ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಬೀಗ ಹಾಕಿದ್ದ ಮನೆಯ ಹಿಂಬಾಗಿಲು ಮುರಿದು ಒಳನುಗ್ಗಿದ ಕಳ್ಳರು ಚಿನ್ನಾಭರಣ ಹಾಗೂ ನಗದು ಕಳವು ಮಾಡಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಕೆ.ಬಿ. ಹಾಳ್ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ನಿವಾಸಿ ಕಮಲಮ್ಮ ಅವರು ಮೇ 19ರಂದು ತಮ್ಮ ಸೊಸೆಯೊಂದಿಗೆ ಹಬ್ಬದ ನಿಮಿತ್ತ ಬೇಲೂರು ತಾಲೂಕಿನ ಹಳೇಬೀಡು ಹೋಬಳಿಯ ಸಾಣೇನಹಳ್ಳಿಯಲ್ಲಿರುವ ಸೊಸೆಯ ತವರುಮನೆಗೆ ತೆರಳಿದ್ದರು. ಮೇ 24ರಂದು ಬೆಳಗ್ಗೆ ಪಕ್ಕದ ಮನೆಯಲ್ಲೇ ವಾಸವಾಗಿರುವ ಹಿರಿಯ ಪುತ್ರ ಯೋಗೀಶ್ ಮನೆ ಬಾಗಿಲು ಮುರಿದಿರುವುದನ್ನು ಗಮನಿಸಿ ಕಮಲಮ್ಮ ಅವರಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದಾರೆ.

ತಕ್ಷಣ ಮನೆಗೆ ಬಂದ ಕಮಲಮ್ಮ ಪರಿಶೀಲಿಸಿದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ಕಳ್ಳರು ಮನೆಯೊಳಗೆ ನುಗ್ಗಿ ಕಬ್ಬಿಣದ ಬೀರುವಿನ ಬಾಗಿಲನ್ನು ಯಾವುದೋ ಆಯುಧದಿಂದ ಮೀಟಿ ಮುರಿದು, ಲಾಕರ್ನಲ್ಲಿದ್ದ ₹38 ಸಾವಿರ ಮೌಲ್ಯದ 7 ಗ್ರಾಂ ಚಿನ್ನಾಭರಣ, ₹2 ಸಾವಿರ ಮೌಲ್ಯದ ಎರಡು ಜೊತೆ ಬೆಳ್ಳಿಯ ಕಾಲು ಚೈನ್ ಹಾಗೂ ದಿವಾನ್ ಕಾಟ್ ಮಾದರಿಯ ಬಾಕ್ಸ್ನಲ್ಲಿ ಬಟ್ಟೆಯೊಳಗೆ ಇಟ್ಟಿದ್ದ ₹35 ಸಾವಿರ ನಗದನ್ನು ದೋಚಿದ್ದಾರೆ.
ಒಟ್ಟು ₹75 ಸಾವಿರ ಮೌಲ್ಯದ ಸ್ವತ್ತು ಕಳುವಾಗಿದ್ದು, ಆರೋಗ್ಯ ಸಮಸ್ಯೆಯಿಂದ ಕಮಲಮ್ಮ ಅವರು ತಡವಾಗಿ ಠಾಣೆಗೆ ಬಂದು ದೂರು ನೀಡಿದ್ದಾರೆ. ಈ ಸಂಬಂಧ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.












