ಎನ್. ಆರ್. ಪುರ: (ನ್ಯೂಸ್ ಮಲ್ನಾಡ್ ವರದಿ) ಮುಂಗಾರುಪೂರ್ವ ಮಳೆಯ ಅಬ್ಬರದ ನಡುವೆ ಗುಡುಗು-ಸಿಡಿಲಿನ ಆರ್ಭಟಕ್ಕೆ ದಂಪತಿಯೊಬ್ಬರು ಗಾಯಗೊಂಡ ಘಟನೆ ನರಸಿಂಹರಾಜಪುರ ತಾಲೂಕಿನ ಸೀಗುವಾನಿ ಗ್ರಾಮದಲ್ಲಿ ನಡೆದಿದೆ. ಮಂಜುನಾಥ ಹಾಗೂ ಮಮತಾ ಗಾಯಗೊಂಡ ದಂಪತಿ.
ಇವರು ಎನ್.ಆರ್.ಪುರ ಪಟ್ಟಣದಿಂದ ತಮ್ಮ ಮನೆಗೆ ಹಿಂತಿರುಗುತ್ತಿದ್ದ ವೇಳೆ ಹಠಾತ್ ಮಳೆ ಸುರಿದ ಹಿನ್ನೆಲೆಯಲ್ಲಿ ಸೀಗುವಾನಿ ಗ್ರಾಮದ ಬಸ್ ತಂಗುದಾಣದಲ್ಲಿ ಆಶ್ರಯ ಪಡೆದಿದ್ದರು. ದಂಪತಿ ಬಸ್ ತಂಗುದಾಣದಲ್ಲಿ ನಿಂತಿದ್ದ ಸಂದರ್ಭದಲ್ಲೇ ಅದರ ಪಕ್ಕದಲ್ಲಿ ಸಿಡಿಲು ಅಪ್ಪಳಿಸಿದೆ. ಸಿಡಿಲು ನೇರವಾಗಿ ತಗುಲದ ಕಾರಣ ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಸಿಡಿಲಿನ ತೀವ್ರತೆಗೆ ಸಣ್ಣಪುಟ್ಟ ಗಾಯಗಳಾಗಿವೆ.

ಗಾಯಾಳುಗಳಿಗೆ ತಕ್ಷಣವೇ ಎನ್.ಆರ್.ಪುರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.














