
ಎನ್. ಆರ್. ಪುರ: (ನ್ಯೂಸ್ ಮಲ್ನಾಡ್ ವರದಿ) ತಾಲೂಕಿನ ಮುತ್ತಿನಕೊಪ್ಪ ಗ್ರಾಮದ ಶಂಕರಪುರದಲ್ಲಿ ಹಾಡು ಹಗಲೇ ಕಳ್ಳರು ಮನೆಯ ಬಾಗಿಲು ಮುರಿದು ಮನೆಯ ಒಳಗೆ ಇದ್ದ 67 ಗ್ರಾಂ ಬಂಗಾರದ ಒಡವೆಯನ್ನು ಕಳ್ಳತನ ಮಾಡಿದ ಘಟನೆ ಮಂಗಳವಾರ ಮದ್ಯಾಹ್ನ ನಡೆದಿದೆ.
ಶಂಕರಪುರದ ಸುಗಂಧಿ ಎಂಬುವರು ತಮ್ಮ ಮೊಮ್ಮಗಳ ಜೊತೆ ವಾಸವಾಗಿದ್ದಳು. ಮದುವೆ ಮಾಡಿಕೊಟ್ಟಿದ್ದ ಅವರ ಎರಡನೇ ಮಗಳು ಇತ್ತೀಚಿಗೆ ಊರಿಗೆ ಬಂದಿದ್ದರು. ಮಗಳ ಜೊತೆ ಮಂಗಳವಾರ ಮದ್ಯಾಹ್ನ 11 ಗಂಟೆಗೆ ಮನೆಗೆ ಬೀಗ ಹಾಕಿ ಎನ್. ಆರ್. ಪುರ ಪಟ್ಟಣದ ಕೆನರಾ ಬ್ಯಾಂಕಿಗೆ ಹೋಗಿ ವಾಪಾಸು ಶಂಕರಪುರದ ಅವರ ಮನೆಗೆ ಬಂದು ನೋಡಿದಾಗ ಮನೆಯ ಮುಂಬಾಗಿಲಿನ ಲಾಕ್ ಮುರಿಯಲಾಗಿತ್ತು. ಮನೆಯ ಒಳಗೆ ಹೋಗಿ ನೋಡಿದಾಗ ಬೆಡ್ ರೂಂ ನುಗ್ಗಿದ ಕಳ್ಳರು ಗಾಡ್ರೇಜ್ ಬೀರಿನ ಬೀಗ ಮುರಿದು ಬೀರಿನಲ್ಲಿದ್ದ ಬಟ್ಟೆಯನ್ನು ಕಿತ್ತು ಹಾಕಿದ್ದರು. ಮತ್ತೊಂದು ಬೆಡ್ ರೂಂನ ಗಾಡ್ರೇಜ್ ಬೀರು ಸಹ ಮುರಿದು 7 ಗ್ರಾಂ ತೂಕದ ಬಂಗಾರದ ಓಲೆಯನ್ನು ಕಳ್ಳತನ ಮಾಡಿರುವುದು ಕಂಡು ಬಂದಿದೆ.
ಅದೇ ಕೊಠಡಿಯಲ್ಲಿ ವ್ಯಾನಿಟಿ ಬ್ಯಾಗಿನಲ್ಲಿ ಇಟ್ಟಿದ್ದ 40 ಗ್ರಾಂ ತೂಕದ ಬಂಗಾರದ ತಾಳಿ ಸರ, 20 ಗ್ರಾಂ ತೂಕದ ಬಂಗಾರದ ಚೈನು ಸರ ಸಹ ಕಳ್ಳತನ ಆಗಿರುವುದು ಗೊತ್ತಾಗಿದೆ. ಒಟ್ಟು 67 ಗ್ರಾಂ ತೂಕದ 6 ಲಕ್ಷ 70 ಸಾವಿರ ರುಪಾಯಿ ಬಂಗಾರ ಕಳುವಾಗಿದೆ ಎಂದು ಶಂಕರಪುರದ ಸುಗಂಧಿ ಅವರು ಪೊಲೀಸರಿಗೆ ದೂರು ನೀಡಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ( ವರದಿ- ಗುರು ಎಂ. ಸಿ)
















