ಗೋಣಿಕೊಪ್ಪಲು: (ನ್ಯೂಸ್ ಮಲ್ನಾಡ್ ವರದಿ) ಬಾಳೆಲೆ ಸಮೀಪದ ನಿಟ್ಟೂರು ಜಾಗಲೆ ಗ್ರಾಮದ ಕೃಷಿಕ ಅಳಮೇಂಗಡ ಬೋಸ್ ಮಂದಣ್ಣ ಅವರ ಕೆರೆಯಲ್ಲಿ ಬೃಹತ್ ಗಾತ್ರದ ಮೊಸಳೆಯೊಂದು ಕಾಣಿಸಿಕೊಂಡಿದೆ.
ಲಕ್ಷ್ಮಣತೀರ್ಥ ನದಿ ದಡದಲ್ಲಿರುವ ತಮ್ಮ ಜಮೀನಿನಲ್ಲಿ ಬೋಸ್ ಮಂದಣ್ಣ ಅವರು ಮನೆಯ ಸಮೀಪವೇ ಮೂರು ವಿಶಾಲ ಕೆರೆಗಳನ್ನು ನಿರ್ಮಿಸಿಕೊಂಡಿದ್ದು, ಬೇಸಿಗೆ ಸಂದರ್ಭದಲ್ಲಿ ಈ ಕೆರೆಗಳ ನೀರನ್ನು ಕಾಫಿ ಹಾಗೂ ಅಡಿಕೆ ತೋಟಗಳಿಗೆ ಬಳಸಿಕೊಳ್ಳುತ್ತಿದ್ದಾರೆ. ಇದರೊಂದಿಗೆ ಮೀನು ಸಾಕಾಣಿಕೆಯನ್ನೂ ಕೈಗೊಂಡಿದ್ದರು.

ಮೀನು ಕೃಷಿಕರಿಂದ ಸುಮಾರು 35 ಸಾವಿರ ರೂಪಾಯಿ ಮೌಲ್ಯದ ಮೀನು ಮರಿಗಳನ್ನು ಖರೀದಿಸಿ ಕೆರೆಯಲ್ಲಿ ಸಾಕಿದ್ದ ಅವರು, ಉತ್ತಮ ಪೋಷಣೆಯಿಂದ ಬೆಳೆದಿದ್ದ ಮೀನುಗಳನ್ನು ಮಾರಾಟ ಮಾಡಲು ಸಿದ್ಧತೆ ನಡೆಸಿದ್ದರು. ಆದರೆ ಈ ನಡುವೆ ಕೆರೆಗೆ ನುಗ್ಗಿರುವ ಬೃಹತ್ ಮೊಸಳೆ ಬಹುತೇಕ ಮೀನುಗಳನ್ನು ಆಹಾರವನ್ನಾಗಿ ಮಾಡಿಕೊಂಡಿದೆ.

ಕೆರೆಯಲ್ಲಿ ಮೊಸಳೆ ಕಾಣಿಸಿಕೊಂಡಿರುವುದು ಸುತ್ತಮುತ್ತಲಿನ ನಿವಾಸಿಗಳ ಆತಂಕಕ್ಕೂ ಕಾರಣವಾಗಿದೆ. ಲಕ್ಷ್ಮಣತೀರ್ಥ ನದಿಯಿಂದ ಮೊಸಳೆ ಕೆರೆಗೆ ಬಂದಿರುವ ಸಾಧ್ಯತೆ ಇದ್ದು, ಅರಣ್ಯ ಇಲಾಖೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
















