
ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ತಾಲೂಕಿನ ಹಳಿಯೂರು ಗ್ರಾಮದಲ್ಲಿ ನಿನ್ನೆ ಸಂಜೆ ಭಾರೀ ಗಾಳಿ-ಮಳೆ ಹಾಗೂ ಸಿಡಿಲಿನ ಅಬ್ಬರಕ್ಕೆ ಧರ್ಮೇಶ್ ಅವರಿಗೆ ಸೇರಿದ ಕಾಫಿ ತೋಟದಲ್ಲಿದ್ದ ಸುಮಾರು 100 ಅಡಿ ಎತ್ತರದ ಹಳೆಯ ಮರಕ್ಕೆ ಸಿಡಿಲು ಬಡಿದು, ಮರ ಸಂಪೂರ್ಣವಾಗಿ ಬೆಂಕಿ ಹೊತ್ತಿಕೊಂಡಿದೆ.
ಮಳೆಯ ನಡುವೆಯೂ ಮರ ಬೆಂಕಿಗಾಹುತಿಯಾಗಿದ್ದು, ಗಾಳಿಯ ರಭಸಕ್ಕೆ ಮರದಿಂದ ಹೊರಬಿದ್ದ ಬೆಂಕಿಯ ಕಿಡಿಗಳು ಎಲ್ಲೆಡೆ ಹಾರುತ್ತಿರುವ ದೃಶ್ಯ ಕಂಡುಬಂದಿದೆ. ಆ ಕಿಡಿಗಳು ಮಿಂಚು ಹುಳುವಿನಂತೆ ಹೊಳೆಯುತ್ತಿದ್ದು, ದೃಶ್ಯವನ್ನು ಸ್ಥಳೀಯರು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ.
ಹತ್ತಾರು ವರ್ಷ ಹಳೆಯ ಈ ದೊಡ್ಡ ಮರ ಸಿಡಿಲಿನ ಅಘಾತಕ್ಕೆ ಹೊತ್ತಿ ಉರಿದಿದ್ದು, ಪ್ರಕೃತಿಯ ಭೀಕರತೆಯ ಜೊತೆಗೆ ಅಚ್ಚರಿ ಹುಟ್ಟಿಸುವ ದೃಶ್ಯವೂ ಸಾಕ್ಷಿಯಾಗಿದೆ. ಘಟನೆಯಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.
















