
ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲೆ ಮತ್ತು ವಿವಿಧ ಜಿಲ್ಲೆಗಳ ದೇವಸ್ಥಾನಗಳಲ್ಲಿ ನಗದು, ಚಿನ್ನ ಮತ್ತು ಬೆಳ್ಳಿ ಕಳವು ಮಾಡಿದ ಇಬ್ಬರು ಆರೋಪಿಗಳನ್ನು ಶೃಂಗೇರಿ ಪೊಲೀಸ್ ಠಾಣೆ ಸಿಬ್ಬಂದಿ ಬಂಧಿಸಿ, ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
ತಾಲ್ಲೂಕಿನ ಮರ್ಕಲ್ ಗ್ರಾಮ ಪಂಚಾಯಿತಿಯ ಕೊಚ್ಚಾರ್ ಲಕ್ಷ್ಮೀನರಸಿಂಹ ದೇವಸ್ಥಾನ, ಮೆಣಸೆ ಗ್ರಾಮ ಪಂಚಾಯಿತಿಯ ಕನ್ಯಾಕುಮಾರಿ ದೇವಸ್ಥಾನದಲ್ಲಿ ಕಳವು ಮಾಡಿದ್ದ ಮಂಜುನಾಥ್ (ಕಾಳೇನಹಳ್ಳಿ ಮಂಜು) ಹಾಗೂ ತಿಪ್ಪೇಶ್ ಆರೋಪಿಗಳು.

ನಾಲ್ಕು ಪ್ರಕರಣದಲ್ಲಿ ಆರೋಪಿಯಾಗಿರುವ ಮಂಜುನಾಥ ಮೂಡಿಗೆರೆಯ ಬಣಕಲ್‌ನ ದುರ್ಗಾಪರಮೇಶ್ವರಿ ದೇವಸ್ಥಾನ, ಬೇಲೂರಿನ ಶೆಟ್ಟಿಗೆರೆ ಗ್ರಾಮದ ದೇವಿರಮ್ಮ ದೇವಸ್ಥಾನದಲ್ಲಿ ಕಳವು ಮಾಡಿದ ಆರೋಪ ಹೊತ್ತಿದ್ದಾನೆ.ಮೂರು ಪ್ರಕರಣಗಳಲ್ಲಿ ಮಂಜುನಾಥ ಒಬ್ಬನೇ ಆರೋಪಿಯಾಗಿದ್ದು, ಕೊಚ್ಚಾರ್ ದೇವಸ್ಥಾನದಲ್ಲಿ ಇನ್ನೊರ್ವ ಆರೋಪಿ ತಿಪ್ಪೇಶ್‌ನ ಸಹಕಾರ ಪಡೆದಿದ್ದ.

ಆರೋಪಿಯಿಂದ ಒಂದು ಮೊಬೈಲ್, ಮಾರುತಿ 800 ಕಾರು, ಮೋಟಾರ್ ಬೈಕ್, 4.200 ಕೆಜಿ ಬೆಳ್ಳಿ, 1 ಗ್ರಾಂ 600 ಮಿಲಿ ಚಿನ್ನ ಹಾಗೂ ಕೃತ್ಯಕ್ಕೆ ಬಳಸಿದ ಕಬ್ಬಿಣದ ರಾಡನ್ನು ವಶಕ್ಕೆ ಪಡೆಯಲಾಗಿದೆ. ವಶಕ್ಕೆ ಪಡೆಯಲಾದ ವಸ್ತುಗಳ ಮೌಲ್ಯ ₹11 ಲಕ್ಷ ಎಂದು ಅಂದಾಜಿಸಲಾಗಿದೆ.
ಕೊಚ್ಚಾರ್ ದೇವಸ್ಥಾನದಲ್ಲಿ ಕಳುವು ಮಾಡಿದ ಸಂದರ್ಭದಲ್ಲಿ ಆರೋಪಿಯ ಬೆರಳಚ್ಚು ದೊರಕಿದ್ದು, ಇದನ್ನು ತನಿಖೆಗೆ ಒಳಪಡಿಸಿದ್ದು, 2014ರಲ್ಲಿ ಕಳವು ಮಾಡಿದ್ದ ಆರೋಪಿಯಾಗಿರುವುದು ದೃಢಪಟ್ಟಿದೆ. ಮನೆಗಳ್ಳತನ, ಕೇಬಲ್ ಕಳವು ಮಾಡಿದ್ದ ಆರೋಪಿ ಮಂಜುನಾಥ, ನಿಜಾಮುದ್ದೀನ್ ಹೆಸರಿನಲ್ಲಿ ಕಳ್ಳತನ ಮಾಡುತ್ತಿದ್ದ. ಆರೋಪಿ ಶೃಂಗೇರಿಗೆ ಬರುತ್ತಿದ್ದ ಸಂದರ್ಭದಲ್ಲಿ ಕುಂಚೇಬೈಲಿನಲ್ಲಿ ವಶಕ್ಕೆ ಪಡೆದಿದ್ದರು. ಆರೋಪಿಯು ಚಿನ್ನ ಹಾಗೂ ಬೆಳ್ಳಿಯನ್ನು ಶಿವಮೊಗ್ಗದ ವ್ಯಾಪಾರಿಗೆ ಮಾರಾಟ ಮಾಡಿದ್ದ.
ಜಿಲ್ಲಾ ಪೊಲೀಸ್ ವರಿಷ್ಠಧಿಕಾರಿ ಜಿತೇಂದ್ರ ಕುಮಾರ್ ದಯಾಮ, ಸಿ.ಟಿ.ಜಯಕುಮಾರ್, ಡಿವೈಎಸ್‌ಪಿ ಬಾಲಾಜಿ ಸಿಂಗ್ ಮಾರ್ಗದರ್ಶನದಲ್ಲಿ ಸ್ಥಳೀಯ ಠಾಣೆ ಇನ್‌ಸ್ಪೆಕ್ಟರ್ ಅಬ್ದುಲ್ ಖಾದರ್, ಸಬ್ ಇನ್‌ಸ್ಪೆಕ್ಟರ್ ಅಭಿಷೇಕ್ ನೇತೃತ್ವದಲ್ಲಿ ಸಿಬ್ಬಂದಿ ನಾಗರಾಜ್, ರಜಿತ್, ಕುಮಾರ್, ಸುನಿಲ್‌ಕುಮಾರ್, ಪ್ರಸನ್ನ ಕುಮಾರ್, ಪರಮೇಶ್, ಪ್ರದೀಪ್, ನಯಾಜ್ ಅಜುಂ, ಅಬ್ದುಲ್ ರಬ್ಬಾನಿ, ರೂಪ, ಅಕ್ಷತಾ ಕಾರ್ಯಾಚರಣೆ ನಡೆಸಿದ್ದರು.
















