ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಮಲೆನಾಡು ಎಂದೊಂಡನೆ ಎಲ್ಲರ ಕಣ್ಣೆದುರು ಬರುವುದು ಇಲ್ಲಿನ ರಮಣೀಯ ಪ್ರಕೃತಿ ಸೌಂದರ್ಯ. ಇಲ್ಲಿನ ಸುಂದರ ಪರಿಸರಕ್ಕೆ ಮನಸೋಲದವರೇ ಇಲ್ಲ. ಪಟ್ಟಣಗಳಿಂದ ಅಪರೂಪಕ್ಕೆ ಪ್ರವಾಸ ಬರುವವರಿಗೆ ಮಲೆನಾಡು ಭೂಲೋಕದ ಸ್ವರ್ಗವೇ ಸರಿ. ಆದರೆ, ಮೂಲ ಸೌಕರ್ಯಗಳ ಕೊರತೆಯ ನಡುವೆ ವಾಸಿಸುವವರಿಗೆ ಮಲೆನಾಡು ನಿತ್ಯ ನರಕದಂತೆ ಭಾಸವಾಗುವುದು ಸುಳ್ಳಲ್ಲ.
ಇದನ್ನೂ ಓದಿ; ಈ ಪಟ್ಟಿಯಲ್ಲಿರುವ ರೈತರ ಖಾತೆಗೆ ಬೆಳೆ ಪರಿಹಾರ ಜಮಾ; ನಿಮ್ಮ ಹೆಸರು ಇದ್ಯಾ ಚೆಕ್ ಮಾಡಿ

ದೇಶಕ್ಕೆ ಸ್ವಾತಂತ್ರ‍್ಯ ಬಂದು 78 ವರ್ಷ ಕಳೆದರೂ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದ ತರುವೆ ಗ್ರಾಮ ವ್ಯಾಪ್ತಿಯ ಸುರೇಶ್ ನಾಯ್ಕ್ ಕುಟುಂಬ ಮಾತ್ರ ಹೊಳೆ ದಾಟಲು ಸೇತುವೆ ಇಲ್ಲದೆ ಕಾಲುಸಂಕದಲ್ಲಿ ಜೀವ ಕೈಯಲ್ಲಿ ಹಿಡಿದು ಓಡಾಡುತ್ತಿದ್ದಾರೆ. ತರುವೆ ಗ್ರಾಮ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತಿರುವ ಹೇಮಾವತಿಯ ಉಪ ನದಿಯಾದ ಸೋಮಾವತಿ, ಮಳೆಗಾಲದಲ್ಲಿ ತುಂಬಿ ಹರಿದು ಹೇಮಾವತಿ ಸೇರುತ್ತದೆ. ಆ ಹಳ್ಳದ ಮತ್ತೊಂದು ಮಗ್ಗಲಿನಲ್ಲಿ ಸುರೇಶ್ ನಾಯ್ಕ್ ಕುಟುಂಬ ಅನೇಕ ವರ್ಷದಿಂದ ಸೂರು ಕಟ್ಟಿಕೊಂಡು ಜೀವನ ನಡೆಸುತ್ತಿದ್ದು, ಅಪಾಯಕಾರಿ ಕಾಲುಸಂಕ (ಮರದದಿಮ್ಮಿಯ ಜೋಡಣೆ) ದಾಟಿ ಮನೆ ಸೇರುವುದು ಇವರಿಗೆ ಅನಿವಾರ್ಯತೆಯಾಗಿದೆ.

