ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ತಾಲೂಕಿನ ಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆರೆಗಡ್ಡೆ ಪ್ರದೇಶದಲ್ಲಿ ಮತ್ತೆ ಕಾಡಾನೆ ಕಾಣಿಸಿಕೊಂಡಿದ್ದು, ಗ್ರಾಮಸ್ಥರಲ್ಲಿ ಆತಂಕ ಹೆಚ್ಚಿಸಿದೆ. ಕಳೆದ ಕೆಲ ತಿಂಗಳ ಹಿಂದೆ ಇದೇ ಪ್ರದೇಶದಲ್ಲಿ ಕಾಡಾನೆ ದಾಳಿ ನಡೆದಿದ್ದು, ಅದರ ನೆನಪು ಮಾಸುವ ಮುನ್ನವೇ ಮತ್ತೆ ಅದೇ ಸ್ಥಳದಲ್ಲಿ ಕಾಡಾನೆ ಸುತ್ತಾಡುತ್ತಿರುವುದು ಜನರ ನಿದ್ದೆಗೆಡಿಸಿದೆ.
ಗ್ರಾಮಸ್ಥರು ಜೀವ ಕೈಯಲ್ಲಿ ಹಿಡಿದು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಸಂಜೆ ಹಾಗೂ ರಾತ್ರಿ ವೇಳೆಯಲ್ಲಿ ಮನೆಗಳಿಂದ ಹೊರಬರಲು ಭಯಪಡುವಂತಾಗಿದೆ. ಅರಣ್ಯ ಇಲಾಖೆ ತಕ್ಷಣ ಕ್ರಮ ಕೈಗೊಂಡು ಶಾಶ್ವತ ಪರಿಹಾರ ನೀಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

ಕಳೆದ ವರ್ಷ ಇಬ್ಬರನ್ನ ಬಲಿ ಪಡೆದಿದ್ದ ಕಾಡಾನೆ:
ಕಳೆದ ವರ್ಷ ಕೆರೆಕಟ್ಟೆ ಸಮೀಪ ಕಾಡಾನೆ ದಾಳಿಯಲ್ಲಿ ಇಬ್ಬರು ಮೃತಪಟ್ಟ ಘಟನೆ ನಡೆದಿತ್ತು. ಆ ವೇಳೆ ಕಾಡಾನೆಯನ್ನು ಸೆರೆಹಿಡಿಯಲು ದುಬಾರೆ ಶಿಬಿರದಿಂದ ನಾಲ್ಕು ಸಾಕಾನೆಗಳನ್ನು ಕರೆಸಿ ಕಾರ್ಯಾಚರಣೆ ನಡೆಸಲಾಗಿತ್ತು. ಆದರೆ ಇದೀಗ ಮತ್ತೆ ಅದೇ ಭಾಗದಲ್ಲಿ ಕಾಡಾನೆ ಕಾಣಿಸಿಕೊಂಡಿದ್ದು, ಗ್ರಾಮಸ್ಥರಲ್ಲಿ ಭೀತಿ ಮೂಡಿಸಿದೆ.












