ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ತಾಲೂಕಿನ ಸೂರುಗುಪ್ಪೆ ಪ್ರದೇಶದ ಕಾಫಿ ತೋಟದ ಶೆಡ್ ಒಂದರಲ್ಲಿ ಅಕ್ರಮವಾಗಿ ಗೋವುಗಳನ್ನು ಹತ್ಯೆ ಮಾಡಿ ಮಾಂಸವನ್ನು ಪಾಲು ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಚಿಕ್ಕಮಗಳೂರು ಗ್ರಾಮಾಂತರ ಠಾಣೆ ಪೊಲೀಸರು ದಿಢೀರ್ ದಾಳಿ ನಡೆಸಿದ್ದು, 110 ಕೆಜಿ ಗೋಮಾಂಸವನ್ನು ವಶಪಡಿಸಿಕೊಂಡಿದ್ದಾರೆ.
ಪೊಲೀಸರು ಸ್ಥಳಕ್ಕೆ ಆಗಮಿಸುತ್ತಿದ್ದಂತೆಯೇ ಅಲ್ಲಿದ್ದ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ದಾಳಿಯ ವೇಳೆ ಶೆಡ್ನಲ್ಲಿ ಗೋಮಾಂಸವನ್ನು ಸಂಗ್ರಹಿಸಿ ಪಾಲು ಮಾಡುತ್ತಿರುವುದು ಪತ್ತೆಯಾಗಿದ್ದು, ಪೊಲೀಸರು ಸ್ಥಳದಲ್ಲಿದ್ದ ಸುಮಾರು 110 ಕೆಜಿ ಗೋಮಾಂಸವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, ಈ ಅಕ್ರಮ ಕೃತ್ಯವು ಮುಕ್ಕಲ್ ಎಂಬುವರಿಗೆ ಸೇರಿದ ಕಾಫಿ ತೋಟದ ಶೆಡ್ನಲ್ಲಿ ನಡೆಯುತ್ತಿತ್ತು ಎನ್ನಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ. ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗಾಗಿ ವಿಶೇಷ ತಂಡಗಳನ್ನು ರಚಿಸಿ ಶೋಧ ಕಾರ್ಯ ಕೈಗೊಳ್ಳಲಾಗಿದೆ.
ಈ ಸಂಬಂಧ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