ಇದನ್ನೂ ಓದಿ; 31 ಸಾವಿರ ರೈತರ 232 ಕೋಟಿ ಸಾಲಮನ್ನಾ; ಯಾವ ರೈತರ ಎಷ್ಟು ಸಾಲಮನ್ನಾ ಆಗಿದೆ, ಹೀಗೆ ಚೆಕ್ ಮಾಡಿ
ಮೂರು ವರ್ಷದಿಂದ ನಮಗೆ ಕಿರು ಸೇತುವೆ ಮಾಡಿಕೊಡಿ ಎಂದು ಸರ್ಕಾರಿ ಅಧಿಕಾರಿಗಳಿಗೂ, ಶಾಸಕರಿಗೂ ಮನವಿ ಸಲ್ಲಿಸಿದ್ದೇವೆ ಆದರೂ ಯಾವುದೇ ಪ್ರಯೋಜನವಾಗಿಲ್ಲ- ಸುರೇಶ್ ನಾಯ್ಕ್, ಸಂತ್ರಸ್ತ, ಕೊಟ್ಟಿಗೆಹಾರ.
ತುಂಬಿ ಹರಿಯುವ ಸೋಮಾವತಿ ಹಳ್ಳವನ್ನು ದಾಟಿ ಆಚೇಗಿನ ಕೃಷಿ ಭೂಮಿಯಲ್ಲಿ ಸಾಗುವಳಿ ಮಾಡಲು ಅನುಕೂಲ ಇಲ್ಲದ ಕಾರಣಕ್ಕೆ ನೂರಾರು ಎಕರೆ ಫಲವತ್ತಾದ ಗದ್ದೆಗಳು ಕೃಷಿ ಮಾಡದೇ ಪಾಳು ಬಿಟ್ಟು ಬರಡಾಗಿವೆ. ಈ ಪ್ರದೇಶಕ್ಕೆ ರಸ್ತೆ ಸಂಪರ್ಕ ಕಲ್ಪಿಸಲು ಜನಪ್ರತಿನಿಧಿಗಳಿಗೆ, ಶಾಸಕರಿಗೆ ಮೂರು ವರ್ಷದಿಂದ ಸುರೇಶ್ ಕುಟುಂಬ ಮನವಿ ಮಾಡುತ್ತಲೇ ಬಂದಿದ್ದಾರೆ. ಆದರೂ ಕಾಲುಸಂಕ ಮಾತ್ರ ಬದಲಾಗಿಲ್ಲ. ಪರಿಶಿಷ್ಟ ಪಂಗಡದ ಕುಟುಂಬಕ್ಕೆ ಮೂಲಭೂತ ಸಂಪರ್ಕದ ಆಸರೆ ಸಿಗದೇ ಪರದಾಡುವಂತಾಗಿದೆ. ಸಂಬಂಧಿಸಿದ ಅಧಿಕಾರಿಗಳು ಇನ್ನಾದರೂ ಈ ಕುಟುಂಬದ ಸಮಸ್ಯೆ ಬಗೆಹರಿಸಬೇಕಿದೆ.

ಇದನ್ನೂ ಓದಿ; ಸಿಎಂ ವಿರುದ್ಧ ಪ್ರಾಸಿಕ್ಯುಷನ್’ಗೆ ಅನುಮತಿ!; ಪ್ರಾಸಿಕ್ಯೂಷನ್ ಅಂದ್ರೆ ಏನು?; ಇದರಿಂದ ಸಿಎಂ’ಗೆ ಕಾದ ಗಂಡಾಂತರವೇನು?
ಸುರೇಶ್ ನಾಯ್ಕ್ ಅವರು ಸೇತುವೆಯಿಲ್ಲದೇ ಕಾಲು ಸಂಕ ಮಾಡಿ ಮನೆಗೆ ಸೇರುತ್ತಿರುವ ವಿಚಾರವನ್ನು ತಾಲ್ಲೂಕು ಆಡಳಿತ ಗಮನಕ್ಕೆ ತರಲಾಗಿದೆ. ಶಾಸಕರು ಕೂಡ ಕಾಲು ಸಂಕದ ಬಗ್ಗೆ ಮಾಹಿತಿ ಪಡೆದಿದ್ದು ಸಮಸ್ಯೆ ಶೀಘ್ರ ಬಗೆಹರಿಯಲಿದೆ- ಬಿ. ಎಂ ಸತೀಶ್, ಅಧ್ಯಕ್ಷ, ತರುವೆ ಗ್ರಾ.ಪಂ.
(ವರದಿ- ತನು ಕೊಟ್ಟಿಗೆಹಾರ)













