ಅಜ್ಜಂಪುರ: (ನ್ಯೂಸ್ ಮಲ್ನಾಡ್ ವರದಿ) ಅರಣ್ಯ ಇಲಾಖೆಯ ಅಧಿಕಾರಿಯಂತೆ ನಟಿಸಿ ದಂಪತಿಯನ್ನು ನಂಬಿಸಿ, ಸುಮಾರು ₹70 ಸಾವಿರ ಮೌಲ್ಯದ ಚಿನ್ನಾಭರಣಗಳನ್ನು ದೋಚಿರುವ ಘಟನೆ ಅಜ್ಜಂಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಭಕ್ತನಕಟ್ಟೆ ಗ್ರಾಮದ ಮಹಿಳೆಯೊಬ್ಬರು ಮೇ 21ರಂದು ತಮ್ಮ ಪರಿಚಯಸ್ಥ ಮಹೇಶ್ ಅವರೊಂದಿಗೆ ಬೈಕ್ನಲ್ಲಿ ಹೊಸದುರ್ಗಕ್ಕೆ ತೆರಳುತ್ತಿದ್ದರು. ಮಧ್ಯಾಹ್ನ 12.30ರ ಸುಮಾರಿಗೆ ಭೂತನಹಳ್ಳಿ ವೀರಭದ್ರೇಶ್ವರ ದೇವಸ್ಥಾನದ ಸಮೀಪ ರಸ್ತೆ ಬದಿಯ ಮರದ ನೆರಳಿನಲ್ಲಿ ಕುಳಿತು ಉಪಾಹಾರ ಸೇವಿಸುತ್ತಿದ್ದ ವೇಳೆ ಅಪರಿಚಿತ ವ್ಯಕ್ತಿಯೊಬ್ಬ ಅಲ್ಲಿಗೆ ಬಂದಿದ್ದಾನೆ. ತಾನು ಅರಣ್ಯ ಇಲಾಖೆಯ ಅಧಿಕಾರಿ ಎಂದು ಹೇಳಿಕೊಂಡ ಆತ, ನಕಲಿ ಗುರುತಿನ ಚೀಟಿಯೊಂದನ್ನು ತೋರಿಸಿ, “ಇಲ್ಲಿ ಕುಳಿತಿದ್ದರೆ ಕಳ್ಳರು ನಿಮ್ಮ ಚಿನ್ನಾಭರಣ ಕಿತ್ತುಕೊಂಡು ಹೋಗಬಹುದು. ಒಡವೆಗಳನ್ನು ಬಿಚ್ಚಿ ನನಗೆ ಕೊಡಿ, ನೀವು ಹಿಂದಿರುಗುವಾಗ ವಾಪಸ್ ನೀಡುತ್ತೇನೆ” ಎಂದು ನಂಬಿಸಿದ್ದಾನೆ.

ಆತನ ಮಾತುಗಳನ್ನು ನಂಬಿದ ಮಹಿಳೆ 5 ಗ್ರಾಂ ತೂಕದ ಬಂಗಾರದ ಮಾಂಗಲ್ಯ, ತಲಾ 1 ಗ್ರಾಂ ತೂಕದ ಎರಡು ಚಿನ್ನದ ಗುಂಡುಗಳು ಹಾಗೂ 6 ಗ್ರಾಂ ತೂಕದ ಒಂದು ಜೋಡಿ ಓಲೆ ಸೇರಿದಂತೆ ಒಟ್ಟು ಸುಮಾರು ₹70 ಸಾವಿರ ಮೌಲ್ಯದ ಚಿನ್ನಾಭರಣಗಳನ್ನು ಬಿಚ್ಚಿ ಕೊಟ್ಟಿದ್ದಾರೆ. ಒಡವೆಗಳನ್ನು ಕೈಗೆ ಪಡೆದ ಖದೀಮ ಅಲ್ಲಿಂದ ಬೈಕ್ನಲ್ಲಿ ಪರಾರಿಯಾಗಿದ್ದಾನೆ. ವಂಚನೆ ಅರಿತ ಮಹಿಳೆ ಮೇ 30ರಂದು ಅಜ್ಜಂಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ.












