಹಾಗೂ ಒತ್ತುವರಿ ಜಾಗಗಳ ಮಂಜೂರಾತಿ ಪ್ರಕ್ರಿಯೆ ಸಂಪೂರ್ಣ ಸ್ಥಗಿತಗೊಂಡಿದೆ. ಹೆಸರೇ ಸೂಚಿಸುವಂತೆ ಸೊಪ್ಪು ಸಂಗ್ರಹಿಸುವ ಉದ್ದೇಶಕ್ಕಾಗಿ ಬಳಸುತ್ತಿದ್ದ ಈ ಜಾಗವನ್ನು ಅರಣ್ಯ ಪ್ರದೇಶವೆಂದು ಪರಿಗಣಿಸಿರುವುದು ರೈತರಿಗೆ ಅನ್ಯಾಯವಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.
ಕಾನೂನಿಗೆ ತಿದ್ದುಪಡಿ ತಂದು ಸೊಪ್ಪಿನಬೆಟ್ಟ ಜಾಗಗಳ ಮಂಜೂರಾತಿಗೆ ತಕ್ಷಣ ಅವಕಾಶ ಕಲ್ಪಿಸಬೇಕು. ಅಲ್ಲದೆ ಸುಮಾರು 10 ಸಾವಿರ ಹೆಕ್ಟೇರ್ ಜಾಗವನ್ನು ಮಂಜೂರಾತಿಗೆ ಬಿಡುಗಡೆ ಮಾಡುವವರೆಗೆ ಅರಣ್ಯ ಇಲಾಖೆಯ ಮುಂದಿನ ಎಲ್ಲ ಪ್ರಕ್ರಿಯೆಗಳನ್ನು ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿದರು.
ಅರಣ್ಯ ಇಲಾಖೆ ಅಧಿಕಾರಿಗಳು ತಮ್ಮ ಅಧಿಕಾರ ಬಳಸಿ ರೈತರು ಹಾಗೂ ಸಾರ್ವಜನಿಕರಿಗೆ ಭರವಸೆ ನೀಡಬೇಕು. ಇಲ್ಲವಾದಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.












