ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಅರಣ್ಯ ಇಲಾಖೆಯ ಐಬಿ ಎದುರಿನ ಖಾಸಗಿ ಗ್ಯಾರೇಜ್ ಆವರಣದಲ್ಲಿ ಅಕ್ರಮವಾಗಿ ಗಾಂಜಾ ಬೆಳೆಸಿದ್ದ ಆರೋಪಿಯನ್ನು ಅಬಕಾರಿ ಇಲಾಖೆ ಅಧಿಕಾರಿಗಳು ಬಂಧಿಸಿದ್ದು, ಗಾಂಜಾ ಗಿಡವನ್ನು ವಶಕ್ಕೆ ಪಡೆದಿದ್ದಾರೆ.
ಚಿಕ್ಕಮಗಳೂರು-ಮೂಡಿಗೆರೆ ರಾಷ್ಟ್ರೀಯ ಹೆದ್ದಾರಿಯ ಮತ್ತಾವರ ಅರಣ್ಯ ಇಲಾಖೆ ಕಚೇರಿ ಎದುರಿನ ಖಾಸಗಿ ಕಂಪನಿಯ ಗ್ಯಾರೇಜ್ ಆವರಣದಲ್ಲಿ ಗಾಂಜಾ ಬೆಳೆದಿರುವ ಕುರಿತು ದೊರೆತ ಖಚಿತ ಮಾಹಿತಿಯ ಮೇರೆಗೆ ಅಬಕಾರಿ ಇಲಾಖೆ ಸಿಬ್ಬಂದಿ ದಾಳಿ ನಡೆಸಿದರು.

ಈ ವೇಳೆ ಮುಸೈಫ್ ಎಂಬಾತನನ್ನು ಬಂಧಿಸಿ, ಗ್ಯಾರೇಜ್ ಹಿಂಭಾಗದಲ್ಲಿ ಬೆಳೆಸಲಾಗಿದ್ದ ಗಾಂಜಾ ಗಿಡವನ್ನು ವಶಕ್ಕೆ ಪಡೆಯಲಾಯಿತು. ಆರೋಪಿ ಇದೇ ಗ್ಯಾರೇಜ್‌ನಲ್ಲಿ ಕೆಲಸ ಮಾಡುತ್ತಿದ್ದು, ಯಾರಿಗೂ ಅನುಮಾನ ಬಾರದಂತೆ ಹಿಂಭಾಗದ ಜಾಗದಲ್ಲಿ ಗಾಂಜಾ ಗಿಡವನ್ನು ಪೋಷಿಸುತ್ತಿದ್ದ ಎನ್ನಲಾಗಿದೆ.

ವಶಪಡಿಸಿಕೊಳ್ಳಲಾದ ಗಾಂಜಾ ಗಿಡವು ಸುಮಾರು ನಾಲ್ಕು ಅಡಿಗೂ ಹೆಚ್ಚು ಎತ್ತರಕ್ಕೆ ಬೆಳೆದಿದ್ದು, ದಟ್ಟವಾಗಿ ಬೆಳವಣಿಗೆ ಕಂಡಿತ್ತು. ಗಿಡವು ಇಷ್ಟೊಂದು ದೊಡ್ಡದಾಗಿ ಬೆಳೆದಿದ್ದರೂ ಅದು ಗಾಂಜಾ ಎಂಬುದು ಗ್ಯಾರೇಜ್‌ನ ಇತರ ಸಿಬ್ಬಂದಿಗೆ ತಿಳಿದಿರಲಿಲ್ಲ ಎನ್ನಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಅಬಕಾರಿ ಪೊಲೀಸರು ಆರೋಪಿಯನ್ನು ಬಂಧಿಸಿ, ಗಾಂಜಾ ಗಿಡವನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.













